Advertisement

ಉತ್ತಮ ಆಡಳಿತವೂ ನಮ್ಮ ಆದ್ಯತೆ: ಸೈಯದ್‌ ಝಫ‌ರ್‌ ಇಸ್ಲಾಂ ಹೇಳಿಕೆ

09:00 AM Jan 24, 2018 | |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ವೊಂದೇ ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರ ವಿಷಯವಾಗಿರುವುದಿಲ್ಲ. ಉತ್ತಮ ಆಡಳಿತವೂ ನಮ್ಮ ಆದ್ಯತೆ. ಜನರು ಭ್ರಷ್ಟಾಚಾರ ಮುಕ್ತ ಉತ್ತಮ ಆಡಳಿತ ಬಯಸುತ್ತಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಡಳಿತ ಮತ್ತು ಅದರ ಜನಪ್ರಿಯತೆ ಇದನ್ನು ಸಾಬೀತುಪಡಿಸುತ್ತದೆ. ಈ ಅಂಶವನ್ನೇ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದಲ್ಲಿ ಚುನಾವಣೆ ಎದುರಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್‌
ಝಫ‌ರ್‌ ಇಸ್ಲಾಂ ಹೇಳಿದ್ದಾರೆ.

Advertisement

“ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿಯಲ್ಲಿ ವಿಫ‌ಲವಾಗಿದ್ದು, ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ. ಜನ ಕಲ್ಯಾಣಕ್ಕೆ ಸಂಬಂಧಿಸಿದಂತೆ ತನ್ನ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಇದರ ಪರಿಣಾಮ ಜನ ಸರ್ಕಾರದ ಬಗ್ಗೆ ರೋಸಿ ಹೋಗಿ ಬದಲಾವಣೆ ಬಯಸಿದ್ದಾರೆ.  ೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಅಧಿಕಾರದಲ್ಲಿದೆಯೋ ಅದೇ ಪಕ್ಷದ ಸರ್ಕಾರ ರಾಜ್ಯದಲ್ಲೂ ಅಧಿಕಾರದಲ್ಲಿದ್ದರೆ ಹೆಚ್ಚು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರದಿಂದ ರೋಸಿ ಬದಲಾವಣೆ ಬಯಸಿದ ಜನ ಬಿಜೆಪಿ ಬೆಂಬಲಿಸುತ್ತಾರೆ ಎನ್ನುತ್ತೀರಿ. ಆದರೆ, ಹಿಂದೆ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆಯಿಂದಲೇ ಅಧಿಕಾರ ಕಳೆದುಕೊಂಡಿತ್ತು?
ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಜನ ಬಿಜೆಪಿ ಸರ್ಕಾರದ ಮೇಲೆ ಎಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರೋ ಅಷ್ಟರ ಮಟ್ಟದಲ್ಲಿ ನಮ್ಮಿಂದ ಕೆಲಸ ಆಗಿರಲಿಲ್ಲ. ಬಿಜೆಪಿ ಬಗ್ಗೆ ಅವರು ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ, 2014ರ ಲೋಕಸಭೆ ಚುನಾವಣೆ ನಂತರ ಬಿಜೆಪಿಯ ಜನಪ್ರಿಯತೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಾವು ಅಳವಡಿಸಿಕೊಂಡಿರುವ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತದ ಮಾದರಿ. ಇದರ ಪರಿಣಾಮ ನಂತರ ನಡೆದ ಚುನಾವಣೆಗಳಲ್ಲಿ ಬಹುತೇಕ ಗೆದ್ದು 19 ರಾಜ್ಯಗಳಲ್ಲಿ ಸ್ವತಂತ್ರವಾಗಿ ಇಲ್ಲವೇ ಮೈತ್ರಿ ಪಕ್ಷಗಳೊಂದಿಗೆ ಅಧಿಕಾರದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಈ ಸಾಧನೆ ಮುಂದುವರಿಯುತ್ತದೆ. 

ಉತ್ತರ ಭಾರತದಲ್ಲಿ ಬಿಜೆಪಿ ಗೆದ್ದಿದೆ. ಆದರೆ, ದಕ್ಷಿಣ ಭಾರತದಲ್ಲಿ ಅಂತಹ ವಾತಾವರಣ ಕಾಣಿಸುತ್ತಿಲ್ಲವಲ್ಲ?
ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿ ಯಾವತ್ತೂ ಶಕ್ತಿಯುತ ಪಕ್ಷವಾಗಿರಲಿಲ್ಲ. ಆದರೆ, 2014ರ ನಂತರ ಜನಪ್ರಿಯತೆ ಹೆಚ್ಚಾಗುತ್ತಿದೆ. ಅಸ್ತಿತ್ವದಲ್ಲೇ ಇಲ್ಲದ ಕೇರಳ, ತಮಿಳುನಾಡಿನಲ್ಲಿ ನಾವು ಉತ್ತಮ ಸಾಧನೆ ತೋರಿದ್ದು, ಮತಗಳ ಪ್ರಮಾಣ ಹೆಚ್ಚಿಸಿಕೊಂಡಿದ್ದೇವೆ. ಪಕ್ಷದ ಬಗ್ಗೆ ಜನರ ನಿರೀಕ್ಷೆ ತಲುಪಲು ಪ್ರಯತ್ನಿಸಿದ್ದೇವೆ. ಅವರಿಗಾಗಿ ನೀತಿ ನಿರೂಪಣೆ, ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿದ್ದೇವೆ. ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌ ಮೂಲಕ ಎಲ್ಲರನ್ನೂ ಜತೆಗೆ ಕರೆದೊಯ್ಯುತ್ತಿದ್ದೇವೆ. ಹೀಗಿರುವಾಗ ಮತ್ತೆ ಕರ್ನಾಟಕದಲ್ಲಿ ಜನ ನಮ್ಮನ್ನು ಬೆಂಬಲಿಸುವುದರಲ್ಲಿ ಅನುಮಾನವಿಲ್ಲ.

ಕಾಂಗ್ರೆಸ್‌ಗೆ ಸ್ಥಳೀಯ ನಾಯಕತ್ವದ ಕೊರತೆಯಿಂದಾಗಿ ಅನೇಕ ಕಡೆ ಬಿಜೆಪಿ ಗೆದ್ದಿದೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ನಾಯಕತ್ವ ಗಟ್ಟಿಯಾಗಿದೆ?
ಇಲ್ಲಿ ನಾಯಕತ್ವದ ಪ್ರಶ್ನೆ ಉದ್ಭವವಾಗುವುದಿಲ್ಲ. ಪಕ್ಷದ ನೀತಿ ನಿರೂಪಣೆಗಳು ಮುಖ್ಯವಾಗುತ್ತವೆ. ಸಮಾಜವನ್ನು ಒಡೆಯುವುದು ಕಾಂಗ್ರೆಸ್‌ ನೀತಿಯಾದರೆ, ಎಲ್ಲರನ್ನೂ ಜತೆಗೆ ಕರೆದೊಯ್ಯುವುದು ಬಿಜೆಪಿ ನೀತಿ. ಹೀಗಾಗಿ ಸ್ಥಳೀಯ ನಾಯಕತ್ವ ಗಟ್ಟಿಯಾಗಿದೆಯೇ ಎಂಬುದು ಮುಖ್ಯವಾಗುವುದಿಲ್ಲ. ಸಮಾಜ ಒಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಜನ
ಬೇಸತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರ ಉತ್ತಮ ಆಡಳಿತ ನೀಡುವುದನ್ನೂ ಗಮನಿಸುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಅವಕಾಶ ಕೊಡುತ್ತಾರೆ.

