ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ “ದೇವರೆ ದೇವರೆ…’ ವಿಡಿಯೋ ಹಾಡು ಈಗಾಗಲೇ ಬಿಡುಗಡೆಯಾಗಿ ಎಲ್ಲೆಡೆ ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಆ ನಂತರ ಪುನೀತ್‌ರಾಜಕುಮಾರ್ ಅವರು ಹಾಡಿದ “ಏನು ಸ್ವಾಮಿ ಮಾಡೋಣ..’ ಹಾಡಿಗೂ ಒಳ್ಳೆಯ ಮೆಚ್ಚುಗೆ ಸಿಕ್ಕಾಗಿದೆ. ಈಗ ಚಿತ್ರದ ಟ್ರೇಲರ್ ಸರದಿ. ಹೌದು, ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾ ಆಗಿದ್ದು, ಹಾಸ್ಯಪ್ರಿಯರಿಗೊಂದು ಒಳ್ಳೆಯ ಅವಕಾಶವಿದು.
ಅಂದಹಾಗೆ, ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಿ, ಯು/ಎ ಪ್ರಮಾಣ ಪತ್ರ ನೀಡಿದೆ. ಇದೊಂದು ಎರಡೇ ದಿನದಲ್ಲಿ ನಡೆಯುವ ಕಥೆಯಾಗಿದ್ದು, ಎಲ್ಲರಿಗೂ ತಮ್ಮ ಬದುಕಲ್ಲಿ ಒಂದು ಒಳ್ಳೆಯ ಅವಕಾಶ ಸಿಗುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಯಾವ ರೀತಿ ಲೈಫ್ನಲ್ಲಿ ಸುವರ್ಣಾವಕಾಶ ಪಡೆಯುತ್ತಾನೆ ಅನ್ನುವ ಕಥೆ ಇಲ್ಲಿದೆ. ನಾಯಕ, ನಾಯಕಿ ಒಂದು ಹಂತದಲ್ಲಿ ಸಮಸ್ಯೆಗೆ ಸಿಲುಕುತ್ತಾರೆ. ಅದರಿಂದ ಹೊರಬರಲು ಹಣದ ಅಗತ್ಯ ಇರುತ್ತೆ. ಅದಕ್ಕೆ ಏನು ಮಾಡ್ತಾನೆ, ಆ ತೊಂದರೆಯಿಂದ ಹೊರಬರುತ್ತಾರೋ, ಇಲ್ಲವೋ ಅನ್ನುವುದೇ ಸಾರಾಂಶ.
ಚಿತ್ರಕ್ಕೆ ರಿಷಿ ಹೀರೋ. ಎಂಬಿಎ ಪದವೀಧರನಾಗಿರುವ ಅವರು, ತನ್ನ ತಂದೆ ಮಾಡಿದ ಸಾಲವನ್ನು ತೀರಿಸೋಕೆ ಒಂದು ಬಂಪರ್ ಅವಕಾಶ ಸಿಗುತ್ತೆ ಅಂತ ಅದರ ಹಿಂದೆ ಹೊರಡುತ್ತಾನೆ. ಅಲ್ಲೊಂದಷ್ಟು ಗೊಂದಲ ಎದುರಾಗುತ್ತೆ. ಅದನ್ನು ಹಾಸ್ಯಮಯವಾಗಿ ತೋರಿಸಲಾಗಿದೆ. ಇನ್ನು, ಧನ್ಯಾರಾಮಕೃಷ್ಣ ನಾಯಕಿಯಾಗಿದ್ದಾರೆ. ಕನ್ನಡದ ಹುಡುಗಿಯಾಗಿದ್ದರೂ, ಹಿಂದೆ ಪರಭಾಷೆ ಚಿತ್ರಗಳಲ್ಲಿ ನಟಿಸಿದ್ದಾರೆ. ಇದು ಅವರ ಮೊದಲ ಕನ್ನಡ ಚಿತ್ರ. ಇನ್ನು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ದತ್ತಣ್ಣ, ಶಾಲಿನಿ, ಮಿತ್ರ, ರಂಗಾಯಣ ರಘು, ಸಿದ್ದು ಮೂಲಿಮನೆ, ಆಶಿಕಾ, ಆನಂದ್ ಸೇರಿದಂತೆ ಇತರರು ನಟಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತವಿದೆ.
ಅನೂಪ್ ನಿರ್ದೇಶನದ ಚಿತ್ರಕ್ಕೆ ಜನಾರ್ಧನ್‌ಚಿಕ್ಕಣ್ಣ-ಹರಿಕೃಷ್ಣ ಕಥೆ ಬರೆದಿದ್ದಾರೆ. ವಿಘ್ನೇಶ್‌ರಾಜ್ ಛಾಯಾಗ್ರಹಣವಿದೆ. ಪ್ರಶಾಂತ್ ರೆಡ್ಡಿ, ದೇವರಾಜ್ ರಾಮಣ್ಣ ಮತ್ತು ಜನಾರ್ಧನ್‌ಚಿಕ್ಕಣ್ಣ ನಿರ್ಮಾಣವಿದೆ. ಈ ಚಿತ್ರವನ್ನು ಡಿಸೆಂಬರ್ 20 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದು, ಸುಮಾರು 80 ಪ್ಲಸ್ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇನ್ನು, ಹೈದರಾಬಾದ್, ಚೆನ್ನೈ, ಪೂನಾ ಕಡೆಗಳಲ್ಲೂ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ನಿರ್ಮಾಪಕ ಪ್ರಶಾಂತ್.