ದೇವನಹಳ್ಳಿ: ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ನಗರದ ಬಜಾರ್ ರಸ್ತೆಯಲ್ಲಿ ಸಿರಿಧಾನ್ಯ ಉತ್ಪನ್ನಗಳ ಮಾರಾಟ ಶಾಖೆ ಉದ್ಘಾಟಿಸಿ ಮಾತನಾಡಿದರು.
ಸಿರಿ ಧಾನ್ಯಗಳಾದ ಸಾವೆ, ಸಜ್ಜೆ, ನವಣೆ, ಜೋಳ, ರಾಗಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯವಂತರಾಗಿರುತ್ತಿದ್ದರು. ಈಗ ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಫಾಸ್ಟ್ ಫುಡ್, ಜಂಕ್ ಫುಡ್ ಬಳಕೆ ಪ್ರಸ್ತುತ ಗ್ರಾಮೀಣ ಪ್ರದೇಶಕ್ಕೂ ವಿಸ್ತಾರವಾಗಿರುವರಿಂದ ಹಳ್ಳಿಗರ ಆರೋಗ್ಯವೂ ಹದಗೆಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮನೆಗಳಲ್ಲಿ ಸಿದ್ಧ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಮಕ್ಕಳ ಜೊತೆಗೆ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಲಕ್ಷಾಂತರ ರೂ. ಆಸ್ಪತ್ರೆಗೆ ಖರ್ಚು ಮಾಡಬೇಕಿದೆ. ಹೀಗಾಗಿ ಆರೋಗ್ಯದಾಯಕ ಸಿರಿಧಾನ್ಯಗಳನ್ನು ಹೆಚ್ಚು ಬಳಸಬೇಕು. ಆಹಾರ ಪದಾರ್ಥಗಳಲ್ಲಿ ರುಚಿ ಹೆಚ್ಚಿಸುವ ರಾಸಾಯನಿಕ ಪದಾರ್ಥಗಳ ಅಂಶ ಹೆಚ್ಚಿದೆ. ಇದು ಆರೋಗ್ಯದ ಮೇಲೆ ದುಷ್ಪರಿಣಮಾ ಬೀರುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ವಸಹಾಯ ಸಂಘ ರಚಿಸಿ, ಲಕ್ಷಾಂತರ ಮಹಿಳೆಯರಿಗೆ ನೆರವಾಗುವುದರ ಜೊತೆಗೆ ಸಿರಿಧಾನ್ಯಗಳ ಘಟಕ ಸ್ಥಾಪಿಸಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
ಜಿಲ್ಲಾ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ವಸಂತ ಸಾಲಿಯಾನ ಮಾತನಾಡಿ, ರಾಜ್ಯದಲ್ಲಿ 1400 ಸಿರಿಧಾನ್ಯ ಮಳಿಗೆ ಪ್ರಾರಂಭಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲೂ 5 ಮಳಿಗೆ ತೆರೆಯುವ ಯೋಜನೆ ಇದೆ. ಇದು 2ನೇ ಮಳಿಗೆಯಾಗಿದೆ. ಈಗಾಗಲೇ 17 ಮಳಿಗೆ ಸ್ಥಾಪನೆಗೆ ಜಾಗ ಗುರ್ತಿಸಲಾಗಿದೆ. ಧರ್ಮಸ್ಥಳ ಗ್ರಾಮೀಣ ಸಂಸ್ಥೆಯ 2 ಸಾವಿರ ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ಬೆಳ್ತಂಗಡಿ ಹಾಗೂ ಧಾರವಾಡದ ಘಟಕದಲ್ಲಿ ತಯಾರಾದ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲು ಈ ಮಳಿಗೆ ತೆರೆಯಲಾಗುತ್ತಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಕೋಡಿ ಮಂಚೇನಹಳ್ಳಿ ಎಸ್. ನಾಗೇಶ್, ತಾಲೂಕು ಸೊಸೈಟಿ ನಿರ್ದೇಶಕ ಡೇರಿ ನಾಗೇಶ್ ಬಾಬು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಅಕ್ಷತಾ ರೈ, ಪದಾಧಿಕಾರಿಗಳಾದ ವಿಶ್ವನಾಥ್, ಯೋಗೇಶ್, ಪ್ರವೀಣ್, ಲಕ್ಷ್ಮೀ ನಾರಾಯಣ್ ಇದ್ದರು.