Advertisement

ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ತಾರತಮ್ಯ ಮಾಡುತ್ತಿದೆ ಎಂಬ ಆರೋಪವಿದೆಯಲ್ಲಾ?
ಕೇಂದ್ರದಿಂದ ಯಾವುದೇ ತಾರತಮ್ಯ ಆಗುತ್ತಿಲ್ಲ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಮತ್ತು ನಾಯಕತ್ವ ಕೇಂದ್ರದ ಜನಪರ ಮತ್ತು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರಲು ಆಸಕ್ತಿ ತೋರುತ್ತಿಲ್ಲ. ಕೇಂದ್ರದ ಪ್ರಮುಖ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಫ‌ಲಾನುಭವಿಗಳ ಸಂಖ್ಯೆ ಕಡಿಮೆ ಇರುವುದೇ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೇಂದ್ರದ ಯೋಜನೆಗಳ ಬಗ್ಗೆ ಹೇಗೆ ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ಉದಾಹರಣೆ. ಇದರಿಂದಾಗಿ ಕೇಂದ್ರದ ಯೋಜನೆಗಳು ರಾಜ್ಯದಲ್ಲಿ ಜನಪ್ರಿಯವಾಗಿಲ್ಲ. ಈಗ ಅದನ್ನು ಮನವರಿಕೆ ಮಾಡುವ ಕೆಲಸ ಆಗುತ್ತಿದೆ. ಕೇಂದ್ರದ ಅನುದಾನವನ್ನು ರಾಜ್ಯ ಸರ್ಕಾರ ಸದ್ವಿನಿಯೋಗ ಮಾಡುತ್ತಿಲ್ಲ ಎಂಬುದನ್ನು
ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ.

ಬಿಜೆಪಿಯ ಕೆಲವರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳು, ಅದರಲ್ಲೂ ದಲಿತರ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ನೀಡಿದ ಹೇಳಿಕೆ ಬಿಜೆಪಿಗೆ ಸಮಸ್ಯೆಯಾಗುವುದಿಲ್ಲವೇ?
ಕೆಲವರು ನೀಡುವ ವಿವಾದಾತ್ಮಕ ಹೇಳಿಕೆಗಳಿಗಿಂತ ಬಿಜೆಪಿ ರಾಷ್ಟ್ರೀಯ ನಾಯಕತ್ವ ಮತ್ತು ಕೇಂದ್ರ ಸರ್ಕಾರ ದಲಿತರು, ಶೋಷಿತರು, ಹಿಂದುಳಿದವರ ಬಗ್ಗೆ ಏನೇನು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂಬುದು ಮುಖ್ಯ. ಈ ಸಮುದಾಯಕ್ಕೆ ಹಿಂದೆ ಯಾವ ಸರ್ಕಾರಗಳು ಮಾಡದೇ ಇದ್ದ ಕಾರ್ಯಕ್ರಮಗಳನ್ನು ನಾವು ಜಾರಿಗೊಳಿಸಿದ್ದೇವೆ. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ 
ಅವಮಾನ ಮಾಡಿದ್ದರೆ, ನಾವು ಗೌರವ ಕೊಡುತ್ತಿದ್ದೇವೆ. ಇಲ್ಲಿ ಮಾತಿಗಿಂತ ಕೃತಿ ಮುಖ್ಯವಾಗುತ್ತದೆ. ಹೀಗಾಗಿ ಕೆಲವರ ಹೇಳಿಕೆಗಳಿಗೆ ಗಮನ ಕೊಡುವುದು ಬೇಡ. 

ಧರ್ಮದ ವಿಚಾರ ಬಂದಾಗ ಬಿಜೆಪಿ ವಿರುದ್ಧ ವಿಭಿನ್ನ ಅಭಿಪ್ರಾಯವಿದೆಯಲ್ಲ?
ಕಾಂಗ್ರೆಸ್‌ ತನ್ನ ಹುಳುಕು ಮುಚ್ಚಿಕೊಳ್ಳಲು ಬಿಜೆಪಿ ಮುಸ್ಲಿಂ ವಿರೋಧಿ ಎಂದು ಹೇಳಿ ಅದನ್ನು ಜನರ ಮನಸ್ಸಿನಲ್ಲಿ ಬಿತ್ತಿದೆ. ಬಿಜೆಪಿ ಮುಸ್ಲಿಂ ಸೇರಿದಂತೆ ಯಾವುದೇ ಒಂದು ಜಾತಿ ಅಥವಾ ಧರ್ಮದ ವಿರೋಧಿಯಲ್ಲ. ಈ ದೇಶ, ಸಮಾಜ ಒಂದು ಎಂದು ಬಯಸುತ್ತದೆ. ಉದಾಹರಣೆಗೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಒಟ್ಟು ಫ‌ಲಾನುಭವಿಗಳ ಪೈಕಿ ಶೇ. 22ರಷ್ಟು ಮುಸ್ಲಿಮರು. ಅದೇ ರೀತಿ ಮುದ್ರಾ ಯೋಜನೆಯಡಿ ಕೋಟ್ಯಂತರ ಮುಸ್ಲಿಮರು ಜೀವನ ಕಂಡುಕೊಂಡಿದ್ದಾರೆ. ಧರ್ಮ, ಜಾತಿ ಆಧಾರದ ಮೇಲೆ ನಾವು ಯಾವುದೇ ಕಾರ್ಯಕ್ರಮ ಮಾಡುತ್ತಿಲ್ಲ. ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ಸೇ ನಿಜವಾದ ಮುಸ್ಲಿಂ ವಿರೋಧಿ. ಅದರಿಂದ ಪಾರಾಗಲು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ.

ಹಜ್‌ ಸಬ್ಸಿಡಿ ರದ್ದುಗೊಳಿಸುವುದಕ್ಕೆ ವಿರೋಧ ವ್ಯಕ್ತವಾಗಿದೆಯಲ್ಲ?
ಹಜ್‌ ಯಾತ್ರಿಗಳ ಸಬ್ಸಿಡಿ ನೇರವಾಗಿ ಹಾಜಿಗಳಿಗೆ (ಹಜ್‌ ಯಾತ್ರಿಕರು) ನೀಡುತ್ತಿಲ್ಲ. ಅವರಿಗೆ ಸೇವೆ ಒದಗಿಸಿದವರಿಗೆ ಕೊಡಲಾಗುತ್ತದೆ. ಮುಸ್ಲಿಂ ಕಾನೂನು ಪ್ರಕಾರ ಹಜ್‌ ಯಾತ್ರೆಗೆ ಹೋಗುವವರು ತಮ್ಮ ವೆಚ್ಚವನ್ನು ತಾವೇ ಭರಿಸುವಷ್ಟು ಸಮರ್ಥರಾಗಿರಬೇಕು. ಬೇರೆಯವರನ್ನು ನೆಚ್ಚಿಕೊಳ್ಳಬಾರದು. ಎರಡನೆಯದ್ದಾಗಿ ಒಬ್ಬ ಹಾಜಿಗೆ ಸೌಲಭ್ಯ ಕೊಟ್ಟು, ಇನ್ನೊಬ್ಬ ಹಾಜಿಗೆ ನೀಡದೇ ಇರುವುದು ಇಸ್ಲಾಂ ವಿರೋಧಿಯಾಗುತ್ತದೆ. ಇನ್ನು ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ 2020ರ ವೇಳೆಗೆ ಹಜ್‌ ಯಾತ್ರಿಕರಿಗೆ ನೀಡುವ ಸಬ್ಸಿಡಿ ರದ್ದುಗೊಳಿಸಬೇಕಾಗುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ಕೆ ವೇಗ 
ನೀಡಿ ಹಜ್‌ ಸಬ್ಸಿಡಿ ರದ್ದುಗೊಳಿಸಿ ಆ ಮೊತ್ತವನ್ನು ಮುಸ್ಲಿಂ ಮಹಿಳೆಯರು, ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಹಜ್‌ ಸಬ್ಸಿಡಿ ರದ್ದು ಮುಸ್ಲಿಂ ಸಮುದಾಯದ ಒಟ್ಟಾರೆ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ನಿರ್ಧಾರ. ಆದರೆ, ಹಜ್‌ ಯಾತ್ರಿಕರಿಗೆ ಕೇಂದ್ರ ಸರ್ಕಾರದಿಂದ ನೀಡುವ ಆಡಳಿತಾತ್ಮಕ ನೆರವುಗಳು ಮುಂದುವರಿಯುತ್ತದೆ. 

