Advertisement
1929ರಲ್ಲಿ ಹುಟ್ಟಿ 2021ರಲ್ಲಿ ಬದುಕಿನ ಓಟ ಮುಗಿಸಿದ ಅವರು ಮೃತಪಟ್ಟಿದ್ದಾರೆ ಎಂದು ಎಂದಾದರೂ ಒಪ್ಪಲು ಸಾಧ್ಯವೇ? 91 ವರ್ಷದ ಅವರ ಬದುಕು ಎಷ್ಟು ದೀರ್ಘವಾಗಿದೆ ಎಂದರೆ ಇನ್ನು ಮತ್ತೆ 91 ವರ್ಷ ಕಳೆದರೂ; ಅವರು ಬದುಕಿಯೇ ಇರುತ್ತಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಲ್ಲಿ ಅವರು ಓಡುವುದನ್ನು ನಿಲ್ಲಿಸಿ ಎಷ್ಟೋ ದಶಕಗಳು ಕಳೆದಿರಬಹುದು, ಅವರು ನೀಡಿದ ಸ್ಫೂರ್ತಿಯಿಂದಲೇ ಓಟವನ್ನು ಆರಂಭಿಸಿರುವ, ಮುಂದುವರಿಸಿರುವ ಆ್ಯತ್ಲಿಟ್‌ಗಳಿಗೆ ಲೆಕ್ಕವಿದೆಯೇ?ಮಿಲ್ಖಾ ಎಂಬ ಅಪರಂಜಿ ಚಿನ್ನ ಶುಕ್ರವಾರ ರಾತ್ರಿ 11.30ಕ್ಕೆ ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಯಲ್ಲಿ ಕೊರೊನಾ ಕಾರಣಕ್ಕೆ ದೇಹದ ಹಂಗು ಕಳಚಿಕೊಂಡರು. ಆದರೆ ನಮ್ಮ ಭಾವಕೋಶಗಳಲ್ಲಿ ಅವರು ಅಚ್ಚೊತ್ತಿರುವ ನೆನಪುಗಳಿಂದ ಭಾರತೀಯರು ಎಂದೂ ಕಳಚಿಕೊಳ್ಳಲು ಸಾಧ್ಯವಿಲ್ಲ.
1929ರ ನ. 20ರಂದು, ಈಗ ಪಾಕಿಸ್ಥಾನಕ್ಕೆ ಸೇರಿರುವ ಗೋವಿಂದಪುರದಲ್ಲಿ ಮಿಲ್ಖಾ ಸಿಂಗ್ ಜನನವಾಗಿತ್ತು. ಅದು 15 ಮಂದಿ ಒಡಹುಟ್ಟಿದವರ ದೊಡ್ಡ ಪರಿವಾರ. ದೇಶ ವಿಭಜನೆಗೂ ಮೊದಲು 8 ಮಂದಿ ತೀರಿಹೋಗಿದ್ದರು. ವಿಭಜನೆಯ ವೇಳೆ ಸಂಭವಿಸಿದ ಗಲಭೆಯಲ್ಲಿ ಮಿಲ್ಖಾ ಅವರ ಹೆತ್ತವರು, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರು ಬಲಿಯಾದರು. ಅಪಾಯವರಿತ ಮಿಲ್ಖಾ ಪರಿವಾರ ಹೊಸದಿಲ್ಲಿಗೆ ಧಾವಿಸಿ ಬಂತು. ಅಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಕಾಲ ಕಳೆಯಿತು. ಒಮ್ಮೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪಯಣಿಸಿದ್ದಕ್ಕೆ ಮಿಲ್ಖಾ ತಿಹಾರ್ ಜೈಲನ್ನೂ ಸೇರ ಬೇಕಾಯಿತು. ಆಗ ಸಹೋದರಿ ತನ್ನ ಚಿನ್ನವನ್ನು ಅಡವಿಟ್ಟು ಮಿಲ್ಖಾ ಬಿಡುಗಡೆಗೆ ನೆರವಾಗಿದ್ದರು. ಪುಸ್ತಕ ಮತ್ತು ಸಿನೆಮಾ
ಮಿಲ್ಖಾ ಸಿಂಗ್ ಅವರ ಆತ್ಮಕಥೆ “ದ ರೇಸ್ ಆಫ್ ಮೈ ಲೈಫ್’ 2013ರಲ್ಲಿ ಬಿಡುಗಡೆಯಾಗಿತ್ತು. ಮುಂದೆ ಇದು “ಭಾಗ್ ಮಿಲ್ಖಾ ಭಾಗ್’ ಚಿತ್ರಕ್ಕೂ ಸ್ಫೂರ್ತಿಯಾಯಿತು. ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ಈ ಚಿತ್ರದಲ್ಲಿ ಫರಾನ್ ಅಖ್ತರ್, ಮಿಲ್ಖಾ ಪಾತ್ರವನ್ನು ನಿಭಾಯಿಸಿದ್ದರು. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಬಾಚಿತು. 100 ಕೋ.ರೂ.ಗಳ ದೊಡ್ಡ ಮೊತ್ತವನ್ನೇ ಗಳಿಸಿತು. ಮಿಲ್ಖಾ ಕೇವಲ ಒಂದು ರೂ.ಗೆ ಇದರ ಹಕ್ಕನ್ನು ಮಾರಾಟ ಮಾಡಿದ್ದರು. ಆದರೆ ಇದರ ಲಾಭಾಂಶದ ಒಂದು ಪಾಲನ್ನು ಮಿಲ್ಖಾ ಸಿಂಗ್ ಚಾರಿಟೆಬಲ್ ಟ್ರಸ್ಟ್’ಗೆ ನೀಡಬೇಕೆಂಬ ಷರತ್ತು ವಿಧಿಸಿದ್ದರು.
