Advertisement

ಒಳ್ಳೆಯ ಉದ್ದೇಶ ಪ್ರಯತ್ನ ವಿಫ‌ಲ

11:12 AM Nov 03, 2018 | Team Udayavani |

ಅಚಾನಕ್ಕಾಗಿ ಸಿಗುವ “ಕನ್ನಡ ದೇಶದೊಳ್‌’ ಎಂಬ ಪುರಾತನ ತಾಳೆಗರಿ ಗ್ರಂಥದಲ್ಲಿ ಕನ್ನಡ ನಾಡು-ನುಡಿ, ಜನ-ಮನಕ್ಕೆ ಸಂಬಂಧಿಸಿದ ಹತ್ತಾರು ಸಂಗತಿಗಳು ಅಡಕವಾಗಿರುತ್ತದೆ. ಈ ನಿಗೂಢ ಸಂಗತಿಗಳ ಅಧ್ಯಯನಕ್ಕೆ ಇಳಿಯುವ ಕನ್ನಡ ಸಂಶೋಧಕ ಒಂದೊಂದೆ ದೃಶ್ಯದಲ್ಲಿ ಗ್ರಂಥದ ಅಸಲಿಯತ್ತನ ತೆರೆದಿಡುತ್ತಾ ಹೋಗುತ್ತಾನೆ. ಇದರ ನಡುವೆಯೇ ಕರ್ನಾಟಕವನ್ನು ಕಣ್ತುಂಬಿಕೊಳ್ಳಲು ಇಂಗ್ಲೆಂಡ್‌ನಿಂದ ಬರುವ ಪ್ರವಾಸಿ ಜೋಡಿಯೊಂದಕ್ಕೆ, ಆಟೋರಿಕ್ಷಾ ಚಾಲಕನೊಬ್ಬ ಜೊತೆಯಾಗುತ್ತಾನೆ.

Advertisement

ಅವನೊಂದಿಗೆ ಆಟೋರಿಕ್ಷಾ ಏರುವ ವಿದೇಶಿಗರಿಗೆ, ಆ ಚಾಲಕ ಪ್ರಯಾಣದ ನಡುವೆಯೇ ಕರ್ನಾಟಕ ದರ್ಶನ ಮಾಡಿಸುತ್ತಾನೆ! ಮತ್ತೂಂದೆಡೆ ಕನ್ನಡ ಪರವಾಗಿ ಹೋರಾಟ ಮಾಡುವ ಯುವಕನೊಬ್ಬ ಕನ್ನಡಕ್ಕಾಗಿ ಕೈ ಎತ್ತಿದಾಗಲೆಲ್ಲ, ಒದೆ ತಿನ್ನುತ್ತಿರುತ್ತಾನೆ. ಯಾಕೆ ಹೀಗಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಬೀದರ್‌ನಿಂದ ಚಾಮರಾಜನಗರ, ಕಾರವಾರದಿಂದ ಕೋಲಾರದವರೆಗೆ ಇಡೀ ಕರ್ನಾಟಕ ತೆರೆಮೇಲೆ ಬಂದು ಹೋಗಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಕನ್ನಡ ದೇಶದೊಳ್‌’ ಚಿತ್ರದ ಸಂಕ್ಷಿಪ್ತ ಚಿತ್ರಣ. 

ಸುಮಾರು ಮೂರು ವರ್ಷಗಳಿಂದ ಕಾರು, ಬಸ್ಸು, ಆಟೋರಿಕ್ಷಾಗಳ ಮೇಲೆ ರಾರಾಜಿಸುತ್ತಿದ್ದ “ಕನ್ನಡ ದೇಶದೊಳ್‌’ ಎಂಬ ಶೀರ್ಷಿಕೆ ಚಲನಚಿತ್ರಕ್ಕೆ ಸಂಬಂಧಿಸಿದ್ದು, ಎಂದು ಪ್ರೇಕ್ಷಕರಿಗೆ ಗೋತ್ತಾಗುವ ಮುನ್ನವೇ, ಚಿತ್ರ ತೆರೆಗೆ ಬಂದಿದೆ. ಇಡೀ ಚಿತ್ರದಲ್ಲಿ ಕನ್ನಡನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಚಿತ್ರಣವನ್ನು ಚಿತ್ರದ ಮೂಲಕ ತೆರೆಮೇಲೆ ತಂದಿರುವ ಚಿತ್ರತಂಡದ ಉದ್ದೇಶ ಉತ್ತಮವಾಗಿದ್ದರೂ, ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಅದರಲ್ಲೂ ಕನ್ನಡ ಎಂದರೆ ಅದರ ಹಿಂದೆ ನೂರಾರು ಸಂಗತಿಗಳು ಎಳೆಎಳೆಯಾಗಿ ತೆರೆದುಕೊಳ್ಳುತ್ತವೆ.

ಅನುಭವಕ್ಕೆ ಬರುವ, ತರ್ಕಕ್ಕೆ ನಿಲುಕದ ಅದೆಷ್ಟೋ ಅಸಂಗತ ಸತ್ಯಗಳಿರುತ್ತವೆ. ಇಂದಿಗೂ ಚರ್ಚೆಯಾಗುತ್ತಿರುವ ಅಸಂಖ್ಯಾತ ಸಂಕೀರ್ಣ, ಸೂಕ್ಷ್ಮ ಸಂವೇದನೆಗಳಿವೆ. ಅವೆಲ್ಲವನ್ನೂ ಚಲನಚಿತ್ರದ ಮೂಲಕ ಎರಡೂವರೆ ಗಂಟೆಗಳಲ್ಲಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಅದರಲ್ಲೂ ಚಲನಚಿತ್ರ ಎಂಬುದಕ್ಕೆ ಅದರದ್ದೇ ಆದ ವ್ಯಾಕರಣವಿರುತ್ತದೆ. ಅಲ್ಲಿ ಎಷ್ಟು ವಾಸ್ತವ, ಸತ್ಯ ಸಂಗತಿಗಳನ್ನು ಚಿತ್ರಿಸುತ್ತೀರಿ ಎನ್ನುವುದಕ್ಕಿಂತ, ಎಷ್ಟು ಪರಿಣಾಮಕಾರಿಯಾಗಿ ನಿರೂಪಿಸುತ್ತೀರಿ ಎಂಬುದೇ ಮುಖ್ಯವಾಗುತ್ತದೆ.

ಸ್ವಲ್ಪ ವ್ಯಾಕರಣ ತಪ್ಪಿದರೂ, ಚಲನಚಿತ್ರ ಎಂಬುದು ಸಾಕ್ಷ್ಯಚಿತ್ರ ಎನ್ನುವ ಹಣೆಪಟ್ಟಿಕಟ್ಟಿಕೊಳ್ಳುವ ಅಪಾಯವಿರುತ್ತದೆ. ಜೊತೆಗೆ ಈ ತರಹದ ಕಥೆಗಳನ್ನು ಚಿತ್ರವಾಗಿ ನೋಡಬೇಕೆ, ಚರ್ಚೆಯಾಗಿ ನೋಡಬೇಕೆ ಎಂಬ ಗೊಂದಲಗಳಿಗೆ ಉತ್ತರವೇ ಸಿಗುವುದಿಲ್ಲ. ಇನ್ನು “ಕನ್ನಡ ದೇಶದೊಳ್‌’ ಚಿತ್ರದ ನಿರೂಪಣೆ, ಕಲಾವಿದರ ಅಭಿನಯ ಯಾವುದೂ ಪ್ರೇಕ್ಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯುವುದಿಲ್ಲ. ಕನ್ನಡದ ಹೆಸರಿನಲ್ಲಿ ಕೆಲವು ದೃಶ್ಯಗಳು ಮತ್ತು ಪಾತ್ರಗಳ ಅತಿಯಾದ ವೈಭವೀಕರಣ, ಕೆಲವು ಕಡೆಗಳಲ್ಲಿ ನೋಡುಗರನ್ನು ನಗಿಸಲೇಬೇಕೆಂಬ ನಿರ್ದೇಶಕರ ಹಠ ಚಿತ್ರವನ್ನು ಹಳಿ ತಪ್ಪಿಸಿದೆ. ಇಡೀ ಕರ್ನಾಟಕವನ್ನು ತೆರೆಮೇಲೆ ತೋರಿಸುವ ಉತ್ಸಾಹದಲ್ಲಿ ಚಿತ್ರತಂಡ ಚಿತ್ರಕಥೆಯ ಕಡೆಗೆ ಗಮನಕೊಟ್ಟಿಲ್ಲ.

Advertisement

ಚಿತ್ರ: ಕನ್ನಡ ದೇಶದೊಳ್‌
ನಿರ್ದೇಶನ: ಅವಿರಾಮ್‌ ಕಂಠೀರವ
ನಿರ್ಮಾಣ: ಜೆ.ಎಸ್‌.ಎಂ ಪ್ರೊಡಕ್ಷನ್ಸ್‌, 
ತಾರಾಗಣ: ಸುಚೇಂದ್ರ ಪ್ರಸಾದ್‌, ತಾರಕ್‌ ಪೊನ್ನಪ್ಪ, ಜೆನ್‌ ವೋಲ್ಕೋವಾ, ಹರೀಶ್‌ ಅರಸು, ನಜØರ್‌ ಅಲಿ, ಟೆನ್ನಿಸ್‌ ಕೃಷ್ಣ, ವೈಜನಾಥ್‌ ಬಿರಾದಾರ್‌, ಸನತ್‌, ಶಿವು ಇತರರು. 

* ಜಿ.ಎಸ್‌ ಕಾರ್ತಿಕ ಸುಧನ್‌ 

Advertisement

Udayavani is now on Telegram. Click here to join our channel and stay updated with the latest news.

Next