ಅ.20ರಂದು ರಿಯಾಳ ಕೂಚಿಪುಡಿ ರಂಗಪ್ರವೇಶದ ದಿನ! “ಆ ದಿನ ಏನು ಮಾಡುತ್ತಿದ್ದೀರಿ? ಬರುತ್ತೀರಿ ತಾನೇ?’ ಅಂತ ಆಕೆಯ ಗುರು ವ್ರತಾ ಚಿಗಟೇರಿ ನನ್ನನ್ನು ಕೇಳಿದಾಗ “ಎಲ್ಲಿ? ರಾದರಮ್ (Rotherham )? ಆಯ್ ವುಡ್ ರಾದರ್ ಬಿ ನೋ ವೇರ್ಎಲ್ಸ್!’ ನಾನು ಮತ್ತೆಲ್ಲಿರಲಿಕ್ಕೆ ಸಾಧ್ಯ ಅಂತ ನಾನು ಒತ್ತಿ ಹೇಳಿದ್ದೆ. ಕಲ್ಲಿದ್ದಲು ಗಣಿಗಳಿಗೆ ಯಾರ್ಕ್ಶೈರ್ ಒಂದು ಕಾಲದಲ್ಲಿ ಹೆಸರುವೆತ್ತ ಪ್ರದೇಶವಾಗಿತ್ತು.
ಇಂಗ್ಲೆಂಡಿನ ಉತ್ತರ ಭಾಗದ ನಾಡಿನಲ್ಲಿ ರಾದರ್ಎನ್ನುವ ನದಿ ತೀರದಲ್ಲಿ ಬೆಳೆದ ನಗರವೇ ರಾದರಮ್. ಹ್ಯಾಮ್ ಅಂದರೆ ವಸತಿ ಅಥವಾ ಹಳ್ಳಿ. “ರೋದರ್ ಹ್ಯಾಮ್’ ಅಂತಲೂ ಕೆಲವರು ತಪ್ಪಾಗಿ ಉಚ್ಚರಿಸುವುದುಂಟು. ಹಳೆಯ ಕಾಲದಿಂದಲೂ ಕಲ್ಲಿದ್ದಲನ್ನು “ಕ್ಯಾಶ್’ ಇಂಧನವಾಗಿ ಮಾನವ ಉತ್ಖನನ ಮಾಡುತ್ತಾ ಬಂದಿದ್ದಾನಂತೆಯೇ ಅದನ್ನು “ಕಪ್ಪು ಬಂಗಾರ’ ಅಂತ ಕರೆಯುವುದುಂಟು.
ಈ ಪ್ರದೇಶದಲ್ಲಿ ಹಲವಾರು ದಶಕಗಳಿಂದ ವೈದ್ಯರಾಗಿ “ನ್ಯಾಶನಲ್ ಹೆಲ್ತ್ ಸರ್ವಿಸ್’ NHS” ನಲ್ಲಿ ಕೆಲಸ ಮಾಡಿದ ನನಗೆ ಈ ಗಣಿ ಪ್ರದೇಶದ ಕಾರ್ಮಿಕರ (ಮೈನರ್ಸ್) ಕಷ್ಟದ ಜೀವನವನ್ನು ಹತ್ತಿರದಿಂದ ನೋಡಿದ ಅನುಭವವಿದೆ. ಆ ಕಪ್ಪು ಕಲ್ಲಿದ್ದಲಿನ ಹುಡಿ ಸರ್ವವ್ಯಾಪಿ ಸಹ. ಯಾರ್ಕ್ ಶೈರ್ದಲ್ಲಿ ಅವರಾಡುವ ಮಾತಿನಲ್ಲಿ ಒಂದು ನುಡಿಗಟ್ಟು ಹೀಗಿದೆ: ವೇರ್ ದೇರ್ ಈಸ್ ಮಕ್, ದೇರ್ ಈಸ್ ಬ್ರಾಸ್’ – ಕೊಳೆಯಿದ್ದಲ್ಲಿಯೇ ಉಂಟು ಹಿತ್ತಾಳೆ (ದುಡ್ಡು)! ಕಾಕತಾಳೀಯವೆಂದರೆ “ಮಕ್ಕಿನ’ ರಾದರಂನಲ್ಲೇ ಕುಚಿಪುಡಿ ನೃತ್ಯ ಗುರು ಕನ್ನಡದ ವ್ರತಾ ಚಿಗಟೇರಿಯವರ “ಅರ್ತ್ ಕಲಾ ಕೇಂದ್ರ’ ಅನ್ನುವ ನೃತ್ಯ ಶಾಲೆ. ಹಿತ್ತಾಳೆ ತಟ್ಟೆಯ ಮೇಲಿನ ಕುಣಿತ ಕೂಚಿಪುಡಿಯ ಅಸ್ಮಿತೆ ಸಹ ಅಲ್ಲವೇ? ಅಲ್ಲಿ ಉದಯೋನ್ಮುಖ ನೃತ್ಯ ವಿದ್ಯಾರ್ಥಿಗಳಿಗೆ ಅವರು ಕಳೆದ 14 ವರ್ಷಗಳಿಂದ ಡಾನ್ಸ್ ಕಲಿಸುತ್ತಿದ್ದಾರೆ.
