ತಾಣವೆಂದೂ ಹೇಳಿದರೆ ಅತಿಶಯವೆನಿಸದು. ಅಮೃತಸರ, ಅದರಲ್ಲೂ ಮುಖ್ಯವಾಗಿ ವಿಶ್ವಪ್ರಸಿದ್ಧ ಸ್ವರ್ಣಮಂದಿರ ಕಾಣುವ ಹೆಬ್ಬಾಸೆ ಅದೆಂದೋ ಮೂಡಿದ್ದರೂ ಅಂಥ ಅವಕಾಶ ಸಿಕ್ಕಿರಲಿಲ್ಲ. ಕೊನೆಗೂ ಅದು ಸಾಕಾರಗೊಳ್ಳುವ ಲಕ್ಷಣ ಗೋಚರವಾಗುತ್ತಿದ್ದಂತೆ ಅದರ ಕನಸು ಕಾಣುವ ಕೊನೆಯ ರಾತ್ರಿ ದೆಹಲಿಯಲ್ಲಿ ಏಸಿ ರೈಲಿನ ಸೀಟು ಹಿಡಿದು ಕುಳಿತೆ. ಪಕ್ಕದಲ್ಲಿ ಕಾಲೇಜು ಯುವಕನೊಬ್ಬ ಮೊಬೈಲಿನಲ್ಲಿ ಪಂಜಾಬಿ ಹಾಡನ್ನು ಕೇಳುತ್ತ ತಾನೂ ಅದರೊಂದಿಗೆ ಗುನುಗುನಿಸುತ್ತಿದ್ದ. ಲುಧಿಯಾನದಲ್ಲಿ ಇಳಿಯುವ ಒಂದು ಪೂರ್ತಿ ಕುಟುಂಬವದು.
Advertisement
ನಾನು ಪಕ್ಕದ ಕಂಪಾರ್ಟ್‌ಮೆಂಟಿನಲ್ಲಿ ಬಂದು ಕುಳಿತದ್ದನ್ನು ಕಂಡು ಆತ ಒಮ್ಮೆ ಸ್ನೇಹನಗೆ ಬೀರಿದ. ನಾನೂ ಮರುನಕ್ಕೆ. ಆ ಬಳಿಕ ಅದೇನೋ ಥಟ್ಟನೆ ನೆನಪಾದವನಂತೆ ಕಿಸೆಯಿಂದ ಒಂದಿಷ್ಟು ಹಣ ತೆಗೆದು ಎಣಿಸಿದ. ಅಲ್ಲಿಯೇ ಚಾಕಲೇಟು, ಚಿಪ್ಸ್‌ನಂತ ಕುರುಕಲು ತಿಂಡಿಯನ್ನು ಒಯ್ಯುತ್ತಿದ್ದವನನ್ನು ತಡೆದು ಒಂದು ಕ್ಯಾಡ್‌ಬರೀಸ್ ಕೊಂಡು ಅದನ್ನು ತೆರೆದು ನನ್ನೊಂದಿಗೆ ರೈಲು ಹತ್ತಿದವರನ್ನು ಲೆಕ್ಕ ಹಾಕಿದ. “ತೀನ್… ತೀನ್…’ ಎಂದು ತನ್ನಷ್ಟಕ್ಕೇ ಗೊಣಗುತ್ತ ಕ್ಯಾಡ್‌ಬರೀಸ್‌ನ ಮೂರು ತುಂಡನ್ನು ಮುರಿದು ನನ್ನ ಕೈಗಿತ್ತು ಉಳಿದುದ್ದನ್ನು ತಾನು ತಿಂದು ಮಲಗಿಬಿಟ್ಟ. ಸಾಮಾನ್ಯವಾಗಿ ನಾವು ಜೋಕುಗಳಲ್ಲಿ ಪಂಜಾಬಿಗಳ ಅಪಹಾಸ್ಯಗೈಯ್ಯುತ್ತೇವೆ, ಅವರನ್ನು ಜೋಕಿನ ಸರಕುಗಳನ್ನಾಗಿಸುತ್ತೇವೆ, ಅಲ್ಲಿನ ರಾಜಕಾರಣಿಗಳು ಡ್ರಗ್ಸ್‌ನಂಥ ದಂಧೆಯಲ್ಲಿ ಶಾಮೀಲಾಗಿದ್ದರೂ ಅವರ ನಿಷ್ಕ್ರಿಯತೆಯಿಂದ ಎಂದಿಗೂ ಮುಗಿಯದೇ ಉಲ್ಬಣಗೊಳ್ಳುತ್ತಿರುವ ಆ ಸಮಸ್ಯೆಯನ್ನು ಜನಸಾಮಾನ್ಯರ ತಲೆಗೇ ಕಟ್ಟುತ್ತೇವೆ. ಆದರೆ ಅವರ ಆದರಾತಿಥ್ಯ, ಭ್ರಾತೃತ್ವದ ಸದ್ಗುಣಗಳನ್ನು ಹೊಗಳುವ ಹೃದಯಶ್ರೀಮಂತಿಕೆ ತೋರುವುದಿಲ್ಲ. ಬರಿಯ ಬಾಲಿವುಡ್ ಚಲನಚಿತ್ರಗಳಲ್ಲಿ ಅದನ್ನೆಲ್ಲ ಕಾಣುತ್ತಿದ್ದ ನನಗೆ ಆ ತರುಣನ ಈ ನಡೆಯಿಂದ ಅದರ ಸಾಕ್ಷಾತ್ ದರ್ಶನವಾಗಿಬಿಟ್ಟಿತು. ಚಲನಚಿತ್ರಗಳಲ್ಲಿ ಅವರನ್ನು ಉತ್ಪ್ರೇಕ್ಷೆಯೆಂಬ ಮಟ್ಟಕ್ಕೆ ಮುಖಸ್ತುತಿಗೈಯ್ಯುತ್ತಾರೇನೋ ಎಂಬ ಭಾವ ತಿರುಗಿ ಅವರ ಬಗೆಗೊಂದು ನೈಜಾಭಿಮಾನವೂ, ಸಹಾನುಭೂತಿಯೂ ಉಂಟಾಗುವುದಕ್ಕೆಂದೇ ಈ ಘಟನೆ ಜರುಗಿತೇನೋ ಅನ್ನಿಸಿದ್ದು ಸತ್ಯ.
