Advertisement
ತಮ್ಮ ಮನೆಯಲ್ಲೇ ಇರುವ ಗಣೇಶ್ ಕೂಡ ಈ ಸಮಯದಲ್ಲಿ ಸುಮ್ಮನೆ ಕೂತಿಲ್ಲವಂತೆ. ಇಷ್ಟು ದಿನ ಅವರು ಬಿಡುವಿದ್ದಾಗೆಲ್ಲ ಕೆಲ ಯುವ ನಿರ್ದೇಶಕರು ಬಂದು ಕಥೆ ಹೇಳಿದ್ದನ್ನು ಕೇಳುತ್ತಿದ್ದರು. ಈಗ ಯಾರೂ ಮನೆಗೆ ಬರುವಂತಿಲ್ಲ. ಇವರೂ ಆಚೆ ಹೋಗುವಂತಿಲ್ಲ. ಹಾಗಾಗಿ, ತಮ್ಮ ಮಕ್ಕಳಿಗೆ ಒಂದೊಂದು ಸಣ್ಣ ಕಥೆ ಹೇಳುವ ಮೂಲಕ ಸಮಯ ಕಳೆಯುತ್ತಿದ್ದಾರೆ.
Related Articles
Advertisement
ಗಣೇಶ್ ಬಿಡುವಿದ್ದಾಗ, ಚಿತ್ರೀಕರಣದ ಸಮಯದಲ್ಲೋ ಅಥವಾ ಮನೆಯಲ್ಲೋ ಒಂದಷ್ಟು ಕಥೆ ಕೇಳುತ್ತಿದ್ದರು. ಅವರು ಶೂಟಿಂಗ್ ಇಲ್ಲವೆಂದರೆ ಸಾಕು, ಮನೆಗೆ ಬಂದು ಕಥೆ ಹೇಳುವವರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಬಿಡುವಲ್ಲಿ ಕಥೆ ಕೇಳುತ್ತಿದ್ದ ಗಣೇಶ್ ಈಗ ಕಥೆ ಹೇಳುವಂತಾಗಿದೆ.
ಹೌದು, ಆ ಬಗ್ಗೆ ಹೇಳುವ ಅವರು, ” ನಾನು ಮಕ್ಕಳ ಜೊತೆ ಆಟ ಆಡ್ತಾ ಇದ್ದೇನೆ. ಅದು ಸಾಕಾದಾಗ, ಅವರಿಗೆ ಒಂದಷ್ಟು ಸಣ್ಣ ಕಥೆಗಳನ್ನು ಹೇಳ್ತೀನಿ. ಅವರಿಗೆ ಮೂಡ್ ಇರೋವರೆಗೆ ಕೂತು ಕೇಳುತ್ತಾರೆ. ಮೂಡ್ ಇಲ್ಲ ಅಂದಾಗ, ಎದ್ದು ಹೋಗ್ತಾರೆ. ಆಮೇಲೆ ನಾನು ಸಿನಿಮಾ ನೋಡೋಕೆ ಶುರುಮಾಡ್ತೀನಿ. ಅದೇನೆ ಇರಲಿ, ಇಷ್ಟು ದಿನ ನಾನು ಮಕ್ಕಳ ಜೊತೆ ಇದ್ದದ್ದೇ ಖುಷಿ ಕೊಟ್ಟಿದೆ.
ಇನ್ನು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಕಾರ್ಮಿಕರು, ದಿನಗೂಲಿ ನೌಕರರಿಗೆ ಸಾಕಷ್ಟು ಸಮಸ್ಯೆಯಾಗಿದೆ. ನನ್ನ ಅಭಿಮಾನಿ ಬಳಗದ ಪದಾಧಿಕಾರಿಗಳು ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾರೆ. ನಮ್ಮ ಕಡೆಯಿಂದ ಆದಂತಹ ಸಹಾಯ ಆಗುತ್ತಿದೆ. ಯಾರೂ ಕೂಡ ಉಪವಾಸ ಇರಬಾರದು ಎಂಬ ಉದ್ದೇಶ ನನ್ನದು. ಅಗತ್ಯ ಇರುವವರನ್ನು ಗುರುತಿಸಿ, ಸಂಘದಿಂದ ನಮ್ಮ ಅಭಿಮಾನಿಗಳು ಅಕ್ಕಿ, ಬೇಳೆ, ಎಣ್ಣೆ ಇತರೆ ದಿನಸಿ ವ್ಯವಸ್ಥೆ ಮಾಡುತ್ತಿದ್ದಾರೆ. ಇದರಲ್ಲಿ ಸಿಗುವ ಖುಷಿ ಬೇರೆಲ್ಲೂ ಸಿಗುತ್ತಿಲ್ಲ ಎಂಬುದು ಅವರ ಮಾತು.
ಇನ್ನು, ಕೋವಿಡ್ 10 ದಿಂದಾಗಿ ಇಡೀ ಜಗತ್ತೇ ತತ್ತರಿಸಿದೆ. ಇದರಿಂದ ಆರ್ಥಿಕ ವ್ಯವಸ್ಥೆಯೂ ಹದಗೆಟ್ಟಿದೆ. ಸಿನಿಮಾ ಇಂಡಸ್ಟ್ರಿಯೂ ಇದಕ್ಕೆ ಹೊರತಲ್ಲ. ಇದೆಲ್ಲವೂ ಸರಿಹೋಗುತ್ತೆ ಎಂಬ ವಿಶ್ವಾಸವಿದೆ. ಸಿನಿಮಾ ಬಿಡುಗಡೆ ದಿನದಂದೇ ಲಾಕ್‌ಡೌನ್ ಆಗಿದ್ದರಿಂದ ಹಲವು ಸಿನಿಮಾಗಳಿಗೆ ಪೆಟ್ಟು ಬಿದ್ದಿದೆ. ಮೊದಲು ಅಂತಹವರಿಗೆ ಬಿಡುಗಡೆ ಮಾಡಲು ಅವಕಾಶ ಕೊಡಬೇಕು. ಆ ನಂತರ ಎಲ್ಲರೂ ಅನುಸರಿಸಿಕೊಂಡು ಬರಬೇಕು. ಸದ್ಯಕ್ಕೆ ನಾನಂತೂ ಮನೆಯ ಕಾಂಪೌಂಡ್ ಬಿಟ್ಟು ಆಚೆ ಹೋಗುತ್ತಿಲ್ಲ. ಈಗ ಮನೆಯೇ ಮಂತ್ರಾಲಯ ಎಂದಷ್ಟೇ ಹೇಳುತ್ತಾರೆ ಗಣೇಶ್.