ಕೆಲವು ನೆನಪುಗಳೇ ಹಾಗೆ, ಎಷ್ಟು ವರ್ಷವಾದರೂ ಹಸಿರಾಗಿರುತ್ತವೆ. ನೆನಪು ಮಾಡಿಕೊಂಡರೆ ಏನೋ ಒಂದು ಉಲ್ಲಾಸ, ಉತ್ಸಾಹ. ಅದರಲ್ಲೂ ನಮ್ಮ ಬಾಳಿಗೆ ದೊಡ್ಡ ತಿರುವು ಕೊಟ್ಟ ಘಟನೆಗಳು ಆಗಾಗ ರಿವೈಂಡ್ ಆಗುತ್ತಲೇ ಇರುತ್ತವೆ. ನಟ ಗಣೇಶ್ ಕೂಡಾ ಅಂತಹ ನೆನಪೊಂದನ್ನು ರಿವೈಂಡ್ ಮಾಡಿ ಖುಷಿಯಾಗಿದ್ದಾರೆ. ಅದು “ಮುಂಗಾರು ಮಳೆ’ ಚಿತ್ರ. ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವ ಮಟ್ಟಕ್ಕೆ ಹಿಟ್ ಆದ ಸಿನಿಮಾ ಗಣೇಶ್ ನಾಯಕರಾಗಿರುವ “ಮುಂಗಾರು ಮಳೆ’ ಚಿತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಎಲ್ಲಾ ಓಕೆ, “ಮುಂಗಾರು ಮಳೆ’ ವಿಚಾರ ಈಗ ಯಾಕೆ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ 12 ವರ್ಷ. ಹೌದು, “ಮುಂಗಾರು ಮಳೆ’ ಚಿತ್ರ ಬಿಡುಗಡೆಯಾಗಿ ನಿನ್ನೆಗೆ ಅಂದರೆ ಡಿ.29ಕ್ಕೆ ಬರೋಬ್ಬರಿ 12 ವರ್ಷ. ಸಿನಿಮಾ ಬಿಡುಗಡೆಯಾಗಿ 12 ವರ್ಷವಾದರೂ ಆ ಸಿನಿಮಾದ ಹಾಡುಗಳು, ಡೈಲಾಗ್‌ಗಳು ಇಂದಿಗೂ ಫೇಮಸ್. ಜೋಗದ ಸೌಂದರ್ಯ, ಮಳೆಯಲ್ಲಿ ಮಿಂದೇಳುವ ಗಣೇಶ್, ಹಾಳಾದ್ ದೇವದಾಸನ ಗಂಟೆ ಸದ್ದು … ಹೀಗೆ ಎಲ್ಲವೂ ಕಣ್ಣಮುಂದೆ ಬರುತ್ತದೆ.
ಅಂದು ಯಾವುದೇ ನಿರೀಕ್ಷೆ ಇಲ್ಲದೇ, ಅಬ್ಬರವಿಲ್ಲದೇ ಬಿಡುಗಡೆಯಾದ “ಮುಂಗಾರು ಮಳೆ’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು, ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿತ್ತು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ತಯಾರಾಗಿದ್ದು ಕೇವಲ ಎರಡು ಕೋಟಿ ರೂಪಾಯಿ ಬಜೆಟ್‌ನಲ್ಲಿ. ಆದರೆ, ಸಿನಿಮಾ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಸುವ ಮೂಲಕ 2006ರಲ್ಲೇ ಕನ್ನಡ ಚಿತ್ರರಂಗದತ್ತ ಪರಭಾಷಾ ಚಿತ್ರರಂಗಗಳು ತಿರುಗಿ ನೋಡುವಂತೆ ಮಾಡಿತ್ತು. ಜೊತೆಗೆ ಚಿತ್ರದ ರೀಮೇಕ್ ಹಾಗೂ ಡಬ್ಬಿಂಗ್ ರೈಟ್ಸ್ ಕೂಡಾ ದೊಡ್ಡ ಮೊತ್ತಕ್ಕೆ ಮಾರಾಟವಾಗಿತ್ತು.
“ಮುಂಗಾರು ಮಳೆ’ ಚಿತ್ರ ಬಿಡುಗಡೆಯಾಗಿ 12 ವರ್ಷವಾದ ಸಂದರ್ಭದಲ್ಲಿ ನಟ ಗಣೇಶ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. “ಮುಂಗಾರು ಮಳೆ ಚಿತ್ರದ ಗೆಲುವನ್ನು ಮರೆಯುವಂತಿಲ್ಲ. ನನಗೊಬ್ಬನಿಗೆ ಅಲ್ಲ, ಅದು ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ಗೆಲುವು ತಂದುಕೊಟ್ಟ ಚಿತ್ರ. 2006ರಲ್ಲಿ ಈಗಿನಂತೆ ಸೋಶಿಯಲ್ ಮೀಡಿಯಾ ಆಗಲೀ, ಇಷ್ಟೊಂದು ವಾಹಿನಿಗಳಾಗಲೀ ಇರಲಿಲ್ಲ. ಜೊತೆಗೆ ನಾವು ದೊಡ್ಡ ಮಟ್ಟದಲ್ಲಿ ಹಾಗೂ ಅಬ್ಬರದ ಪ್ರಚಾರ ಕೂಡಾ ಮಾಡಿರಲಿಲ್ಲ.
ಆದರೆ, ಸಿನಿಮಾ ನೋಡಿದ ಪ್ರೇಕ್ಷಕರೇ ಇಷ್ಟಪಟ್ಟು ಆ ಸಿನಿಮಾವನ್ನು ಪ್ರಚಾರ ಮಾಡಿದರು. ಬಾಯಿ ಮಾತಿನಿಂದಲೇ “ಮುಂಗಾರು ಮಳೆ’ಗೆ ದೊಡ್ಡ ಪ್ರಚಾರ ಸಿಕ್ಕಿ, ಜನರು ಆ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಿದರು. ಕಲೆಕ್ಷನ್ ವಿಷಯದಲ್ಲಿ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾವದು. ಇವತ್ತು ನಾನು ಈ ಮಟ್ಟಕ್ಕೆ ಬೆಳೆಯಲು ಆ ಸಿನಿಮಾ ಕಾರಣ. ಆ ಸಿನಿಮಾದ ಯಶಸ್ಸನ್ನು ಮರೆಯಲು ಹಾಗೂ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾ “ಮುಂಗಾರು ಮಳೆ’ಯ ನೆನಪಿಗೆ ಜಾರುತ್ತಾರೆ ಗಣೇಶ್.