ಬೆಂಗಳೂರು: ಶ್ರೀಸಾಮಾನ್ಯನ ಬದುಕಿನ ನಾಡಿಮಿಡಿತ ಅರಿತರೆ ಜನಪ್ರಿಯ ಕಾದಂಬರಿಗಳು ಸೃಷ್ಟಿಯಾಗುತ್ತವೆ ಎಂದು ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ತಿಳಿಸಿದರು.
ಬಿಎಂಶ್ರೀ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಶಾ.ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ ಮತ್ತು ಶಾ.ಬಾಲೂರಾವ್ ಅನುವಾದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಜನಪ್ರಿಯ ಕಾದಂಬರಿ ಬರೆಯುವುದು ಸುಲಭವಲ್ಲ. ಮನೆಯೊಳಗೆ ಕುಳಿತು ಮೂರ್‍ನಾಲ್ಕು ತಿಂಗಳುಗಳಲ್ಲಿ ರಚಿಸುವಂತಹದಲ್ಲ. ಹೆಣ್ಣು ಮಕ್ಕಳು ಮನೆಯಲ್ಲಿ ಕುಳಿತು ಮೂರ್‍ನಾಲ್ಕು ತಿಂಗಳುಗಳಲ್ಲಿ ಸಾಹಿತ್ಯ ಬರೆದು ಜನಪ್ರಿಯರಾಗುತ್ತಾರೆಂದರೆ ಅದಕ್ಕೊಂದು ಧ್ಯಾನಸ್ಥ ಮನಸ್ಸಿರಬೇಕು ಎಂದು ಹೇಳಿದರು.
ಕಾಲೇಜುಗಳಲ್ಲಿ ಪಾಠ ಮಾಡುವ ಉಪನ್ಯಾಸಕರು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೋಧನೆ ಮಾಡಬೇಕೆಂದರೆ ಆ ವಯಸ್ಸಿನ ಮಕ್ಕಳ ಮಟ್ಟಕ್ಕೆ ಹೋಗಿ ಬೋಧಿಸಬೇಕು. ಅದೇ ರೀತಿ ಕಾದಂಬರಿಗಳು ಜನಪ್ರಿಯವಾಗಬೇಕೆಂದರೆ ಸಾಹಿತಿಗಳು ಶ್ರೀಸಾಮಾನ್ಯನ ನಾಡಿ ಅರಿತು ಬರೆಯಬೇಕು. ಅದಕ್ಕಾಗಿ ಅವರು ಸಾಮಾನ್ಯನನ ಬದುಕು ಅನುಭವಿಸಬೇಕು. ಆಗಲೇ ಜನಪ್ರಿಯ ಸಾಹಿತ್ಯ ರಚನೆಯಾಗುವುದು ಎಂದರು.
ಜನಪ್ರಿಯ ಕಥೆಗಾರರು ಮತ್ತು ಕಾದಂಬರಿಗಾರರು ಬಳಸುವ ಸೂತ್ರಗಳನ್ನೇ ಬಳಸಿ ಶ್ರೀಧರ ಬನವಾಸಿ ಅವರು ಬೇರು ಕಾದಂಬರಿ ರಚಿಸಿದ್ದಾರೆ. ಹಲವು ಕವಲುಗಳ ಮೂಲಕ ಆರಂಭವಾಗುವ ಕೃತಿಯ ಕೊನೆಯಲ್ಲಿ ಎಲ್ಲ ಪಾತ್ರಗಳು ಒಗ್ಗೂಡಿ ಸಾಮಾನ್ಯರು ಅಸಾಮಾನ್ಯರಾಗುವ ಬಗೆಯಲ್ಲಿ ಕಾದಂಬರಿ ಚಿತ್ರಿತವಾಗಿದೆ. ಶ್ರೀಧರ ಬನವಾಸಿ ಅವರು ನವ್ಯ ಕಾದಂಬರಿಯ ಶಿಸ್ತನ್ನು ಒಡೆದು ನವೋದಯ ಕಾದಂಬರಿಯ ಮಜಲನ್ನು ಬೇರು ಕೃತಿಯಲ್ಲಿ ತಂದಿದ್ದಾರೆ ಎಂದು ತಿಳಿಸಿದರು.
ಶಾ.ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಧರ ಬನವಾಸಿ, ಬರವಣಿಗೆ ಎಂಬುದು ಒಂದು ತಪಸ್ಸಿದಂತೆ. ಮನಸ್ಸಿಗೆ ತೋಚಿದೆನ್ನೆಲ್ಲಾ ಬರೆಯಲು ಒಂದು ಪ್ರಶಾಂತ ಮನಸ್ಸು ಬೇಕು. ನಾವು ಧ್ಯಾನಿಯಾಗಿ ಮನಸ್ಸಿನ ಅಂತಸತ್ವ ಮಥಿಸಿದಾಗ ಮೂಡುವ ಬರವಣಿಗೆ ಹೆಚ್ಚು ಮೌಲಿಕವಾದುದಾಗಿರುತ್ತದೆ ಎಂದರು.
ಇದೇ ವೇಳೆ ಪ್ರೊ.ಅಶ್ವತ್ಥನಾರಾಯಣಶಾಸ್ತ್ರೀ (ನೈಷಧಂ ಎಸ್ಸೆ) ಅವರಿಗೆ ಶಾ.ಬಾಲೂರಾವ್ ಅನುವಾದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಎಂಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ ಮತ್ತು ಅಧ್ಯಕ್ಷ ಡಾ.ಆರ್.ಲಕ್ಷ್ಮೀನಾರಾಯಣ ಹಾಜರಿದ್ದರು.