ಕೂಚಿಪುಡಿ ಎನ್ನುವ ನೃತ್ಯ ಶೈಲಿ 14ನೆಯ ಶತಮಾನದಲ್ಲಿ ಅದೇ ಹೆಸರಿನ ಅಗ್ರಹಾರದಲ್ಲಿ ಉದಯವಾಗಿ, ಅನಂತರ ಸಿದ್ಧೇಂದ್ರ ಯೋಗಿ ಅವರಿಂದ ಪೋಷಿಸಲ್ಪಟ್ಟು, ವಿಕಾಸಗೊಂಡು ಈಗ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಪಸರಿಸಿದೆ. ಯುನೈಟೆಡ್ ಕಿಂಗ್ಡಮ್ನಲ್ಲೂ ಈಗ ಅದನ್ನು ಕಲಿಸುವ ಅನೇಕ ಗುರುಗಳು, ಸಂಸ್ಥೆಗಳು ಸ್ಥಾಪಿಸಿಕೊಳ್ಳುತ್ತಿರುವುದು ಶ್ಲಾಘನೀಯ.
ಅಂಥವರಲ್ಲೊಬ್ಬರು ವ್ರತಾ ಚಿಗಟೇರಿಯವರು. ಭಾರತದಲ್ಲಿ ಹಲವಾರು ಪ್ರಸಿದ್ಧ ಗುರುಗಳಿಂದ ನೃತ್ಯ ಕಲಿತು, ಅಲ್ಲಿ ಅನೇಕ ನೃತ್ಯಪ್ರದರ್ಶನಗಳನ್ನು ಮಾಡಿ, ಈಗ ಕೂಚಿಪುಡಿಯಲ್ಲಿ ತಮ್ಮದೇ ಛಾಪು ಒತ್ತಿ ಆ ಕಲೆಯನ್ನು ಮುಂದಿನ ಪೀಳಿಗೆಯವರಿಗೆ ಕಲಿಸಲು ಈಗ ತಾವು ವಾಸಿಸುತ್ತಿರುವ ಇಂಗ್ಲೆಂಡಿನ ದಕ್ಷಿಣ ಯಾರ್ಕ್ಶೈರಿನಲ್ಲಿ ಉತ್ಕೃಷ್ಟ ಕೆಲಸವನ್ನು ಮಾಡುತ್ತಿದ್ದಾರೆ. ಅವರದು ಗುರು-ಶಿಷ್ಯ ಪರಂಪರೆ. ಅದನ್ನು ಇಲ್ಲಿಯೂ ಮುಂದುವರೆಸುತ್ತಿದ್ದಾರೆ. ಕಾರಣಾಂತರಗಳಿಂದ ಆಸ್ಥೆ ವಹಿಸಿ ಅದನ್ನು ಕಲಿತು ಮುಂದುವರೆಯುವ ಯುವಕ-ಯುವತಿಯರ ಕೊರತೆಯಿದೆ. ಅದಕ್ಕೆ ಅಪವಾದವೇನೋ ಅನ್ನುವಂಥ ಪ್ರತಿಭೆ ಹದಿನೇಳು ವರ್ಷದ ರಿಯಾ ಶ್ರೀವಾಸ್ತವ.
ಆಕೆ ಏಳು ವರ್ಷದವಳಿದ್ದಾಗ ತನ್ನ ತಂದೆ ತಾಯಿಯವರೊಡನೆ ವ್ರತಾ ಅವರ ಪ್ರಸ್ತುತಿ “ಬ್ಲೂ ಗಾಡ್’ ಎನ್ನುವ ನೃತ್ಯ ರೂಪಕವನ್ನು ನೋಡಲು ಹೋದಾಗ ಅದನ್ನು ಗರ ಬಡಿದವಳಂತೆ ಮಂತ್ರಮುಗ್ಧಳಾಗಿ ನೋಡಿದಾಗಿನಿಂದ ಭಾರತೀಯ ನೃತ್ಯಕ್ಕೆ ಆ ದಿನ ಮಾರು ಹೋದಳು. ಇದು ಅವಳೇ ನನಗೆ ಹೇಳಿದ್ದು. ಅಲ್ಲಿಯವರೆಗೆ ಆಕೆಗೆ ಪಾಶ್ಚಾತ್ಯ ಬ್ಯಾಲೆಯಲ್ಲಿ ಸ್ವಲ್ಪ ಪರಿಣಿತಿಯಿತ್ತು. ವ್ರತಾ ಎನ್ನುವಂಥ ಗುರು ಸಿಕ್ಕ ಮೇಲೆ ಅವಳ ಪ್ರತಿಭೆ ಅರಳಿತು. ಎಲ್ಲಿಯ ವರೆಗೆ ಎಂದರೆ ಕಳೆದ ತಿಂಗಳು ಆಕೆ ತಾನು ವಾಸಿಸುವ ಊರಿನ ಪಕ್ಕದ ರಾದರಮ್ಮಿನ ರಾಕಿಂಗ್ಹ್ಯಾಮ್ ಸೆಂಟರ್ನಲ್ಲಿ ರಂಗಪ್ರವೇಶ ಮಾಡಿದಳು (ಅರಂಗೈಟ್ರಮ್). ಕೂಚಿಪುಡಿಯಲ್ಲದೆ ಟೈಕ್ ವಾಂಡೊ, ಡ್ನೂಕ್ ಆಫ್ ಎಡಿನ್ಬರಾ ಸರ್ಟಿಫಿಕೇಟ್ (ಬಿ)ಇತ್ಯಾದಿ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲೂ ಪ್ರತಿಭೆ ತೋರಿಸಿದ ಹೆಗ್ಗಳಿಕೆ ಈ ಶಾಲಾ ಬಾಲಕಿಗೆ.
ರಂಗಪ್ರವೇಶ
ಗುರುವಿನ ಗುರು ವೈಜಯಂತಿ ಕಾಶಿಯವರ ನಾಂದಿ ಶ್ಲೋಕದೊಂದಿಗೆ ರಂಗದ ಮೇಲೆ ಪ್ರಥಮ ಬಾರಿ ಕಾಲಿಟ್ಟಾಗ ಆಕೆಗೆ ಸ್ವಲ್ಪವೂ “ನರ್ವಸ್ ನೆಸ್’ ಇದ್ದಿತೆಂದು ಊಹಿಸಲು ಆಸ್ಪದ ಕೊಡದೆ ಪ್ರವೇಶಿಸಿದಳು. ಆಹ್ವಾನಿತ ವಿಶೇಷ ಅತಿಥಿಯಾಗಿ ಬಂದಿದ್ದ ಸೌತ್ ಏಷಿಯನ್ ಆರ್ಟ್ಸ್ (SAA) ಸಂಘಟನೆಯ ರೂವಾರಿ ಕಿರಣ್ ವರ್ಡಿಯವರ ಸಮ್ಮುಖದಲ್ಲಿ ಅದು ನಡೆಯಿತು. ಅದರ ಅನಂತರ ಅಠಾಣಾ ರಾಗದಲ್ಲಿ ಜತಿಸ್ವರಮ್. ಅದರಲ್ಲಿ ಕೂಚಿಪುಡಿಯ “ನೃತ್ಯ’ ವೈಭವವನ್ನು ರಿಯಾ ಸಮರ್ಪಕವಾಗಿ ಪ್ರದರ್ಶಿಸಿದಳು.
