ಮೈಸೂರು: ದೇಶದ ಬಹುತೇಕ ಕಾನೂನುಗಳು ಉತ್ತಮವಾಗಿದ್ದರೂ, ಅನುಷ್ಠಾನಗೊಂಡ ಕೆಲವೇ ವರ್ಷಗಳಲ್ಲಿ ತಿದ್ದುಪಡಿಯಾಗಿ ಮೂಲೆಗುಂಪಾಗುತ್ತಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ ಹೇಳಿದರು.
ಕುವೆಂಪು ನಗರದಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 10ನೇ ಪದವಿ ದಿನಾಚರಣೆಯಲ್ಲಿ ರ್‍ಯಾಂಕ್ ಪಡೆದವರಿಗೆ ಪದವಿ ಹಾಗೂ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ದೇಶದಲ್ಲಿ ಅನೇಕ ಹೊಸ ಕಾನೂನುಗಳು ಸಮಾಜದ ಸ್ವಾಸ್ಥ ಕಾಪಾಡಲು ಹಾಗೂ ಜನರ ಅನುಕೂಲಕ್ಕಾಗಿ ಜಾರಿಯಾಗುತ್ತವೆ.
ಆದರೆ ಬಹುತೇಕ ಕಾನೂನುಗಳು ಜಾರಿಗೊಂಡು ಅನುಷ್ಠಾನಗೊಳ್ಳುವ ಕೆಲವೇ ವರ್ಷ ಅಥವಾ ತಿಂಗಳ ಮೊದಲೇ ತಿದ್ದುಪಡಿ ಆಗುತ್ತಿರುವುದು ದುರಾದೃಷ್ಟಕರ ಸಂಗತಿ. ದೇಶದ ಅನೇಕರು ಸಂವಿಧಾನದಿಂದ ತಮಗೆ ದೊರೆಯುವ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಆದರೆ ಮೂಲ ಕರ್ತವ್ಯ ಹಾಗೂ ಅವುಗಳ ಪಾಲನೆಯ ಬಗ್ಗೆ ಯಾರೊಬ್ಬರೂ ಚಿಂತಿಸುವುದಿಲ್ಲ. ಆದರೆ ದೇಶದ ಜನತೆ ತಮ್ಮ ಹಕ್ಕನ್ನು ಪಡೆಯುವ ಜತೆಗೆ ಕರ್ತವ್ಯಗಳನ್ನು ಸಹ ತಪ್ಪದೇ ಪಾಲಿಸಬೇಕೆಂದು ಹೇಳಿದರು.
ತಂತ್ರಜ್ಞಾನ ಬಳಿಸಿಕೊಳ್ಳಿ: ಆಧುನಿಕ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಎಲ್ಲಾ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳು ಕ್ಷಣದಲ್ಲೇ ಅಂಗೈಯಲ್ಲಿಯೇ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಸಮಾಜದ ಎಲ್ಲಾ ವಿಷಯಗಳ ಬಗ್ಗೆ ಅರಿಯಬೇಕು. ಕಾನೂನು ವಿದ್ಯಾರ್ಥಿಗಳು ನಿತ್ಯವೂ ಹೊಸ ವಿಷಯಗಳನ್ನು ಕಲಿಯಬೇಕು. ಶ್ರದ್ಧೆ ಹಾಗೂ ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಿದಾಗ ನ್ಯಾಯ ಒದಗಿಸಲು ಸಾಧ್ಯ ಎಂದು ತಿಳಿಸಿದರು.
ರ್‍ಯಾಂಕ್ ಪಡೆದವರು: ಬಿಬಿಎಎಲ್‌ಎಲ್‌ಬಿ ವಿಭಾಗದಲ್ಲಿ ಜಿ.ಅನುಷಾ(1), ಅಭಿನವ್ ಸಿವಾಚ್(2), ಕೀರ್ತಮ ರಮೇಶ್(3), ಸುಜಿ ಚೆರಿಯನ್(4), ಸಲೋನಿಕ ವಿನಿತಾ ಮೊನಿಸ್(5). ಬಿಎಎಲ್‌ಎಲ್‌ಬಿ ವಿಭಾಗದಲ್ಲಿ ಸೈಯದ್ ಕುದ್ರತ್ (1), ಪಾತಿಮತ್ ಶುವೈನ (2), ಮುಟ್ಸೆಕಡೊಮೊ ಜಿಕಮೈ ಟಿನೆಶೆ (3), ಶ್ರೀನಿವಾಸ ಪಾಟೀಲ್ (4). ಎಲ್‌ಎಲ್‌ಬಿ ವಿಭಾಗದಲ್ಲಿ ಭವ್ಯಾ ಬಿ.ಚೆಂಗಪ್ಪ(1), ಎಂ.ಸಿ.ದೇಚಮ್ಮ (2), ಎಸ್.ಪಿ.ಆದಿತ್ಯರಾವ್(3), ಪಿ.ದುರೈಸ್ವಾಮಿ (4), ಎನ್.ಗೀತಾ (4). ಎಲ್‌ಎಲ್‌ಎಂ ವಿಭಾಗದಲ್ಲಿ ಆಲ್ಟ್ರ್ಟ್ ಮೇನ (1), ಇಂದುಲೇಖ ಮನೋಜ್ (2).
ಸಮಾರಂಭದಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಪ್ರಾಂಶುಪಾಲ ಪ್ರಭುಸ್ವಾಮಿ, ಡಾ.ಕೆ.ಸುರೇಶ್ ಇತರರು ಇದ್ದರು.
ದೇಶದಲ್ಲಿರುವ ಭ್ರಷ್ಟಾಚಾರ ನಿಯಂತ್ರಿಸಲು ಲೋಕಾಯುಕ್ತ ಸಂಸ್ಥೆಯಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರ ಅಗತ್ಯ. ಯುವಪೀಳಿಗೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಜೋಡಿಸಬೇಕು. ಈ ಹಿಂದೆ ವಕೀಲ ವೃತ್ತಿಗೆ ಅಷ್ಟೊಂದು ಬೇಡಿಕೆ ಇರಲಿಲ್ಲ, ಈಗ ಬೇಡಿಕೆ ಹೆಚ್ಚಾಗಿದೆ. ಕಾನೂನು ವ್ಯಾಸಂಗ ಮಾಡುವವರ ಸಂಖ್ಯೆ ದ್ವಿಗುಣವಾಗಿದೆ.
-ನ್ಯಾ.ಪಿ.ವಿಶ್ವನಾಥ ಶೆಟ್ಟಿ, ಕರ್ನಾಟಕ ಲೋಕಾಯುಕ್ತ