ಕನ್ನಡದಲ್ಲಿ ಹೊಸಬರ ಹೊಸ ಬಗೆಯ ಕಥೆಗಳು ಬರುತ್ತಲೇ ಇವೆ. ಆ ಸಾಲಿಗೆ ಈಗ ಹೊಸ ತಂಡವೊಂದು ವಿಭಿನ್ನ ಕಥಾಹಂದರದೊಂದಿಗೆ ಗಾಂಧಿನಗರವನ್ನು ಸ್ಪರ್ಶಿಸಲು ಸಜ್ಜಾಗಿದೆ. ಹೌದು, ಅವರು ಆ ಸಿನಿಮಾಗೆ ಇಟ್ಟುಕೊಂಡಿರುವ ಹೆಸರು “ಗುಡ್ ಗುಡ್ಡರ್ ಗುಡ್ಡೆಸ್ಟ್ ‘. ಅರೇ, ಇದೇನಪ್ಪಾ ಈ ರೀತಿಯ ಶೀರ್ಷಿಕೆ ಎಂಬ ಅಚ್ಚರಿಯಾಗಬಹುದು. ಕಥೆಗೆ ಪೂರಕವಾಗಿರುವಂತಹ ಶೀರ್ಷಿಕೆ ಇದು ಎಂಬುದೇ ವಿಶೇಷ.
ಅಂದಹಾಗೆ, ಈ ಚಿತ್ರಕ್ಕೆ ಸಂದೀಪ್ ಬಿ.ಹೆಚ್. ನಿರ್ದೇಶಕರು. ಇದು ಇವರ ಮೊದಲ ನಿರ್ದೇಶನದ ಚಿತ್ರ.ಹಾಗಂತ, ಅನುಭವ ಇಲ್ಲವೆಂದಲ್ಲ, ಕಳೆದ 16 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದವರು. ಈಗ ನಿರ್ದೇಶನಕ್ಕಿಳಿದಿದ್ದಾರೆ. “ಗುಡ್ ಗುಡ್ಡರ್ ಗುಡ್ಡೆಸ್ಟ್ ‘ ಬಗ್ಗೆ ಹೇಳುವ ಅವರು, ಈ ಚಿತ್ರ ಶ್ರೀನಿಧಿ ಪಿಕ್ಚರ್ ಬ್ಯಾನರ್ ತಯಾರಾಗುತ್ತಿದ್ದು, ಬಿಲ್ಡರ್ ಆಗಿರುವ ಸುರೇಶ್ ಬಿ. ಈ ಚಿತ್ರದ ನಿರ್ಮಾಪಕರು. ಇದು ಅವರ ಮೊದಲ ಚಿತ್ರ. ಸದ್ಯಕ್ಕೆ ಚಿತ್ರದ ಹೀರೋ ಬಗ್ಗೆ ಈಗಲೇ ಹೇಳದೆ, ಅವರನ್ನು ವಿಶೇಷವಾಗಿ ಪರಿಚಯಿಸುವ ಯೋಚನೆ ನಿರ್ದೇಶಕರದ್ದು.
ಒಬ್ಬ ಹೀರೋನ ಕಂಬ್ಯಾಕ್ ಸಿನಿಮಾ ಇದಾಗಿರಲಿದ್ದು, ಅವರನ್ನು ರೀಲಾಂಚ್ ಮಾಡುವ ತಯಾರಿಯೂ ನಡೆಯುತ್ತಿದೆ ಎನ್ನುತ್ತಾರೆ. ಸಿನಿಮಾದ ವಿಶೇಷ ಬಗ್ಗೆ ಹೇಳುವ ನಿರ್ದೇಶಕ ಸಂದೀಪ್ ಬಿ.ಹೆಚ್., ಇದೊಂದು ಡಾರ್ಕ್ ಹ್ಯೂಮರ್ ಸೆಟೈರ್ ಕಾಮಿಡಿ ಚಿತ್ರ. ಇದರೊಂದಿಗೆ ರೊಮ್ಯಾನ್ಸ್, ಥ್ರಿಲ್ಲರ್, ಡ್ರಾಮಾ, ಕ್ರೈಂ, ಆ್ಯಕ್ಷನ್ ಕೂಡ ಹೊಂದಿದೆ. ಇಲ್ಲಿ ಹಲವು ಜಾನರ್‌ಗಳು ಸೇರಿಕೊಳ್ಳಲಿವೆ ಎಂಬುದು ವಿಶೇಷ. ಕನ್ನಡಕ್ಕೆ ಇದು ಮೊದಲ ಪ್ರಯತ್ನ.
ಇಲ್ಲಿ ಸ್ಕ್ರೀನ್‌ಪ್ಲೇ ವಿಶೇಷವಾಗಿರಲಿದೆ. ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲೂ 3 ಆ್ಯಕ್ಟ್ ಸ್ಟ್ರಕ್ಚರ್ಸ್ ಇದ್ದರೆ, ಇದು 6 ಆ್ಯಕ್ಟ್ ಸ್ಟ್ರಕ್ಚರ್ಸ್ ಹೊಂದಿದೆ. ಇಂದಿನ ತಂತ್ರಜ್ಞಾನಕ್ಕೆ ತಕ್ಕಂತಹ ಚಿತ್ರವಿದು. ಅದು ಯಾವ ರೀತಿಯದ್ದು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಇಲ್ಲಿ ಪ್ರಮುಖ ಪಾತ್ರಗಳ ಜೊತೆ 84 ಪಾತ್ರಗಳು ಹೈಲೈಟ್. ಸುಮ್ಮನೆ ಒಂದ್ ಶಾಟ್‌ಗೆ ಬಂದು ಹೋಗುವ ಪಾತ್ರಗಳಲ್ಲ. ಇಡೀ ಸಿನಿಮಾದಲ್ಲಿ ಅಷ್ಟೂ ಪಾತ್ರಗಳಿರಲಿವೆ. ಉಳಿದಂತೆ ರಂಗಶಂಕರ, ನೀನಾಸಂ, ಮಾಲ್ಗುಡಿ ಡೇಸ್‌ನಲ್ಲಿ ಕೆಲಸ ಮಾಡಿದ ಒಂದಷ್ಟು ಕಲಾವಿದರೂ ಇರಲಿದ್ದಾರೆ. ಬಹುತೇಕ ಬೆಂಗಳೂರಲ್ಲೇ 45 ದಿನಗಳ ಕಾಲ ಶೂಟಿಂಗ್ ನಡೆಯಲಿದೆ.
ನಾಯಕಿ ಇನ್ನಿತರೆ ಪಾತ್ರಗಳ ಆಯ್ಕೆ ನಡೆಯುತ್ತಿದೆ ಎನ್ನುವ ನಿರ್ದೇಶಕರು ಶೀರ್ಷಿಕೆ ಕುರಿತು ಸ್ಪಷ್ಟನೆ ಕೊಡುತ್ತಾರೆ. ಗ್ರಾಮೀಣ ಭಾಗದಲ್ಲಿ ಗ್ರಾಮರ್ ಬರದ ಹುಡುಗರು ಮಾಡುವ ಜೋಕ್ ಇಟ್ಟುಕೊಂಡೇ ಟೈಟಲ್ ಇಡಲಾಗಿದೆ. ಗುಡ್ ಅಂದರೆ ಉತ್ತಮ, ಗುಡ್ಡರ್‌ಗೆ ಅತ್ಯುತ್ತಮ ಗುಡ್ಡೆಸ್ಟ್‌ಗೆ ಸರ್ವೋತ್ತಮ ಎಂಬ ಅರ್ಥ ಗ್ರಾಮೀಣರದು. ಕಥೆಯಲ್ಲಿ ಬರುವ ಹಂತಗಳಲ್ಲಿ ಈ ಗ್ರಾಮೀಣ ಗ್ರಾಮರ್ ಬಳಕೆಯಾಗಲಿದೆ. ಬ್ಯಾಡ್ ಗ್ರಾಮರ್ ಇದ್ದರೂ, ಗ್ರಾಮೀಣದ ಕೆಲ ಹುಡುಗರಿಗೆ ಅದು ಕರೆಕ್ಟ್ ಗ್ರಾಮರ್. ಸಂದೀಪ್ ಛಾಯಾಗ್ರಹಣವಿದೆ. ಸಂಗೀತ ಅಂತಿಮಗೊಳ್ಳಬೇಕಿದೆ. ಸ್ಕ್ರಿಪ್ಟ್ ರೆಡಿ ಇದ್ದು, ಇಷ್ಟರಲ್ಲೇ ಚಿತ್ರತಂಡ ಚಿತ್ರೀಕರಣಕ್ಕೆ ಸಜ್ಜಾಗಲಿದೆ ಎಂಬುದು ಅವರ ಮಾತು.