Advertisement

ಯೋಗ, ಕ್ರೀಡೆಯಿಂದ ಉತ್ತಮ ಆರೋಗ್ಯ

09:38 PM Aug 04, 2019 | Lakshmi GovindaRaj |

ಚನ್ನರಾಯಪಟ್ಟಣ: ಯಾವ ವ್ಯಕ್ತಿ ನಿತ್ಯ ಪ್ರಾಣಯಾಮ, ಯೋಗ ಹಾಗೂ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾನೋ ಆತ ಆರೋಗ್ಯವಂತನಾಗಿರುತ್ತಾನೆ ಎಂದು ವಿಧಾನ ಸರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು.

Advertisement

ತಾಲೂಕಿನ ಶ್ರವಣಬೆಳಗೊಳ ಹಡೇನಹಳ್ಳಿ ಗ್ರಾಮದ ಗುಡ್‌ ಸಿಟಿಜನ್‌ ಶಾಲೆಯಲ್ಲಿ ಕ್ರೀಡಾ ಭಾರತಿಯಿಂದ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಹ ದಂಡನೆ ಇಲ್ಲದೇ ಹೋದರೆ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಇದನ್ನು ಮನಗಂಡು ಪ್ರತಿಯೋರ್ವ ವಿದ್ಯಾರ್ಥಿ ನಿತ್ಯ ದೇಹ ದಂಡಣೆಯ ಕೆಲಸ ಮಾಡಬೇಕು ಎಂದು ಹೇಳಿದರು.

ಕ್ರೀಡೆ, ಸಂಗೀತಕ್ಕೆ ಆದ್ಯತೆ ನೀಡಿ: ಪಠ್ಯದಲ್ಲಿ ಕ್ರೀಡೆ, ಸಂಗೀತಕ್ಕೆ ಹೆಚ್ಚು ಒತ್ತು ನೀಡಬೇಕು, ಆದರೆ ಇದನ್ನು ಅಳವಡಿಸುವಲ್ಲಿ ಸರ್ಕಾರಗಳು ವಿಫ‌ಲವಾಗಿವೆ. ಪಠ್ಯದಲ್ಲಿ ಇರುವ ಕ್ರಮವನ್ನು ಮಾತ್ರ ಪೋಷಕರು ಹಾಗೂ ಶಿಕ್ಷಕರು ಹೆಚ್ಚು ಆದ್ಯತೆ ನೀಡುತ್ತಾರೆ. ಮುಂದಿನ ದಿವಸಗಳಲ್ಲಿ ಪ್ರತಿ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕನನ್ನು ನೇಮಕ ಮಾಡುವಂತೆ ಒತ್ತಾಯ ಹೇರುತ್ತೇನೆ. ಯಾವ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇದ್ದಾರೆ ಅವರು ಕ್ರೀಡೆಕಡೆ ಗಮನ ನೀಡಬೇಕು ಎಂದು ತಿಳಿಸಿದರು.

ಕ್ರೀಡಾಚಟುವಟಿಕೆಗೆ ಪ್ರೋತ್ಸಾಹ: ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಕೆ.ಪುಷ್ಪಲತಾ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಗುರುತಿಸುವ ಕೆಲಸವನ್ನು ಕ್ರೀಡಾ ಭಾರತಿ ಮಾಡುತ್ತಿದೆ, ಯುವ ಸಮುದಾಯ ಕ್ರೀಡೆಯನ್ನು ಮರೆಯುತ್ತಿದ್ದು ಮೊಬೈಲ್‌ ಹಾಗೂ ಕಂಪ್ಯೂಟರ್‌ಗೆ ಅಂಟಿಕೊಂಡಿದ್ದಾರೆ. ಅವರನ್ನು ಕ್ರೀಡಾಂಗಣಕ್ಕೆ ಕರೆಸುವ ಕೆಲಸ ಆಗುತ್ತಿದೆ, ಸರ್ಕಾರಿ ಶಾಲೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಅವುಗಳನ್ನು ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವಂತೆ ಮಾಡಿರುವುದು ಶ್ಲಾಘನೀಯ. ಮುಂದಿನ ಕ್ರೀಡಾ ಕೂಟದಲ್ಲಿ ಪ್ರತಿ ಶಾಲೆಯಿಂದ ಒಂದು ತಂಡ ಪಾಲ್ಗೊಳ್ಳುವಂತೆ ಆದೇಶಿಸುತ್ತೇನೆ ಎಂದು ಭರವಸೆ ನೀಡಿದರು.

ಅಂಕ ಗಳಿಸಲು ಒತ್ತಡ ಹೇರದಿರಿ: ಮಕ್ಕಳ ವಿಷಯದಲ್ಲಿ ಆಲೋಚನೆ ಮಾಡುವ ಪಾಲಕರು ಹಾಗೂ ಶಿಕ್ಷಕರು ವಿಶೇಷವಾಗಿ ಗಮನ ಹರಿಸಬೇಕು. ಮಕ್ಕಳು ಕ್ರೀಡೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದರೆ ಅವರನ್ನು ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಬೇಕು, ಇದರ ಬದಲಾಗಿ ಹೆಚ್ಚು ಅಂಕ ತೆಗೆಯುವಂತೆ ಒತ್ತಡೆ ಹೇರಿ ಮಗುವಿನ ಪ್ರತಿಭೆಗೆ ತಣ್ಣೀರು ಎರೆಚುವ ಕೆಲಸ ಆಗಬಾರದು, ಪ್ರಸಕ್ತ ವರ್ಷ 30 ಶಾಲೆಗಳಿಂದ ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಮುಂದಿನ ಸಾಲಿನಲ್ಲಿ ಇದು ದ್ವಿಗುಣಗೊಳ್ಳಲಿದೆ ಎಂದರು.

Advertisement

ವಿಜೇತರಿಗೆ ಬಹುಮಾನ ವಿತರಣೆ: ಪಥಸಂಚಲ, ಬ್ಯಾಂಡ್‌ ಸೆಟ್‌ ಹಾಗೂ ಈಜು ಸ್ವರ್ಧೆ ನಡೆಯಿತು ಜಿಲ್ಲೆಯ ವಿವಿಧ ತಾಲೂಕಿನಿಂದ ಸುಮಾರು 20 ಶಾಲೆಗಳಿಂದ 30 ತಂಡಗಳಿದ್ದು 1,082 ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ತಂಡಗಳಿಗೆ ಬೆಂಗಳೂರು ಲಯನ್ಸ್‌ ರಾಯೆಲ್ಸ್‌ ಕ್ಲಬ್‌ ಅಧ್ಯಕ್ಷ ಶಿವಕುಮಾರ ನಾಗರನವಿಲೆ ಇವರಿಂದ ಬಹುಮಾನ ವಿತರಣೆ ಮಾಡಲಾಯಿತು.

ಕ್ರೀಡಾ ಭಾರತಿ ಕ್ಷೇತ್ರೀಯ ಸಂಯೋಜಕ ಚಂದ್ರಶೇಖರ ಜಹಗೀರ್‌ದಾರ್‌, ರಾಜ್ಯ ಕಾರ್ಯದರ್ಶಿ ಎಸ್‌.ಎನ್‌.ಬಸವರಾಜು, ಜಿಲ್ಲಾಧ್ಯಕ್ಷ ವಿಜಯಕುಮಾರಜೈನ್‌, ತಾಲೂಕು ಅಧ್ಯಕ್ಷ ಜಿ.ವಿ.ವಿಜಯಕುಮಾರ, ಅಂತಾರಾಷ್ಟ್ರೀಯ ಕ್ರೀಡಾ ಪಟು ಬರಾಳು ಪ್ರಕಾಶ, ರಾಜಕೀಯ ಮುಖಂಡ ಶಿವನಂಜೇಗೌಡ, ಗುಡ್‌ ಸಿಟಿಜನ್‌ ಶಾಲೆ ಅಧ್ಯಕ್ಷ ಗೇಣಿಧರ್‌, ಪ್ರಾಂಶುಪಾಲ ಅಂಟನಿ ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next