ದಿಗಂತ್ ನಾಯಕರಾಗಿ “ಫಾರ್ಚೂನರ್’ ಎಂಬ ಸಿನಿಮಾ ಸೆಟ್ಟೇರಿದ ವಿಚಾರವನ್ನು ನೀವು ಕೇಳಿರಬಹುದು. ನಂತರ ಆ ಚಿತ್ರ ಏನಾಯಿತೆಂಬ ಬಗ್ಗೆ ಮಾಹಿತಿಯೇ ಇರಲಿಲ್ಲ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅದರ ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆದಿದೆ. ಸಹಜವಾಗಿ ಸಿನಿಮಾದ ಟೈಟಲ್ ಕೇಳಿದಾಗ ಇದು ಫಾರ್ಚೂನರ್ ಕಾರಿನ ಸುತ್ತ ಸುತ್ತುವ ಕಥೆಯೇ ಎಂಬ ಭಾವನೆ ಬರದೇ ಇರದು.
ಆದರೆ, ಕಾರಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿನ ಕಥೆ ನಾಯಕನ ಬದುಕಿನ ಅದೃಷ್ಟದ ಸುತ್ತ ಸುತ್ತುತ್ತದೆಯಂತೆ. ಮಂಜುನಾಥ್ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ರಾಜೇಶ್ ಗೊಲೋಚ, ದಿಲೀಪ್ ಗೊಲೋಚ, ಭರತ್ ಗೊಲೋಚ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದಲ್ಲಿ ಹಣ, ಅಂತಸ್ತು, ಅಹಂಕಾರದಿಂದ ಪ್ರೀತಿ ಪಡೆಯಲು ಸಾಧ್ಯವಿಲ್ಲ. ಗುಣ, ನಿಯತ್ತು ಹಾಗೂ ಶ್ರಮದಿಂದ ಮಾತ್ರ ಇದನ್ನು ಪಡೆಯಲು ಸಾಧ್ಯ ಎಂಬುದನ್ನು ಈ ಚಿತ್ರದಲ್ಲ ಹೇಳಲು ಹೊರಟಿದ್ದಾರಂತೆ.
ಇಲ್ಲಿ ಅದೃಷ್ಟ ನಾಯಕನ ಕೈ ಹಿಡಿಯುತ್ತಾ, ಕೈ ಕೊಡುತ್ತಾ ಎಂಬ ಅಂಶದೊಂದಿಗೆ ಕಥೆ ಸಾಗುತ್ತದೆಯಂತೆ. ಚಿತ್ರದಲ್ಲಿ ದಿಗಂತ್ ಶ್ರೀಮಂತ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಶಾಸಕನ ಮಗನಾಗಿ ಕಾಣಿಸಿಕೊಂಡಿರುವ ಅವರು, ಕಷ್ಟ, ಶ್ರಮದಿಂದ ಯಶಸ್ಸು ಸಿಕ್ಕಾಗ ಮಾತ್ರ ಬದುಕು ಹಸನಾಗಿರುತ್ತದೆ ಎಂದು ಸಂದೇಶ ಕೊಡುವ ಪಾತ್ರದಲ್ಲಿ ನಟಿಸಿದ್ದಾರಂತೆ. ಈ ಚಿತ್ರದಲ್ಲಿ ದಿಗಂತ್ ಬಿಂದಾಸ್ ಸ್ಟೆಪ್ ಕೂಡಾ ಹಾಕಿದ್ದಾರಂತೆ.
ನಾಯಕಿ ಸೋನುಗೌಡಗೆ ಇಲ್ಲಿ ಬೋಲ್ಡ್ ಪಾತ್ರ ಸಿಕ್ಕಿದೆಯಂತೆ. ನೆಗೆಟಿವ್ ಶೇಡ್ ಇರುವ ಪಾತ್ರವಾದರೂ ವಿಭಿನ್ನವಾಗಿದೆಯಂತೆ. ಸ್ವಾತಿ ಶರ್ಮಾ ಈ ಸಿನಿಮಾದಲ್ಲಿ ಮತ್ತೂಬ್ಬ ನಾಯಕಿ. ಇಲ್ಲಿ ಅವರು ಉತ್ತರ ಕರ್ನಾಟಕದ ಹುಡುಗಿಯಾಗಿ ನಟಿಸಿದ್ದಾರೆ. ಉಳಿದಂತೆ ನವೀನ್ ಕೃಷ್ಣ, ರಾಜೇಶ್ ನಟರಂಗ, ಕಲ್ಯಾಣಿ ನಟಿಸಿದ್ದಾರೆ. ಚಿತ್ರಕ್ಕೆ ಎಂ.ಎಸ್.ನರಸಿಂಹಮೂರ್ತಿ ಸಂಭಾಷಣೆ, ಪೂರ್ಣಚಂದ್ರ ತೇಜಸ್ವಿ ಸಂಗೀತ, ಮಧುಸೂದನ್ ಛಾಯಾಗ್ರಹಣ, ಗುರುಸ್ವಾಮಿ ಸಂಕಲನವಿದೆ.