ಅನಂತರದ ಮುಖ್ಯ ನೃತ್ಯ ಹೇಮಾದ್ರಿ ಚಿದಂಬರ ದೀಕ್ಷಿತುಲು ಅವರ ರಚನೆ “ರಾಮಾಯಾಣ’ದಿಂದ ಆಯ್ದ ಶಬ್ದಮ್. ಅದು ಆಕೆಯ ಮತ್ತು ಗುರುವಿನ ತರಬೇತಿಯ ಸಾಕ್ಷಿಯಾಗಿ ರೂಪುಗೊಂಡಿತ್ತು. ಮೋಹನರಾಗದಲ್ಲಿ ವಿವಿಧ ರಸಗಳ ಮೇಳವಿದ್ದು ರಾಮನ ಹುಟ್ಟಿನಿಂದ ಬೆಳವಣಿಗೆ, ವಿವಾಹ, ವನವಾಸ, ಸೀತಾಪಹರಣ, ಹನುಮಂತನ ಭಕ್ತಿ, ರಾವಣನ ವಧೆ ಇವೆಲ್ಲ ಪ್ರಸಂಗಗಳನ್ನು ಆಕೆ ನೃತ್ಯದಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದಳು. ಅದರಲ್ಲಿ ಆಕೆ ಪ್ರದರ್ಶಿಸಿದ ಕಣ್ಣಿನ ಹಾವ ಭಾವ, ಮತ್ತು ಲವಲವಿಕೆಯ ನೃತ್ಯದಲ್ಲಿ ಕೂಚಿಪುಡಿಯ ಸೊಗಡು ವ್ಯಕ್ತವಾಗುತ್ತಿತ್ತು.
ಗುರು ವೀಣಾಮೂರ್ತಿ ವಿಜಯ್ ಅವರ ನೃತ್ಯ ಸಂಯೋಜನೆಯಲ್ಲಿ ಎತ್ತಿದ ಕೈ ಎಂದು ತೋರುವುದು “ಸಂಧ್ಯಾ ತಾಂಡವದಲ್ಲಿ’ ನಟರಾಜನ ತಾಂಡವ ನೃತ್ಯದ ಅಳವಡಿಕೆ. ಅದನ್ನು ರಿಯಾ ಅಮೋಘವಾಗಿ ಪ್ರದರ್ಶಿಸಿ ಈ ನೃತ್ಯ ಶೈಲಿಗೆ ಅಪರಿಚರಾದವರಿಂದಲೂ ತಲೆದೂಗಿ ಕರತಾಡನ ಗಳಿಸಿದಳು.
ನನಗೆ ಇನ್ನೂ ಹಿಡಿಸಿದ್ದು ಆರಂಭದಿಂದ ಮುಕ್ತಾಯದ ವರೆಗೆ ವಿಪ್ರನಾರಾಯಣ ಚರಿತಂದಿಂದ ಆಯ್ದ “ವೆಡಲೇರ ವಯ್ನಾರುಲು’ ಎನ್ನುವ ಪಾತ್ರ ಪ್ರವೇಶ ದರವಿನಲ್ಲಿ ಆಕೆ ಪ್ರದರ್ಶಿಸಿದ ಮುಕ್ತ ಅಭಿವ್ಯಕ್ತಿ. ವೇಂಪಟಿ ಚಿನ್ನ ಸತ್ಯಂ ಅವರ ನೃತ್ಯ ಸಂಯೋಜನೆ ಬಹು ಪ್ರಸಿದ್ಧ ಅಂತೆ. ಕೇದಾರ ಗೌಳ ರಾಗದಲ್ಲಿ ಅದು ಮನರಂಜನೆಯನ್ನೂ ಒದಗಿಸಿತ್ತು. ಆಕೆ ಸ್ವೇಚ್ಛೆಯಾಗಿ ಕೈ ಬೀಸುತ್ತ ಬಂದು ಬಳುಕಿದ ಒಯ್ನಾರ ನಿಂತುಕೊಂಡು ನೋಡುವಂತಿತ್ತು!
