Advertisement

ತಿಂಗಳಿಗೆ ಉತ್ತಮ ಆದಾಯ; ರೈತನ ಬದುಕಿಗೆ ಆಸರೆಯಾದ ನರೇಗಾ

06:08 PM Oct 08, 2022 | Team Udayavani |

ಹಾವೇರಿ: ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಮಾಡಿಕೊಂಡ ತಾಲೂಕಿನ ಹೊಮ್ಮರಡಿ ಗ್ರಾಮದ ರೈತರೊಬ್ಬರು ತಮ್ಮ ಹೊಲದಲ್ಲಿ ಹೂ ಬೆಳೆದು ಬದುಕು ಕಟ್ಟಿಕೊಳ್ಳುವ ಮೂಲಕ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ. ಗೋವಿನ ಜೋಳದಿಂದ ನಷ್ಟ ಅನುಭವಿಸಿ ಬೇಸತ್ತಿದ್ದ ಅನ್ನದಾತನಿಗೆ ಉದ್ಯೋಗ ಖಾತ್ರಿ ಯೋಜನೆ ವರವಾಗಿದ್ದು, ಇದೀಗ ತಿಂಗಳಿಗೆ ಉತ್ತಮ ಆದಾಯ ಪಡೆಯುತ್ತಿದ್ದಾರೆ.

Advertisement

ತಾಲೂಕಿನ ಹೊಮ್ಮರಡಿ ಗ್ರಾಮದ ರೈತ ವೀರಪ್ಪ ಕರಚಣ್ಣನವರ ತಮ್ಮ ಜಮೀನಿನಲ್ಲಿ ಹೂ ಬೆಳೆದು ಲಾಭ ಪಡೆಯುತ್ತಿದ್ದಾರೆ. ಮೊದಲು ಗೋವಿನಜೋಳ ಬೆಳೆಯುತ್ತಿದ್ದವರು, ಪರ್ಯಾಯವಾಗಿ ಬೇರೆ ಏನಾದರೂ ಬೆಳೆಯಬೇಕು ಎಂದುಕೊಂಡಿದ್ದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೂ ಬೆಳೆಯಲು ಗ್ರಾಮ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂದು ತಿಳಿದ ಕೂಡಲೇ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ, ಸಂಪೂರ್ಣ ಮಾಹಿತಿ ಪಡೆದು ಯೋಜನೆಯ ಲಾಭ ಪಡೆದಿದ್ದಾರೆ.

30 ಗುಂಟೆಯಲ್ಲಿ ಬಟನ್‌ ರೋಜ್‌: ಗೋವಿನಜೋಳ ಬೆಳೆದಿದ್ದರೆ 1 ಎಕರೆಯಲ್ಲಿ 20 ರಿಂದ 25 ಕ್ವಿಂಟಲ್‌ ಗೋವಿನ ಜೋಳ ಬೆಳೆಯಬಹುದಿತ್ತು. ಇದರಿಂದ ಬರುವ ಆದಾಯ ಕೇವಲ 20 ರಿಂದ 25 ಸಾವಿರ ರೂ. ಆದರೆ, ಹೂ ಬೆಳೆದಿದ್ದರಿಂದ ಪ್ರತಿ ದಿನಕ್ಕೆ 1,000 ಸಾವಿರ ರೂ. ಕನಿಷ್ಟ ಆದಾಯ ಪಡೆದು, ತಿಂಗಳಿಗೆ 30 ರಿಂದ 35 ಸಾವಿರ ರೂ. ಗಳಿಸುತ್ತಿದ್ದಾರೆ.

ಯೋಜನೆ ಕುರಿತು ಜನಜಾಗೃತಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಪ್ರದೇಶಕ್ಕೆ ವರದಾನವಾಗಿದೆ. ಇದರ ಮಹತ್ವವನ್ನು ಐಇಸಿ ಕಾರ್ಯಕ್ರಮದ ಮೂಲಕ ಜನರಿಗೆ ತಿಳಿಸಿಕೊಡಲಾಯಿತು. ಅಲ್ಲದೇ, ಮನೆ ಮನೆ ಭೇಟಿ ಮಾಡಿ ಜನರಿಗೆ ಈ ಯೋಜನೆಯಲ್ಲಿರುವ 21 ವಲಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಜನರಿಗೆ ರೋಜಗಾರ್‌ ದಿನಾಚರಣೆ ಮೂಲಕ ವೈಯಕ್ತಿಕ ಕಾಮಗಾರಿಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಸಮುದಾಯ ಕಾಮಗಾರಿಗಳನ್ನು ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ಮಿಸಿಕೊಳ್ಳಲು ಸಣ್ಣ-ಅತಿ ಸಣ್ಣ ರೈತರಿಗೆ, ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ 2.50 ಲಕ್ಷ ರೂ. ವರೆಗೂ ಸಹಾಯಧನ ನೀಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ.

