Advertisement
ಗೋಲ್ಗೊಥಾ ಎಂಬ ಸ್ಥಳದಲ್ಲಿ ನಿರಪರಾಧಿ ಯೇಸುವನ್ನು ಯೆಹೂದ್ಯರು ಶಿಲುಬೆಗೆ ಏರಿಸಿದ್ದರು. ‘ಪಿತನೇ ಇವರನ್ನು ಕ್ಷಮಿಸಿ. ತಾವು ಏನು ಮಾಡುತ್ತಿರುವರು ಎಂದು ಇವರು ಅರಿಯರು’ ಎಂದು ಶಿಲುಬೆಯಿಂದ ಹೇಳಿದ ಯೇಸು ಕ್ಷಮೆಯ ಹೊಸ ಉಪದೇಶವನ್ನು ಮನುಕುಲಕ್ಕೆ ನೀಡಿದರು. ಮುಳ್ಳುಗಳಿಂದ ತುಂಬಿದ ಗೋಲ್ಗೊಥಾ ಬೆಟ್ಟಕ್ಕೆ ಶಿಲುಬೆಯನ್ನು ಹೆಗಲಿಗೇರಿಸಿ ಯೇಸು ನಡೆದ ಶಿಲುಬೆಯ ಹಾದಿಯನ್ನು ಹದಿನಾಲ್ಕು ಹಂತಗಳಾಗಿ ವಿಭಜಿಸಿ ವಿಮರ್ಶಿಸಿ ಕ್ರೈಸ್ತ ಬಾಂಧವರು ಧ್ಯಾನ- ಪ್ರಾರ್ಥನೆ ಸಲ್ಲಿಸಿದರು. ಯೇಸು ಪ್ರಾಣಾರ್ಪಣೆ ಮಾಡಿದ ದಿನ ನಡು ಮಧ್ಯಾಹ್ನದವರೆಗೆ ಸೂರ್ಯ ಕಾಂತಿಹೀನನಾಗಿದ್ದನು. ಎಲ್ಲೆಡೆ ಕತ್ತಲೆ ಆವರಿಸಿತ್ತು. ಮಹಾದೇವಾಲಯದ ತೆರೆ ಇಬ್ಭಾಗವಾಗಿ ಸೀಳಿತು. ಯೇಸು ಸ್ವಾಮಿ ‘ಪಿತನೇ ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ’ ಎಂದು ಗಟ್ಟಿಯಾಗಿ ಕೂಗಿ ಪ್ರಾಣ ಬಿಟ್ಟರು.
ಯೇಸುವಿನ ಹೆಗಲಿಗೆ ಶಿಲುಬೆ ನೀಡುವುದು, ಯೇಸು ಮೊದಲ ಬಾರಿ ಶಿಲುಬೆಯಡಿ ಬೀಳುವುದು, ಯೇಸು ತನ್ನ ದುಃಖತಪ್ತ ಮಾತೆಯನ್ನು ನೋಡುವುದು, ಸಿರೆನಾದ ಸೈಮಾನ್ ಯೇಸುವಿಗೆ ಶಿಲುಬೆ ಹೊರಲು ಸಹಾಯ ಮಾಡುವುದು, ವೆರೊನಿಕಾ ಯೇಸುವಿನ ಮುಖಾರವಿಂದವನ್ನು ಒರೆಸುವುದು, ಯೇಸು ಎರಡನೇ ಬಾರಿ ಶಿಲುಬೆಯಡಿ ಬೀಳುವುದು, ಯೇಸು ಜೆರುಸಲೇಂನ ಮಹಿಳೆಯರಿಗೆ ಸಾಂತ್ವನ ಹೇಳುವುದು, ಯೇಸು ಮೂರನೇ ಬಾರಿ ಶಿಲುಬೆಯಡಿ ಬೀಳುವುದು, ಯೇಸುವಿನ ದೇಹದ ವಸ್ತ್ರ ತೆಗೆದು ನಗ್ನ ಮಾಡುತ್ತಾರೆ. ಯೇಸುವನ್ನು ಶಿಲುಬೆಗೇರಿಸುವುದು, ಯೇಸು ಶಿಲುಬೆಯಲ್ಲಿ ಪ್ರಾಣ ಬಿಡುವುದು, ಯೇಸುವಿನ ಪಾರ್ಥಿವ ಶರೀರ ಶಿಲುಬೆಯಿಂದ ಕೆಳಗಿಳಿಸುತ್ತಾರೆ. ಯೇಸುವಿನ ಪಾರ್ಥಿವ ಶರೀರವನ್ನು ಸಂಸ್ಕರಿಸುವುದು ಹೀಗೆ ಹದಿನಾಲ್ಕು ಹಂತಗಳಲ್ಲಿ ಶಿಲುಬೆ ಹಾದಿ ನಡೆಯಿತು. ನೂರಾರು ಕ್ರೈಸ್ತ ಬಾಂಧವರು ಶಿಲುಬೆ ಹಾದಿಯಲ್ಲಿ ಭಾಗವಹಿಸಿದರು. ಪಾಸ್ಖ ಹಬ್ಬದ ಅಂಗವಾಗಿ ಪೆರ್ಮುದೆ ಸೈಂಟ್ ಲಾರೆನ್ಸ್ ಇಗರ್ಜಿಯಲ್ಲಿ ಮಾ. 31ರಂದು ರಾತ್ರಿ 7.30ಕ್ಕೆ ಹೊಸ ಬೆಳಕಿನ ಆಶೀರ್ವಚನ, ಬಳಿಕ ದಿವ್ಯಬಲಿಪೂಜೆ ನಡೆಯಲಿದೆ. ಎ. 1ರಂದು ಬೆಳಗ್ಗೆ 8 ಗಂಟೆಗೆ ದಿವ್ಯಬಲಿಪೂಜೆ ನಡೆಯಲಿದೆ. ಧರ್ಮಗುರು ಫಾ| ಮೆಲ್ವಿನ್ ಫೆರ್ನಾಂಡಿಸ್ ನೇತೃತ್ವ ನೀಡುವರು.