ಕೊನೆಯದಾಗಿ ಆಕೆ ಆಯ್ದುಕೊಂಡದ್ದು ಕೃಷ್ಣನ ಮೇಲಿನ “ನಂದ ನಂದನ ಗೋಪಾಲ ನವನೀತ ಚೋರ’ (ಶ್ರೀ ನಾರಾಯಣ ತೀರ್ಥ) ತರಂಗಂ. ಸಮತೋಲನ ಕಾಯುತ್ತಾ ತಟ್ಟೆಯ ಮೇಲೆ ಬ್ಯಾಲನ್ಸ್ ಮಾಡುತ್ತಾ ಕುಣಿಯುತ್ತ ಹಾವ ಭಾವಗಳನ್ನೂ ಪ್ರದರ್ಶಿಸುವುದು “ಚಾಲೆಂಜಿಂಗ್’ ಅನ್ನಬಹುದು. ಅದನ್ನು ಇಲ್ಲಿ ಕಂಡೆವು.
ಬಹುದಿನಗಳ, ವರ್ಷಗಳ ಅಭ್ಯಾಸ ಬಲದಿಂದಲೇ ಅದನ್ನು ಸಾಧಿಸಬಹುದು ಎಂದು ಸಭಿಕರಿಗೆ ಮನವರಿಕೆಯಾದದ್ದರಲ್ಲಿ ವಿದಿತವಾಗಿತ್ತು. ಆದರೆ ತೀರ್ಪುಗಾರರಾಗಿ ಬಂದ ಕಿರಣ್ ವರ್ಡಿಯವರ ಮೆಚ್ಚುಗೆಯೊಂದಿಗೆ ಆಶೀರ್ವಚನಗಳನ್ನೂ ರಿಯಾ ಪಡೆದುಕೊಂಡಳು. “ರಂಗಪ್ರವೇಶವು’ ಪ್ರತೀ ನರ್ತಕಿಯ ಮೊದಲ ಹೆಜ್ಜೆಯೇ.
ಗುರು ವ್ರತಾ ಚಿಗಟೇರಿಯವರಿಗೂ ಒಂದು ರೀತಿಯ ಪರೀಕ್ಷೆಯೇ ಆಗಿತ್ತಾದರೂ ತಾನು ಕಟೆದ ಮೂರ್ತಿಯ ಸಾಫಲ್ಯದಿಂದ ಅವರಿಗೂ ಅಂದು ಹೆಮ್ಮೆಯಾಗಿತ್ತು. ಅವರನ್ನು ಸಂದರ್ಶಿಸುತ್ತ “ನೀವು ರಿಯಾನಲ್ಲಿ ಕಂಡ ಗುಣವೇನು?’ ಎಂದು ನಾನು ಕೇಳಿದಾಗ ಅವರು ಹೇಳಿದ್ದು: “ಈ ಪರದೇಶದಲ್ಲಿ ನೃತ್ಯ ಕಲಿಯಲು ರಿಯಾ ಶ್ರೀವಾಸ್ತವ ಅವಳ ಸ್ಥಿರ ಸಂಕಲ್ಪ ಮತ್ತು ಧೃಢ ನಿಶ್ಚಯ!’.
ಶಿಷ್ಯಳಿಗೆ ಕೊನೆಗೊಂದು ಅವರ ಕಿವಿ ಮಾತು: ಕೊನೆಯ ವರೆಗೆ ನಮ್ಮಲ್ಲುಳಿಯುವುದು ನಾವು ಪ್ರೀತಿಸಿದ್ದು; ನಾವು ಪ್ರೀತಿಸುವುದು ನಾವು ತಿಳಿದುಕೊಂಡದ್ದನ್ನೇ ಮತ್ತು ನಾವು ತಿಳಿದುಕೊಂಡು ಅರಗಿಸಿಕೊಳ್ಳುವುದು ನಾವು ಕಲಿತದ್ದನ್ನೇ! ಈ ಉಕ್ತಿ ಮತ್ತು ಮೊದಲು ಅಹಂಕಾರವನ್ನು ತೊರೆಯುವುದೇ ಹಿರಿಯರ ಪಾದಧೂಳಿಯ ಸ್ಪರ್ಶದ ಉದ್ದೇಶ’ ಎಂದು ಹೇಳಿದ ವರ್ಡಿಯವರ ಉಪದೇಶ ಇವೆರಡನ್ನೂ ಸ್ವೀಕಾರ ಮಾಡಿದ ಶಿಷ್ಯರು ಧನ್ಯರಾಗುತ್ತಾರೆ!
*ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್