Advertisement
ಬದಲಾವಣೆ ಜಗದ ನಿಯಮ. ನಮ್ಮ ಶರೀರದ ಜೀವಕೋಶಗಳೇ ಪ್ರತೀಕ್ಷಣಕ್ಕೂ ಬದಲಾಗುತ್ತಿರುತ್ತವಂತೆ. ಅಂದಮೇಲೆ ಸುತ್ತಮುತ್ತಲಿನ ಪ್ರಪಂಚ, ಅದರೊಂದಿಗಿನ ನಮ್ಮ ವ್ಯವಹಾರ, ಸಂವಹನ ವಿಧಾನಗಳು ಬದಲಾಗದೇ ಇರುತ್ತವೆಯೇ? ಹಾಗಾಗಿ, ಪತ್ರಿಕೆಗಳಲ್ಲಿ ಬಳಕೆಯಾಗುವ ಭಾಷೆ, ಪದಬಳಕೆ, ಶೈಲಿ ಸಹ ಕಾಲದಿಂದ ಕಾಲಕ್ಕೆ ಬದಲಾಗಿಯೇ ಆಗುತ್ತವೆ.
Related Articles
Advertisement
ಒಂದೇ ಸ್ವರೂಪದ ಭಾಷೆ ಅಗತ್ಯಕರ್ನಾಟಕದಲ್ಲಿ ಆಗಿಹೋದ ಪತ್ರಕರ್ತರಲ್ಲಿ ಖ್ಯಾತನಾಮರೆನಿಸಿದ ಡಿ.ವಿ.ಗುಂಡಪ್ಪ, ಪಿ.ಆರ್. ರಾಮಯ್ಯ, ಬೆಟಗೇರಿ ಕೃಷ್ಣಶರ್ಮ, ತಿರುಮಲೆ ತಾತಾಚಾರ್ಯ ಶರ್ಮ, ರಂಗನಾಥ ದಿವಾಕರ, ಸಿದ್ಧವ್ವನಹಳ್ಳಿ ಕೃಷ್ಣ ಶರ್ಮ, ಕಡೆಂಗೋಡ್ಲು ಶಂಕರಭಟ್ಟ, ಮೊಹರೆ ಹನುಮಂತರಾವ್, ದಿನಕರ ದೇಸಾಯಿ, ಖಾದ್ರಿ ಶಾಮಣ್ಣ, ವೈಎನೆR, ಬನ್ನಂಜೆ ಆಚಾರ್ಯದ್ವಯರು ಮುಂತಾದವರನ್ನೆಲ್ಲ ಇಲ್ಲಿ ನೆನಪಿಸಿಕೊಳ್ಳಲೇಬೇಕು. ಕನ್ನಡ ಪತ್ರಿಕಾ ಭಾಷೆಯ ಬೆಳವಣಿಗೆಗೆ, ಭಾಷೆ ಸರಳವೂ ಪ್ರಬುದ್ಧವೂ ಆಗಿರುವುದಕ್ಕೆ, ಏಕರೂಪತೆಗೆ ಇವರೆಲ್ಲರ ಶ್ರಮ-ಸಾಧನೆಗಳು ತುಂಬ ನೆರವಾಗಿವೆ. ಆಡುಮಾತಿನ ಭಾಷೆಯಲ್ಲಾದರೆ ಭೌಗೋಳಿಕವಾಗಿ ಪ್ರತೀ 10-15 ಮೈಲು ಕ್ರಮಿಸಿದಾಗ ಸ್ವಲ್ಪವಾದರೂ ವ್ಯತ್ಯಾಸಗಳು ಕಂಡುಬರುತ್ತವೆ. ಹಾಗಾಗಿ ಆಡುಮಾತಿನಲ್ಲಿ ವಾಕ್ಯರಚನೆ, ಪದಬಳಕೆ, ಉಚ್ಚಾರ ಶೈಲಿ ಆಯಾ ಪ್ರದೇಶಗಳದಿದ್ದರೇನೇ ಮಾತಿಗೆ ಸೊಗಸು, ಸೊಗಡು. ಆದರೆ ಬರಹದ ಕ್ಷೇತ್ರಕ್ಕೆ ಬಂದಾಗ, ಪಾರಿಭಾಷಿಕ ಶಬ್ದಗಳ ಬಳಕೆಯಲ್ಲಿ, ಆಡುಮಾತಿನಷ್ಟು ಸ್ವಾತಂತ್ರ್ಯ ಸಾಧ್ಯವಿಲ್ಲ. ನಾಡಿನ ಎಲ್ಲ ಭಾಗಗಳಲ್ಲಿಯೂ ಪಾರಿಭಾಷಿಕ ಶಬ್ದಗಳು ಏಕರೀತಿಯಲ್ಲಿ ಪ್ರಯೋಗವಾಗಬೇಕು. ಹೊಸಹೊಸ ಆವಿಷ್ಕಾರಗಳು, ತಂತ್ರಜ್ಞಾನ ಬಂದಂತೆಲ್ಲ ಹೊಸಹೊಸ ಪದಗಳನ್ನು ಕನ್ನಡದಲ್ಲಿ ಕಟ್ಟಿಕೊಳ್ಳಬೇಕು. ಅದರಲ್ಲೂ, ಜನಸಾಮಾನ್ಯರನ್ನು ಪ್ರತಿದಿನವೂ ಮುಟ್ಟುವ ದಿನಪತ್ರಿಕೆಗಳಿಗೆ- ರಾಜಕಾರಣ, ಆಡಳಿತ, ಕಾನೂನು, ವಿಜ್ಞಾನ, ವಾಣಿಜ್ಯ, ಕೃಷಿ, ಕ್ರೀಡೆ, ಪ್ರವಾಸೋದ್ಯಮ, ಮನೋರಂಜನೆ ಮುಂತಾಗಿ ಹತ್ತುಹಲವು ಕ್ಷೇತ್ರಗಳ ತಾಜಾ ಸುದ್ದಿ ಹೊತ್ತು ತರುವಂಥವುಗಳಿಗೆ- ಒಂದೇ ಸ್ವರೂಪದ ಪರಿಭಾಷೆ ತೀರ ಅಗತ್ಯ. ಇದಕ್ಕೆ ಕನ್ನಡ ಪತ್ರಿಕಾರಂಗದ ಪೂರ್ವಸೂರಿಗಳು ಹಾಕಿಕೊಟ್ಟ ಭದ್ರ ಬುನಾದಿ ಮತ್ತು ಇಂದಿಗೂ ಪತ್ರಿಕೋದ್ಯಮದಲ್ಲಿ ದುಡಿಯುತ್ತಿರುವ ಅನೇಕ ಹಿರಿಯರೂ ಕಿರಿಯರೂ ಸೇರಿ ಮಾಡುತ್ತಿರುವ ಸರ್ವತೋಮುಖ ಅಭಿವೃದ್ಧಿ ಸರ್ವಥಾ ಶ್ಲಾಘನೀಯವೇ. ಅರ್ಥ ಕಳೆದುಕೊಂಡ ಪ್ರಯೋಗಶೀಲತೆ
ಅಂದಮಾತ್ರಕ್ಕೇ ಏಕರೀತಿ, ಏಕರೂಪಗಳು ಏಕತಾನತೆ ಮೂಡಿಸಬಾರದಲ್ಲ? ಪತ್ರಿಕಾ ಸಾಹಿತ್ಯವೆಂದರೆ ಅವಸರದ ಹೆರಿಗೆ ಹೌದಾದರೂ, ಹುಟ್ಟಿದ ಮಗು ಆಕರ್ಷಕವಾಗಿಯೇ ಕಾಣಬೇಕಲ್ಲ? ಆದ್ದರಿಂದಲೇ ಪತ್ರಿಕೆಗಳು ನಿರಂತರವಾಗಿ ಹೊಸತನಕ್ಕೆ, ಪ್ರಯೋಗಶೀಲತೆಗೆ ಒಡ್ಡಿಕೊಳ್ಳುತ್ತವೆ. ಲಂಕೇಶ್ ಬಳಸುತ್ತಿದ್ದ “ಬಂ’, “ಗುಂ’ (ಅನುಕ್ರಮವಾಗಿ ಬಂಗಾರಪ್ಪ ಮತ್ತು ಗುಂಡೂರಾವ್) ಹ್ರಸ್ವ ರೂಪಗಳೂ ಅಂಥದೊಂದು ಪ್ರಯೋಗವೇ. ಲಂಕೇಶ್ ಅವರದ್ದಾದರೋ ಟ್ಯಾಬ್ಲಾಯ್ಡ್ ಪತ್ರಿಕೆ, ಆದರೆ ಮುಖ್ಯವಾಹಿನಿಯ ಗಂಭೀರ ಪತ್ರಿಕೆಗಳಲ್ಲೂ “ಯಡ್ಡಿ’, “ಸಿದ್ದು’, “ಪರಮೂ’ ಕಾಣಿಸಿಕೊಂಡರು. “ಪರಂ ಗರಂ’, “ಗೌಡರ ಗುಟುರು’ ಅಂತೆಲ್ಲ ಟ್ಯಾಬ್ಲಾಯ್ಡ್ ಛಾಯೆ ವ್ಯಾಪಿಸಿತು. ತಲೆಬರಹದಲ್ಲಿ ಅತೀ ಕಡಿಮೆ ಅಕ್ಷರಗಳನ್ನು ಬಳಸಿ ಅತೀಹೆಚ್ಚು ವಿಷಯ ತುಂಬುವ ಸವಾಲಿರುವುದರಿಂದ ಸುಪ್ರೀಂ ಕೋರ್ಟ್ “ಸುಕೋ’ ಆಯ್ತು, ಮಹಾರಾಷ್ಟ್ರ “ಮಹಾ’ ಆಯ್ತು. ಈಗ ಪ್ರಮುಖ ಪತ್ರಿಕೆಗಳ ಪುಟಗಳೆಲ್ಲ ವರ್ಣರಂಜಿತ. ತಲೆಬರಹದಲ್ಲಿ ಪದಭಾಗಕ್ಕೆ ಬೇರೆಬೇರೆ ಬಣ್ಣ ಬಳಸಿ ಶ್ಲೇಷೆಯ ನಲಿದಾಟ. ಒಂದು ಮಿತಿಯೊಳಗೆ ಇವೆಲ್ಲ ಚಂದವೇ. ಆದರೆ ನವಿಲು ಕುಣಿಯಿತೆಂದು ಕೆಂಬೂತ ತಾನೂ ಕುಣಿದರೆ ಆಭಾಸವಾಗುತ್ತದೆಂದು ಗೊತ್ತಿರಬೇಕು. ಎಲ್ಲಿ ಹೋಯಿತು ಆ ಕಾಲ?
ಒಂದು ಕಾಲವಿತ್ತು, ಶಾಲೆಯಲ್ಲಿ ಪ್ರಾರ್ಥನೆ, ಅಸೆಂಬ್ಲಿ ಆದಮೇಲೆ ಆವತ್ತಿನ ದಿನಪತ್ರಿಕೆಯ ಮುಖ್ಯ ತಲೆಬರಹಗಳನ್ನೋ, ಸಂಪಾದಕೀಯವನ್ನೋ ಒಬ್ಬೊಬ್ಬ ವಿದ್ಯಾರ್ಥಿಯಿಂದ ಓದಿಸುವ ಕ್ರಮವಿತ್ತು. ಇದು ಲೋಕಜ್ಞಾನವರ್ಧನೆಗಷ್ಟೇ ಅಲ್ಲ, ಭಾಷೆಯ ಕಲಿಕೆಗೂ. ಪತ್ರಿಕೆಗಳ ಭಾಷೆಯೆಂದರೆ ಅಷ್ಟು ಶ್ರೇಷ್ಠ ಗುಣಮಟ್ಟದ್ದು, ಚಿಕ್ಕಂದಿನಿಂದಲೇ ಕಲಿತರೆ ಒಳ್ಳೆಯದೆಂಬ ಭಾವನೆಯಿತ್ತು. ಹಿಂದಿನ ಕಾಲದಲ್ಲಿ ಉಲ್ಟಾ ಅಕ್ಷರ ರೂಪದ ಅಚ್ಚಿನ ಮೊಳೆಗಳನ್ನು ಜೋಡಿಸಿ ಮುದ್ರಿಸುತ್ತಿ¨ªಾಗಲೂ ಒಂದೇ ಒಂದು ಕಾಗುಣಿತ ದೋಷ, ವಾಕ್ಯರಚನಾ ದೋಷ, ಲೇಖನಚಿಹ್ನೆಗಳ ಮಾಯವಾಗುವಿಕೆ ಇರುತ್ತಿರಲಿಲ್ಲ. ಈಗ ಯಾವುದೇ ಪತ್ರಿಕೆಯ ಯಾವುದೇ ಪುಟ ತೆರೆದರೂ ಕಣ್ಣಿಗೆ ರಾಚುವ ಕನಿಷ್ಠ ಐದಾರು ತಪ್ಪುಗಳು- ಆಧುನಿಕ ಡಿಟಿಪಿ ವ್ಯವಸ್ಥೆಯಲ್ಲಿ ಅಕ್ಷರಗಳ ನಿಜರೂಪವೇ ಕಾಣಿಸಿಕೊಳ್ಳುವುದು ಮತ್ತು ಗಣಕಯಂತ್ರದೊಳಗೆ ಸಂಕಲನ/ಸಂಪಾದನ ನೂರುಪಟ್ಟು ಸುಲಭ ಆಗಿದ್ದರೂ! ಮರೆತೇ ಹೋಗಿರುವ ಕನ್ನಡ ಪದಗಳು
ಎಲ್ಲೆಲ್ಲೂ ಆ-ಹಾಕಾರದ (“ಗ್ಯಾಸ್ ಸಿಲಿಂಡರ್ ಬೆಲೆ ಹಗ್ಗ’; “ತಾನೇ ಎಣೆದ ಬಲೆಗೆ ಸಿಲುಕಿಕೊಂಡ ಯುವತಿ’) ತಾಂಡವ; ಅಲ್ಪಪ್ರಾಣ-ಮಹಾಪ್ರಾಣಗಳ ಪರಸ್ಪರ ಕಿತ್ತಾಟ; ವಿಭಕ್ತಿಪ್ರತ್ಯಯಗಳ ಅಸಮರ್ಪಕ ಬಳಕೆ ಅಥವಾ ಪೂರ್ಣತಿಲಾಂಜಲಿ; “ಸೊಸೆ ಕೊಂದ ಮಾವನ ಆತ್ಮಹತ್ಯೆ’ಯಂಥ ತಲೆಬರಹಗಳಲ್ಲಿ ಯಾರು ಯಾರನ್ನು ಕೊಂದದ್ದೆಂದು ಯಮಕಿಂಕರರಿಗೂ ಗೊಂದಲ; ಅತಿಪರಿಚಿತ ಕನ್ನಡ ಪದಗಳಿದ್ದರೂ ಇಂಗ್ಲಿಷಿನ ಡೌಲು. “ಬಾಲಕಿ ಹತ್ಯೆ ಮಾಡಿದ ಐಟಿ ದಂಪತಿ’ ಎಂಬ ತಲೆಬರಹವನ್ನಷ್ಟೇ ಓದಿದರೆ ಬಾಲಕಿಯೇ ಹತ್ಯೆ ಮಾಡಿದ್ದೆಂದು ಅರ್ಥೈಸಬೇಕು, ಸುದ್ದಿಯ ವಿವರ ಓದಿದರೆ ಕೋಪಗೊಂಡ ದಂಪತಿ ರೋಲಿಂಗ್ ಪಿನ್ (ಚಪಾತಿ ರೋಲ್)ನಿಂದ ಬಾಲಕಿಯ ತಲೆಗೆ ಹೊಡೆದು ಕೊಂದಿದ್ದಾ ರೆ’ ಅಂತೆ. ಅಂದರೆ ಲಟ್ಟಣಿಗೆ ಸಹ ಈಗ ಅಳಿವಿನಂಚಿನಲ್ಲಿರುವ ಕನ್ನಡ ಪದ ಅಂತಾಯ್ತು! ಆಗಬೇಕಾದ್ದೇನು?