ಅಮೃತಸರ್ ಪಟ್ಟಣದಿಂದ ಜಲಿಯನ್‌ವಾಲಾ ಬಾಗ್ ಮೂರು ಕಿ.ಮೀ. ವ್ಯಾಪ್ತಿಯೊಳಗೆ ಬರುತ್ತದೆ. ಬ್ರಿಟಿಷರ ರೌಲತ್ ಆ್ಯಕ್ಟ್‌ನ ವಿರುದ್ಧ ದಂಗೆಯೆದ್ದ ಜನ
1919ರ ಎಪ್ರಿಲ್ 13ರಂದು ಒಂದೆಡೆ ಸೇರಿದ ಬಳಿಕ ನಡೆದ ದುರಂತ ಭಾರತದ ಇತಿಹಾಸದಲ್ಲೇ ಇಂಗ್ಲಿಷರ ಕ್ರೌರ್ಯಕ್ಕೆ, ನೂರಾರು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ ಸಾಕ್ಷಿಯಾಗಿಬಿಟ್ಟಿತು. ಸಂಜೆಯ ಹೊತ್ತಿಗೆ ಏನೊಂದೂ ಸೂಚನೆ ನೀಡದೇ ಹತ್ತರಿಂದ ಹದಿನೈದು ನಿಮಿಷ ಸತತವಾಗಿ ಗುಂಡಿನ ಸುರಿಮಳೆಗೈಯ್ಯಲು ಆದೇಶಿಸಿದ ಜನರಲ್ ಡೈಯರ್ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂಬ ಕುಖ್ಯಾತಿ ತಗಲುವಂತೆ ಮಾಡಿದ ನಿರ್ಲಜ್ಜ ಕ್ರೂರಿ.
Related Articles
Advertisement
ಒಂದೆಡೆ ಗೋಡೆಯ ಮೇಲೆ 38 ಅಚ್ಚುಗಳಿದ್ದು, ಇನ್ನೊಂದೆಡೆ 28 ಅಚ್ಚುಗಳು ಅಂದು ನಡೆದ ಘೋರಘಟನೆಯನ್ನು ಕಣ್ಣೆದುರು ಚಿತ್ರಪಟದಂತೆ ತೋರಿಸುತ್ತವೆ. ಇನ್ನು ವಿಶಾಲವಾದ ಕಟ್ಟಡವೊಂದರಲ್ಲಿ ದುರಂತಕ್ಕೆ ಸಂಬಂಧಪಟ್ಟ ಹುತಾತ್ಮರ ಜೀವನಗಾಥೆಯನ್ನು ಚಿತ್ರಸಮೇತ ಪ್ರದರ್ಶಿಸಲಾಗಿದೆ. ಇಡಿಯ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಿದ್ದು ಮಧ್ಯಭಾಗದಲ್ಲಿ ಅಸುನೀಗಿದವರ ನೆನಪಿಗೆ ಎತ್ತರದ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಮಧ್ಯೆ ನಿಂತು ದುರಂತ ನಡೆದ ಆ ದಿನ ಸಂಜೆ ಭಗತ್‌ಸಿಂಗ್ ಶಾಲಾಚೀಲ ತಂಗಿಯ ಬಳಿ ಕೊಟ್ಟು ಇಲ್ಲಿನ ಮಣ್ಣನ್ನು ಶಾಯಿ ತುಂಬಿಸುವ ಬಾಟಲಿಯಲ್ಲಿ ತುಂಬಿಸಿ ಕೊಂಡೊಯ್ದಿದ್ದನೆಂಬುದನ್ನು ನೆನೆದರೆ ಮೈ ಜುಮ್ಮೆನಿಸುತ್ತದೆ. ಇನ್ನೊಂದೆಡೆ ವಸ್ತು ಸಂಗ್ರಹಾಲಯವಿದ್ದು, ದುರ್ಘಟನೆಯ ಬಳಿಕದ ಪತ್ರ ವ್ಯವಹಾರಗಳೂ, ಪತ್ರಿಕಾ ವರದಿಗಳೂ ಕಾಣಸಿಗುತ್ತವೆ.