Related Articles
ಮಿಲ್ಖಾ ಸಿಂಗ್ ಅವರನ್ನು ಫ್ಲೈಯಿಂಗ್ ಸಿಕ್ಖ್’ (ಹಾರುವ ಸಿಕ್ಖ್) ಎಂಬ ಹೆಸರಿನಿಂದ ಕರೆದವರು ಪಾಕಿಸ್ಥಾನದ ದ್ವಿತೀಯ ಅಧ್ಯಕ್ಷ, ಫೀಲ್ಡ್ ಮಾರ್ಷಲ್ ಅಯೂಬ್ ಖಾನ್. 1960ರಲ್ಲಿ ಪಾಕಿಸ್ಥಾನದಲ್ಲಿ ನಡೆದ ಕೂಟದಲ್ಲಿ ಅಲ್ಲಿನ ಖ್ಯಾತ ಓಟಗಾರ ಅಬ್ದುಲ್ ಖಲಿಖ್ ಅವರನ್ನು ಮಿಲ್ಖಾ ಹಿಂದಿಕ್ಕುತ್ತಾರೆ. ಅಂದಿನ ಪ್ರಶಸ್ತಿ ಸಮಾರಂಭದಲ್ಲಿ ಅಯೂಬ್ ಖಾನ್ ಭಾರತೀಯ ಓಟಗಾರನನ್ನು ಫ್ಲೈಯಿಂಗ್ ಸಿಕ್ಖ್’ ಎಂಬ ಹೆಸರಿನಿಂದ ಕರೆಯುತ್ತಾರೆ. ಇದಕ್ಕೂ ಒಂದು ವರ್ಷ ಮೊದಲು ಭಾರತ ಸರಕಾರ ಹೆಮ್ಮೆಯ ಕ್ರೀಡಾ ಸಾಧಕನಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ 40 ವರ್ಷ ವಿಳಂಬವಾಗಿ (2001) ಅರ್ಜುನ ಪ್ರಶಸ್ತಿ ನೀಡಿದ್ದು ಮಿಲ್ಖಾ ಗೆ ಮಾಡಿದ ಅವಮಾನವೇ ಸೈ.
Advertisement
ವಿಶ್ವದಾಖಲೆ ನಿರ್ಮಿಸಿದ್ದರೇ?ಒಂದು ಮೂಲದ ಪ್ರಕಾರ, ರೋಮ್ ಒಲಿಂಪಿಕ್‌ಗೂ ಮುನ್ನ ನಡೆದ ಫ್ರಾನ್ಸ್ ಕೂಟವೊಂದರಲ್ಲಿ ಮಿಲ್ಖಾ ಸಿಂಗ್ 45.8 ಸೆಕೆಂಡ್‌ಗಳ ಸಾಧನೆಯೊಂದಿಗೆ 400 ಮೀ. ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು ಎಂಬ ಮಾತೂ ಇದೆ. ಆದರೆ 1956ರ ಲಾಸ್ ಏಂಜಲೀಸ್ ಒಲಿಂಪಿಕ್‌ನಲ್ಲಿ ಅಮೆರಿಕದ ಲೂ ಜಾನ್ಸ್ ಅವರಿಂದ ದಾಖಲೆ ನಿರ್ಮಾಣಗೊಂಡಿತ್ತು ಎಂದು ಅಧಿಕೃತ ದಾಖಲೆ ಹೇಳುತ್ತವೆ. ಹಾಗಾಗಿ ಇಲ್ಲಿ ಮಿಲ್ಖಾ ಹೆಸರಿನಿಂದ ಈ ದಾಖಲೆ ತಪ್ಪಿಹೋಗಿದೆ. ಸರಕಾರಿ ಗೌರವ ಸಲ್ಲಿಕೆ
ಭಾರತದ ಮಹಾನ್ ಆ್ಯತ್ಲಿಟ್‌ಮಿಲ್ಖಾ ಸಿಂಗ್ ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು. ಪುತ್ರ ಜೀವ್ ಮಿಲ್ಖಾ ಸಿಂಗ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಅಗಲಿದ ಓಟಗಾರನ ಗೌರವಾರ್ಥ ಪಂಜಾಬ್ ಸರಕಾರ ಒಂದು ದಿನದ ಶೋಕಾಚರಣೆಯನ್ನೂ ಘೋಷಿಸಿತು. ಭಾರತ ಮತ್ತು ಪಂಜಾಬ್ ಪಾಲಿಗೆ ಇದು ಅತ್ಯಂತ ದುಃಖದ ದಿನ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.