1. ಶಬ್ದಕೋಶವನ್ನು ಪಕ್ಕದಲ್ಲಿಟ್ಟುಕೊಳ್ಳಿ ಮತ್ತು ಆಗಾಗ (ಅರ್ಥ ಹುಡುಕಬೇಕಾದಾಗಿನ ತುರ್ತಿನಲ್ಲಿ ಮಾತ್ರವಲ್ಲ, ಬಿಡುವಿನಲ್ಲೂ) ತೆರೆದು ಓದಿ. ನಿಮ್ಮ ಬರಹವನ್ನು ಅರ್ಥೈಸಲು ಓದುಗರು ನಿಘಂಟು ಬಳಸಬೇಕಾದ ಪರಿಸ್ಥಿತಿ ಬಾರದಿರಲಿ. 2. ನೀವು ಬರೆದಿದ್ದನ್ನು ಒಂದೆರಡು ಸಲ ನೀವೇ ಓದಿಕೊಳ್ಳಿ. ಸಾಧ್ಯವಾದಷ್ಟೂ ಮಟ್ಟಿಗೆ ಓದುಗರ ದೃಷ್ಟಿಕೋನದಿಂದ ಓದಿ ನೋಡಿ. ತಿದ್ದಿತೀಡಲು ಪ್ರಯತ್ನಿಸಿ. ಆರೇಳು ಪದಗಳಿಗಿಂತ ಹೆಚ್ಚಾದರೆ ಒಂದು ವಾಕ್ಯವನ್ನು ಚಿಕ್ಕದಾದ ಎರಡು ವಾಕ್ಯಗಳನ್ನಾಗಿಸಿ. 3 ಬರೆದಿದ್ದು ವ್ಯಾಕರಣಬದ್ಧ ಆಗಿರಬೇಕು ನಿಜ, ಅದಕ್ಕಿಂತಲೂ ಹೆಚ್ಚಾಗಿ ನಿಖರ, ಸ್ಪಷ್ಟ, ಆಭಾಸರಹಿತ, ಒಂದೇ ಅರ್ಥ ಕೊಡುವ ರೀತಿಯಲ್ಲಿರಬೇಕು. ವ್ಯಾಕರಣಕ್ಕೂ ಮನ್ನಣೆ ಕೊಡಬಯಸುತ್ತೀರಾದರೆ ಮೊದಲಿಗೆ ವಿಭಕ್ತಿಪ್ರತ್ಯಯಗಳ ಸರಿಯಾದ ಬಳಕೆಯನ್ನು ಕಲಿತುಕೊಳ್ಳಿ. 4 ಸುದ್ದಿವಾಹಿನಿಗಳ ಶೈಲಿ ಅನುಕರಿಸಬೇಡಿ. ಪ್ರತಿ ವಾಕ್ಯವನ್ನೂ “ಇನ್ನು’ ಅಥವಾ “ಹಾಗೇನೇ’/ಜತೆಗೆ’ ಎಂದು ಆರಂಭಿಸುವುದು,
“ಎಲ್ಲೋ ಒಂದು ಕಡೆ’, “ಆಗಿರುವಂಥದ್ದು’, “ಹೇಳಿಕೆ ಕೊಟ್ಟಿರುವಂಥದ್ದು’ಗಳನ್ನು ಅನಗತ್ಯ ತುರುಕಿಸುವುದು ಬೇಡ. 5 ದ-ಧ, ಬ-ಭ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸ ಅರಿಯಲು “ಭೇದಿಯ ಬಾಧೆ ತಟ್ಟದಂತೆ ಭೇದ ಇಲ್ಲದೆ ಬುಧವಾರ ಬೋಧನೆ’ ಮಂತ್ರವನ್ನು ದಿನಾ ಐದು ಸಲ ಬರೆದು ಪಠಿಸಿರಿ. ಅ-ಕಾರಕ್ಕೆ ಹ-ಕಾರ (ಮತ್ತು ಅದಲು ಬದಲು) ಆಡುಭಾಷೆಯಲ್ಲಿ ನಡೆಯಬಹುದು; ನಾಟಕಗಳಲ್ಲಿ, ಕಥೆ- ಕಾದಂಬರಿಗಳ ಸಂಭಾಷಣೆಯಲ್ಲಿ ಬೇಕಾಗಬಹುದು; ಪತ್ರಿಕೆಯಲ್ಲಿ ಸುದ್ದಿ, ವರದಿಗಳ ಶಿಷ್ಟ ಬರವಣಿಗೆ ಆ-ಹಾಕಾರದಿಂದ ತತ್ತರಿಸದಿರಲಿ. ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ. ಶ್ರೀವತ್ಸ ಜೋಶಿ, ಅಂಕಣಕಾರ, ವಾಷಿಂಗ್ಟನ್ ಡಿಸಿ. ಅಮೆರಿಕ