Advertisement

ಯೋಜನೆ ಸದ್ಬಳಕೆ ಹೇಗೆ?: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರು ಜಾಬ್‌ ಕಾರ್ಡ್‌ ಹೊಂದಿರಬೇಕು. ಅಲ್ಲದೇ, ಸಣ್ಣ, ಅತಿ ಸಣ್ಣ ರೈತ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಈ ಯೋಜನೆ ಲಾಭ ಸಿಗುತ್ತದೆ. ಈ ಯೋಜನೆಯಲ್ಲಿ ಜೀವನ ಪರ್ಯಂತ 2.50(ಒಂದೇ ಸಾರಿ) ಲಕ್ಷ ರೂ. ವರೆಗೂ ಯೋಜನೆಯ ಲಾಭ ಪಡೆದುಕೊಳ್ಳಬಹುದು.

ರೈತ ವೀರಪ್ಪ ಹೊಮ್ಮರಡಿ ಗುಲಾಬಿ ಹೂವು ನಾಟಿ ಮಾಡಲು 60 ರಿಂದ 80 ಸಾವಿರ ರೂ. ಖರ್ಚು ಮಾಡಿದ್ದಾರೆ. ಈಗ ನಿತ್ಯ ಹೊಲದಲ್ಲಿ ಹೂವು ಕಟಾವು ಮಾಡುತ್ತಿರುವ ಕೂಲಿಕಾರರು ಕೂಲಿಯನ್ನು ವಾರಕ್ಕೆ ಒಂದು ಬಾರಿ ಉದ್ಯೋಗದಲ್ಲಿ ಪಡೆಯುತ್ತಿದ್ದಾರೆ. ಇದರಿಂದ ನಾವು ವೆಚ್ಚ ಮಾಡಿದ ಹಣ ವಾಪಸ್‌ ಬರುತ್ತದೆ. ಜೊತೆಗೆ ಇಲಾಖೆಯಿಂದ ಅನುದಾನ ಸಿಗುತ್ತದೆ ಎಂದು ರೈತ ವೀರಪ್ಪ ಹೇಳುತ್ತಾರೆ

ಹಬ್ಬದಲ್ಲಿ ಭಾರೀ ಬೇಡಿಕೆ ಹಬ್ಬ-ಹರಿದಿನಗಳಲ್ಲಿ ಗುಲಾಬಿ ಹೂವಿಗೆ ತುಂಬಾ ಬೇಡಿಕೆ ಇರುತ್ತದೆ. ಹಾಗೆಯೇ, ಬೇರೆ ರಾಜ್ಯದವರಾದ ಮಹಾರಾಷ್ಟ್ರ, ಗೋವಾ, ಹರಿಯಾಣ ಮುಂತಾದವರು ಗುಲಾಬಿ ತೋಟಗಳನ್ನು ನೋಡಿಕೊಂಡು ಐದರಿಂದ ಆರು ವರ್ಷ ನಮಗೆ ಬೇಕು ಎಂದು 2-3 ಲಕ್ಷ ರೂ. ಮುಂಗಡವಾಗಿ ಹಣ ಕೊಟ್ಟು ಒಂದೇ ಮಾರ್ಕೆಟ್‌ ದರ ಮಾಡಿ ಹೋಗುತ್ತಿದ್ದಾರೆ ಎಂದು ರೈತ ವೀರಪ್ಪ ಖುಷಿಯಿಂದ ಹೇಳುತ್ತಾರೆ.

ನರೇಗಾ ಯೋಜನೆಯಡಿ 30 ಗುಂಟೆ ಜಮೀನಿನಲ್ಲಿ ಬಟನ್‌ ರೋಜ್‌ ಬೆಳೆದಿದ್ದೇನೆ. ಮೊದಲು ಗೋವಿನಜೋಳ ಬೆಳೆಯುತ್ತಿದ್ದೆ. ಆದರೆ, ಈಗ ಗೋವಿನಜೋಳಕ್ಕಿಂತ ಹೂವಿನಲ್ಲಿ ಉತ್ತಮ ಲಾಭ ಸಿಗುತ್ತಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಮಗೆ ಹೆಚ್ಚಿನ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ವೀರಪ್ಪ ಕರಚಣ್ಣನವರ,
ಗುಲಾಬಿ ಹೂ ಬೆಳೆದ ರೈತ

ರೈತರು ಕೇವಲ ಒಂದೇ ರೀತಿಯ ಬೆಳೆ ಬೆಳೆದು ನಷ್ಟ ಅನುಭವನಿಸುವ ಬದಲು, ನರೇಗಾದಡಿ ಧನಸಹಾಯ ಪಡೆದು ಮಿಶ್ರ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಇದರಿಂದ ಆರ್ಥಿಕವಾಗಿ ಸದೃಢರಾಗಬಹುದು. ತಾಲೂಕಿನ 33 ಗ್ರಾಮ ಪಂಚಾಯಿತಿ ರೈತರು ಯೋಜನೆಯ ಲಾಭ ಪಡೆದುಕೊಳ್ಳಬೇಕು.
*ಇಂತಿಯಾಜ್‌ ಜಂಗಪುರಿ, ಹಿರಿಯ
ಸಹಾಯಕ ತೋಟಗಾರಿಕೆ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next