ಹಿಂದಿ ಚಿತ್ರ ರಬ್ ನೇ ಬನಾ ದಿ ಜೋಡಿ ಕಂಡವರಿಗೆ ಶ್ರೇಯಾ ಘೋಷಾಲ್ ಧ್ವನಿಯು ಹಿಂಬದಿಯಿಂದ ಕೇಳುತ್ತಲೇ ಶಾರುಖ್ ಖಾನ್ ಮೆಟ್ಟಿಲು ಹತ್ತಿ ನಿಧಾನಗತಿಯಲ್ಲಿ ಬರುವ ದೃಶ್ಯ ಇಷ್ಟವಾಗದೇ ಇರಲಿಕ್ಕಿಲ್ಲ. ಅದಕ್ಕೆ ಕಾರಣ ಸ್ವರ್ಣಮಂದಿರವಲ್ಲದೇ ಬೇರೇ ಉತ್ತರ ಸಿಗಲಾರದು. ಜಲಿಯನ್‌ವಾಲಾಬಾಗ್‌ನಿಂದ ಕಾಲ್ನಡಿಗೆಯ ದೂರದಲ್ಲಿರುವ ಇದನ್ನು ಪ್ರಪಂಚದ ಅದ್ಭುತವೆಂದು ವ್ಯಾಖ್ಯಾನಿಸಿದರೂ ಅಪರಾಧವಾಗದು. ಸಿಕ್ಖರ ಪದ್ಧತಿಯಂತೆ ಶಿರೋವಸ್ತ್ರ ಧರಿಸಿ
ಒಳಹೊಕ್ಕುವಾಗ ಸ್ವರ್ಗವನ್ನೇ ಕಾಣುತ್ತಿರುವೆವೆಂಬ ಭಾವ ಮೊಳಕೆಯೊಡೆಯುತ್ತದೆ. ಒಂದೆಡೆ ಮಂದಿರದ ಚಿನ್ನದ ಬಣ್ಣವೂ, ಮಂದಿರದ ಸುತ್ತಲಿನ ವಿಶಾಲವಾದ ಕೊಳದ ಶುಭ್ರನೀರಿನ ಬಣ್ಣವೂ, ಮೇಲ್ಗಡೆಯ ಆಗಸದ ತಿಳಿನೀಲ ಬಣ್ಣವೂ ಸೇರಿ ಮನಸ್ಸನ್ನು ಆಕರ್ಷಿಸಿ ಎಂತಹಾ ಬಾಯಿಬಡುಕರನ್ನೂ ತುಸುಹೊತ್ತು ಸ್ತಬ್ಧರನ್ನಾಗಿಸುತ್ತದೆ ಇದರ ಸೌಂದರ್ಯ! ಸಿಕ್ಖರ ನಾಲ್ಕನೇ ಗುರು, ಗುರು ರಾಮದಾಸ್ ಇದರ ನಿರ್ಮಾಣದ ರೂವಾರಿಯಾದರೆ, ಐದನೇ ಗುರು ಅರ್ಜನ್ ಸಿಂಗ್ ಸಿಕ್ಖರ ಪವಿತ್ರ ಗ್ರಂಥ “ಗುರುಗ್ರಂಥ ಸಾಹಿಬ್’ನ್ನು ಸ್ಥಾಪಿಸಿದರು. ಸ್ವರ್ಣಮಂದಿಕ್ಕೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ದ್ವಾರಗಳಿದ್ದು ಸರ್ವಧರ್ಮೀಯರಿಗೂ ಮುಕ್ತಾಹ್ವಾನವನ್ನು ನೀಡುವುದರ ಪ್ರತೀಕದಂತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನಕ್ಕೆ ಸರಾಸರಿ ನಲವತ್ತು ಸಾವಿರವಾದರೆ, ರಜೆಯ ಅವಧಿ ಲಕ್ಷವನ್ನೂ ದಾಟುವುದಿದೆ. ಸಿಕ್ಖರು ನೆಲದಲ್ಲಿ ಕುಳಿತು ಕಣ್ಮುಚ್ಚಿ ದೇವರಿಗೆ ಪ್ರಾರ್ಥಿಸುವಾಗಿನ ಅವರ ನಿಷ್ಕಪಟ ಭಕ್ತಿಯನ್ನು ಸೂಕ್ಷ್ಮವಾಗಿ ಕಂಡರೆ ಖುದ್ದು ದೇವರೊಡನೆ ಸಂಭಾಷಣೆಯಲ್ಲಿ ತೊಡಗಿರುವರೋ ಎಂಬಂತೆ ಭಾಸವಾಗುತ್ತದೆ. ಮಂದಿರದೊಳಹೊಕ್ಕರೆ ಸಿಕ್ಖರ ಗುರುಗಳು ಗುರುಗ್ರಂಥ ಸಾಹಿಬ್ ಪಠಿಸುತ್ತಿರುತ್ತಾರೆ. ಮೇಲೆ ತಿರುಗುವ ಫ್ಯಾನಿನಿಂದ ಹಿಡಿದು ಬಳಸುವ ಹಾರ್ಮೋನಿಯಂವರೆಗೂ ಎಲ್ಲವೂ ಚಿನ್ನವೇ ಎಂಬುದು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ವಾಘಾ ಗಡಿ
ಅಮೃತ್‌ಸರ್ ದೇಶದ ಗಡಿಭಾಗದ ಜಿಲ್ಲೆ. ಈ ಜಿಲ್ಲೆಯ ಕಟ್ಟಕಡೆಯ ಊರು ಅಟ್ಟಾರಿ. ಅಲ್ಲಿಂದ ಪಾಕಿಸ್ತಾನದ ಲಾಹೋರ್‌ಗೆ ಕೇವಲ 23 ಕಿ.ಮೀ. ಅಮೃತ್‌ಸರ
ಪಟ್ಟಣದಿಂದ ವಾಘಾ ಗಡಿಗೆ 32 ಕಿ.ಮೀ. ಪ್ರಯಾಣವಷ್ಟೇ. ದಾರಿಯುದ್ದಕ್ಕೂ ಮಿಲಿಟರಿ ಪಡೆಯ ಕಾರ್ಯಸ್ಥಾನಗಳು ಕಾಣಿಸುತ್ತವೆ. ಎಲ್ಲಿ ನೋಡಿದರೂ ಬಿಎಸ್‌ಎಫ್ ಯೋಧರ ಖಾಕಿ ಬಟ್ಟೆಯೇ! ಅಮೃತ್‌ಸರಕ್ಕೆ ತೆರಳಿದರೆ ಒಂದೇ ದಿನದಲ್ಲಿ ತ್ರಾಸಪಡದೇ ನೋಡಬಹುದಾದ ಜಾಗಗಳು ಇವು ಮೂರಾದರೂ, ಪ್ರೇಕ್ಷಣೀಯ ಸ್ಥಳಗಳಿಗೇನೂ ಕಡಿಮೆಯಿಲ್ಲ. ಜಲಿಯನ್‌ವಾಲಾ ಬಾಗ್ ಐತಿಹಾಸಿಕವಾಗಿ ಹಿಂದೆ ನಡೆದುದ್ದನ್ನು ಕಲ್ಪಿಸಿಕೊಳ್ಳುವ ಅವಕಾಶವಿತ್ತರೆ, ಸ್ವರ್ಣಮಂದಿರ ಧಾರ್ಮಿಕ ಮತ್ತು ಸೌಂದರ್ಯದ ನೆಲೆಯಲ್ಲಿ ನೆನಪುಳಿಯುತ್ತದೆ. ಇನ್ನು ವಿದೇಶೀ ಪ್ರವಾಸಿಗರನ್ನೇ ಸೆಳೆಯುವ ವಾಘಾಗಡಿಯ ಮಹತ್ವದ ಬಗ್ಗೆ ವಿವರಿಸಬೇಕಿಲ್ಲ. ಹೀಗೇ ಈ ಮೂರನ್ನೂ ಒಮ್ಮೆ ಕಂಡ ಬಳಿಕ ಊರಿಗೆ ಮರಳಿ ಎಷ್ಟು ಕಾಲ ಸಂದರೂ ಸ್ಮತಿಯಲ್ಲಿ ಇವೆಲ್ಲವೂ ಒಟ್ಟಾಗಿ ಅನುಭವವನ್ನು ಅಮೃತದಂತೆ ಗುಟುಕು ಗುಟುಕಾಗಿ ನೀಡುತ್ತಲೇ ಇರುತ್ತವೆ. ಅವಕಾಶ ಸಿಕ್ಕಿದರೆ ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ. *ಅರ್ಜುನ್ ಶೆಣೈ