ಯಾರಿವರು?
ರಾಜಕಾರಣ ಅತ್ಯಂತ ಒಲವಿನ (Passion) ಕ್ಷೇತ್ರ ಎಂಬ ಕಾರಣಕ್ಕೆ 2014ರ ಲೋಕಸಭೆ ಚುನಾವಣೆಗೆ ಮುನ್ನ ಡಾಯಿಷ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಸೈಯದ್‌ ಝಫ‌ರ್‌ ಇಸ್ಲಾಂ ಇದೀಗ ಬಿಜೆಪಿ ರಾಷ್ಟ್ರೀಯ ವಕ್ತಾರ. ಏರ್‌ ಇಂಡಿಯಾದ ಅಧಿಕಾರೇತರ ನಿರ್ದೇಶಕರೂ ಆಗಿರುವ ಅವರು ಬಿಜೆಪಿ ರಾಜಕೀಯ ಮತ್ತು ಆರ್ಥಿಕ ವ್ಯವಹಾರಗಳ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ.

ನೀವೇಕೆ ರಾಜಕೀಯಕ್ಕೆ ಬಂದಿರಿ?
ರಾಜಕೀಯಕ್ಕೆ ಬರಬೇಕು ಎಂಬುದು ನನ್ನ ಒಲವಾಗಿತ್ತು. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನವೇ ಕೆಲಸಕ್ಕೆ
ರಾಜೀನಾಮೆ ನೀಡಿದ್ದೆ. ರಾಜಕೀಯ ಸೇರುವ ಮುನ್ನ ಎಲ್ಲಾ ಪಕ್ಷಗಳ ಬಗ್ಗೆ ಮೌಲ್ಯಮಾಪನ ಮಾಡಿದಾಗ ಬಿಜೆಪಿ ಮಾತ್ರ ಜನರ ಮತ್ತು
ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ರಾಷ್ಟ್ರೀಯ ಭಾವನೆಯ ಏಕೈಕ ಪಕ್ಷ ಎಂಬುದು ತಿಳಿದು ಬಿಜೆಪಿ ಸೇರಿದೆ. ರಾಜಕೀಯಕ್ಕೆ ಸೇರಿ ನಾಲ್ಕು ವರ್ಷವಾಗಿದೆ. ಅಂದುಕೊಂಡಂತೆ ಬಿಜೆಪಿ ಅತ್ಯುತ್ತಮ ಪಕ್ಷ ಎಂಬುದು ಮನವರಿಕೆಯಾಗಿದೆ.

ಕೇಂದ್ರ ಬಜೆಟ್‌ ಜನಪ್ರಿಯವೇ ಅಥವಾ ಜನಪರವೇ?
ಈ ಪ್ರಶ್ನೆಗಿಂತ ಬಜೆಟ್‌ ದೇಶದ ಆರ್ಥಿಕತೆಯನ್ನು ಹೇಗೆ ಸದೃಢವಾಗಿ ಮುಂದುವರಿಸುತ್ತದೆ ಎಂಬುದು ಮುಖ್ಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದೇಶದ ಆರ್ಥಿಕತೆ ಕೆಟ್ಟ ಪರಿಸ್ಥಿತಿಯಲ್ಲಿತ್ತು. ಆದರೆ, ಕೇಂದ್ರ ಸರ್ಕಾರ ಕೈಗೊಂಡ ಕೆಲವು ಕಠಿಣ ನಿರ್ಧಾರಗಳಿಂದ ಭಾರತದ ಆರ್ಥಿಕತೆ ಶಕ್ತಿಯುತವಾಗುತ್ತಿದೆ. ಆರ್ಥಿಕವಾಗಿ ವಿಶ್ವದ ಐದು ಶಕ್ತಿಯುತ ಮತ್ತು ಸರಿಯಾದ ದಾರಿಯಲ್ಲಿ ಹೋಗುತ್ತಿರುವ ಐದು ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ಇದರಿಂದಾಗಿ ದೇಶದ ಜನರಲ್ಲಿ ಆದಾಯ ಗಳಿಸುವ ಸಾಮರ್ಥ್ಯ ಹೆಚ್ಚಾಗುತ್ತಿದೆ. ಇದಕ್ಕಿಂತ ಒಂದು ದೇಶ ಮತ್ತು ಅಲ್ಲಿನ ಜನರಿಗೆ ಇನ್ನೇನು ಬೇಕು?

●ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next