ನಟ ಗಣೇಶ್ ನಾಯಕರಾಗಿರುವ “ಕೃಷ್ಣಂ ಪ್ರಣಯ ಸಖಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಆಗಸ್ಟ್ 15ರಂದು ತೆರೆಕಾಣುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡು ಗಳು ಹಿಟ್ ಲಿಸ್ಟ್ ಸೇರಿವೆ. ಈ ಖುಷಿಯನ್ನು
ಹಂಚಿಕೊಳ್ಳಲು ಇತ್ತೀಚೆಗೆ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು. ನಟ ಗಣೇಶ್ ಸಿನಿಮಾದ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಗಣೇಶ್, “ದಂಡುಪಾಳ್ಯ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರು ಚಿತ್ರದ ಕಥೆ ಹೇಳಲು ಬರುತ್ತಿದ್ದಾರೆ ಎಂದಾಗ, ಅವರು ನನ್ನ ಜಾನರ್ ಬದಲಾಯಿಸುವ ಕಥೆ ಮಾಡಿರಬಹುದು ಅಂದುಕೊಂಡೆ. ಆದರೆ ಆರಂಭದಲ್ಲೇ ಅವರು ಎಂಟು ನಾಯಕಿಯರು ಎಂದಾಗ, ಓ ಇದು ನನ್ನ ಜಾನರ್‌ನ ಚಿತ್ರ ಅನಿಸಿತು.
ಕೃಷ್ಣಂ ಪ್ರಣಯ ಸಖಿ ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಕನ್ನಡ ಚಿತ್ರರಂಗದ ಹಿರಿಯ ನಟರೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು ಸಂತೋಷವಾಯಿತು. ನೋಡುಗರಿಗೂ ಈ ಚಿತ್ರ ಇಷ್ಟವಾಗುತ್ತದೆ. ಅಂತಹ ಉತ್ತಮ ಚಿತ್ರ ಮಾಡಿದ್ದಾರೆ ಶ್ರೀನಿವಾಸರಾಜು. ಪ್ರಶಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ . ಕೃಷ್ಣಂ ಪ್ರಣಯ ಸಖೀ ನನ್ನ ಈವರೆಗಿನ ವೃತ್ತಿಜೀವನದ ಬಿಗ್ ಬಜೆಟ್‌ನ ಚಿತ್ರ’ ಎಂದರು.
ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ, “ಇದು ಗಣೇಶ್ ಅವರಿಗೆ ಸೂಕ್ತವಾದ ಕಥೆ. ಅವರ ಹಾಗೂ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ತಂತ್ರಜ್ಞರ ಕಾರ್ಯವೈಖರಿ ಕೂಡಾ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಆರು ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳು ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಚಿನ್ನಮ್ಮ ಹಾಡಂತೂ ಈಗಾಗಲೇ ಅಧಿಕ.
ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ’ ಎಂದರು. ಜೊತೆಗೆ ಗಣೇಶ್ ಅವರಿಗೆ ಹೊಂದಿಕೆಯಾಗುವ ಮತ್ತೂಂದು ಕಥೆ ಸಿದ್ಧವಿದ್ದು, ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದರು.
ನಿರ್ಮಾಪಕರ ಪುತ್ರಿ ಪ್ರೇರಣಾ ಪ್ರಶಾಂತ್, ನಾಯಕಿಯರಾದ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸಾಧುಕೋಕಿಲ,ರಂಗಾಯಣ ರಘು, ಶಿವಧ್ವಜ್, ಗಿರಿ ಮುಂತಾದವರು ಕೃಷ್ಣಂ ಪ್ರಣಯ ಸಖೀ ಚಿತ್ರದ ಕುರಿತು ಮಾತನಾಡಿದರು.
ಈ ಚಿತ್ರವನ್ನು ತ್ರಿಶೂಲ್ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿದ್ದು, ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದಾರೆ.