Advertisement

ಅರಮನೆ ದರ್ಬಾರ್‌ ಸಭಾಂಗಣದಲ್ಲಿ ಸಿಂಹಾಸನ ಜೋಡಣೆ

06:10 AM Sep 16, 2017 | Team Udayavani |

ಮೈಸೂರು: ಶರನ್ನವರಾತ್ರಿ ಪ್ರಯುಕ್ತ ಮೈಸೂರು ಅರಮನೆಯ ದರ್ಬಾರ್‌ ಸಭಾಂಗಣದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಅವರ ಮಾರ್ಗದರ್ಶನದಲ್ಲಿ ಶುಕ್ರವಾರ ಬೆಳಗ್ಗೆ ರತ್ನಖಚಿತ ಸಿಂಹಾಸನವನ್ನು ಜೋಡಿಸಲಾಯಿತು.

Advertisement

ಬೆಳಗ್ಗೆ 7.45ಕ್ಕೆ ಅರಮನೆಯ ನೆಲಮಾಳಿಗೆಯಲ್ಲಿರುವ ಭದ್ರತಾ ಕೊಠಡಿಗೆ ಅರಮನೆ ಪುರೋಹಿತರಾದ ಶ್ಯಾಮಾ ಜೋಯಿಸ್‌ ಮತ್ತವರ ತಂಡದಿಂದ ಪೂಜೆ ಸಲ್ಲಿಸಿದ ನಂತರ ಅರಮನೆಯ ಭದ್ರತಾ ಸಿಬ್ಬಂದಿ ಹಾಗೂ ಪರಂಪರಾಗತವಾಗಿ ಸಿಂಹಾಸನ ಜೋಡಿಸುತ್ತಾ ಬಂದಿರುವ ಮೈಸೂರು ತಾಲೂಕು ಗೆಜ್ಜಗಳ್ಳಿಯ ನುರಿತ 15 ಮಂದಿ ಸಿಂಹಾಸನದ 13 ಬಿಡಿ ಭಾಗಗಳನ್ನು ಅರಮನೆಯ ದರ್ಬಾರ್‌ ಸಭಾಂಗಣಕ್ಕೆ ತಂದಿರಿಸಿದರು.

ಬಳಿಕ, 9.45 ರಿಂದ 11.30ರಲ್ಲಿ ಸಲ್ಲುವ ತುಲಾ ಲಗ್ನದಲ್ಲಿ ನವಗ್ರಹ ಹೋಮ ಹಾಗೂ ಸಿಂಹಾಸನದ ಬಿಡಿ ಭಾಗಗಳಿಗೆ ಮಂಗಳಾರತಿ ಹಾಗೂ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ಸಿಂಹಾಸನ ಜೋಡಣಾ ಕಾರ್ಯ ಆರಂಭಿಸಲಾಯಿತು.

ಬಳಿಕ, ದರ್ಬಾರ್‌ ಸಭಾಂಗಣದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯಂಜಯ ಹೋಮ, ವಾಸ್ತು ಹೋಮ, ಚಂಡಿಕಾ ಹೋಮ ಮತ್ತು ಚಾಮುಂಡೇಶ್ವರಿ ಪೂಜೆ ಮಾಡಿ, ಪೂರ್ಣಾಹುತಿ ಸಲ್ಲಿಸಲಾಯಿತು. ನಂತರ, ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿ ಭದ್ರಾಸನ ಜೋಡಿಸಲಾಯಿತು. ಸಿಂಹಾಸನ ಜೋಡಣೆಯ ನಂತರ ಬಿಳಿ ಬಟ್ಟೆ ಹೊದಿಸಲಾಗಿದ್ದು, ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1ಗಂಟೆವರೆಗೆ ಅರಮನೆಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿತ್ತು.

ಅರಮನೆ ಪ್ರವೇಶ ನಿರ್ಬಂಧ
ಧಾರ್ಮಿಕ ಪೂಜೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಮೈಸೂರು ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸೆ.21ರಂದು ಮಧ್ಯಾಹ್ನ 1.30ರವರೆಗೆ ಅರಮನೆಯ ಒಳಾವರಣ ಪ್ರವೇಶ ನಿರ್ಬಂಧಿಸಲಾಗಿದ್ದು, ಹೊರ ಆವರಣಕ್ಕೆ ಪ್ರವೇಶವಿದೆ. 

Advertisement

ಸೆ.29ರಂದು ಮಧ್ಯಾಹ್ನ 1.30ರವರೆಗೆ ಮೈಸೂರು ಅರಮನೆಯ ಒಳ ಹಾಗೂ ಹೊರ ಆವರಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಸೆ.30ರಂದು ಇಡೀ ದಿನ ಅರಮನೆಯ ಒಳ ಹಾಗೂ ಹೊರ ಆವರಣಕ್ಕೆ ಪ್ರವೇಶ ನಿರ್ಬಂಧಿಸಿದ್ದು, ದಸರಾ ಪಾಸು ಮತ್ತು ಟಿಕೇಟ್‌ ಹೊಂದಿರುವವರಿಗೆ ಮಾತ್ರ ಅಂದು ಅವಕಾಶ ಕಲ್ಪಿಸಲಾಗುವುದು. ಅ.14ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಅರಮನೆಯ ಒಳಾವರಣದ ನೆಲ ಅಂತಸ್ತಿಗೆ ಹಾಗೂ ಅರಮನೆಯ ಹೊರ ಆವರಣಕ್ಕೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು ಎಂದು ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next