ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಈ ಬಾರಿಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಸಾಕಷ್ಟು ಪುರಪಿತೃಗಳು ಸ್ಪರ್ಧಿಸಿದರೂ, ಗೆಲುವು ಪಡೆಯಲು ಸಾಧ್ಯವಾಗಿದ್ದು ಒಬ್ಬರಿಗೆ ಮಾತ್ರ. ವಿಧಾನಸಭಾ ಚುನಾವಣೆಯಲ್ಲಿ ಮೇಯರ್, ಮಾಜಿ ಮೇಯರ್ ಮೂವರು ಹಾಲಿ ಪಾಲಿಕೆ ಸದಸ್ಯರು ಕಣದಲ್ಲಿದ್ದರು.
ಜತೆಗೆ ಇಬ್ಬರು ಮಾಜಿ ಉಪಮೇಯರ್‌ಗಳು, ನಾಲ್ಕು ಮಂದಿ ಮಾಜಿ ಕಾರ್ಪೊರೇಟರ್‌ಗಳು ಸ್ಪರ್ಧಿಸುವ ಮೂಲಕ ಪಾಲಿಕೆಯಿಂದ ವಿಧಾನಸಭೆ ಪ್ರವೇಶ ಕನಸು ಕಂಡಿದ್ದರು. ಆದರೆ, ಕೆ.ಆರ್.ಪುರ ಪಾಲಿಕೆ ಸದಸ್ಯೆ ಆರ್.ಪೂರ್ಣಿಮಾ ಹೊರತುಪಡಿಸಿ ಉಳಿದ ಯಾವುದೇ ಸದಸ್ಯರಿಗೆ ಜಯ ಸಿಕ್ಕಿಲ್ಲ.
ಸಿ.ವಿ.ರಾಮನ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೇಯರ್ ಆರ್.ಸಂಪತ್‌ರಾಜ್ ಹಾಗೂ ರಾಜಾಜಿನಗರ ಕ್ಷೇತ್ರದ ಕಣದಲ್ಲಿದ್ದ ಮಾಜಿ ಮೇಯರ್ ಜಿ.ಪದ್ಮಾವತಿ ಪರಾಭವಗೊಂಡಿದ್ದು, ಬಿಟಿಎಂ ಬಡಾವಣೆಯಿಂದ ಸ್ಪರ್ಧಿಸಿದ್ದ ಜೆಡಿಎಸ್ ಪಾಲಿಕೆ ಸದಸ್ಯ ದೇವದಾಸ್ ಸಹ ಸೋತಿದ್ದಾರೆ.
ಇನ್ನು ಶಾಂತಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಾಜಿ ಉಪಮೇಯರ್ ಕೆ.ವಾಸುದೇವ ಮೂರ್ತಿ, ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮಾಜಿ ಉಪಮೇಯರ್ ಎಂ.ಲಕ್ಷ್ಮೀ ನಾರಾಯಣ್ ಹಾಗೂ ಮಾಜಿ ಕಾರ್ಪೊರೇಟರ್‌ಗಳಾದ ಎಚ್.ರವೀಂದ್ರ, ಶಾಂತಿನಗರದ ಜೆಡಿಎಸ್ ಅಭ್ಯರ್ಥಿ ಶ್ರೀಧರ್‌ರೆಡ್ಡಿ ಅವರಿಗೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.
ಪಾಲಿಕೆ ಮೇಲೆ ಯಾವುದೇ ಪರಿಣಾಮವಿಲ್ಲ: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 26 ವಿಧಾನಸಭಾ ಕ್ಷೇತ್ರಗಳ ಫಲಿತಾಂಶವು ಬಿಬಿಎಂಪಿ ಮುಂದಿನ ಮೇಯರ್ ಚುನಾವಣೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 12 ಹಾಗೂ ಜೆಡಿಎಸ್ 03 ಸ್ಥಾನಗಳನ್ನು ಹೊಂದಿತ್ತು. ಇದೀಗ 26 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 12 ಸ್ಥಾನ ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಪಡೆದುಕೊಂಡಿರುವುದರಿಂದ ಮುಂದಿನ ಮೇಯರ್ ಚುನಾವಣೆಯ ಮೇಲೆ ಸದ್ಯಕ್ಕೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.