Advertisement
ಶನಿವಾರ “ಡಾ| ಕರ್ಣಿ ಸಿಂಗ್ ಶೂಟಿಂಗ್ ರೇಂಜ್’ನಲ್ಲಿ ನಡೆದ ವನಿತೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ 26ರ ಹರೆಯದ ಅಪೂರ್ವಿ ಚಾಂಡೇಲ 252.9 ಅಂಕಗಳೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿ ಕೊಂಡರು. ಇದು ನೂತನ ವಿಶ್ವ ದಾಖಲೆಯಾಗಿದೆ. ಹಿಂದಿನ ದಾಖಲೆ ಚೀನದ ರೌಝು ಝಾವೊ ಹೆಸರಲ್ಲಿತ್ತು (252.4). ಅವರು ಕಳೆದ ವರ್ಷ ಕೊರಿಯಾ ದಲ್ಲಿ ನಡೆದ ವಿಶ್ವಕಪ್‌ನಲ್ಲಿ ಈ ಸಾಧನೆಗೈದಿದ್ದರು.
ಅಪೂರ್ವಿ ಈ ಚೀನೀ ಎದುರಾಳಿ ಸಮ್ಮುಖದಲ್ಲೇ ವಿಶ್ವದಾಖಲೆ ನಿರ್ಮಿ ಸಿದ್ದು ವಿಶೇಷವಾಗಿತ್ತು. ಶನಿವಾರದ ಸ್ಪರ್ಧಾಕಣದಲ್ಲಿದ್ದ ರೌಝು ಝಾವೊ 251.8 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಕಂಚು ಮತ್ತೋರ್ವ ಚೀನೀ ಶೂಟರ್ ಹಾಂಗ್ ಕ್ಸು ಪಾಲಾಯಿತು (230.4). ಅರ್ಹತಾ ಸುತ್ತಿನಲ್ಲಿ ಝಾವೊ ಅವರೇ ಅಗ್ರಸ್ಥಾನಿಯಾಗಿದ್ದರು (634). ಈಗಾಗಲೇ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿರುವ ಅಪೂರ್ವಿ ಚಾಂಡೇಲ, ಅರ್ಹತಾ ಸುತ್ತಿನಲ್ಲಿ 4ನೇ ಸ್ಥಾನದಲ್ಲಿದ್ದರು (629.3). ಆದರೆ ಭಾರತದ ಮತ್ತಿಬ್ಬರು ಸ್ಪರ್ಧಿಗಳಾದ ಅಂಜುಮ್ ಮೌದ್ಗಿಲ್ (628) ಮತ್ತು ಎಳವೆನಿಲ್ ವಲರಿವನ್ (625.3) ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 12ನೇ ಹಾಗೂ 30ನೇ ಸ್ಥಾನ ಪಡೆದು ಫೈನಲ್ ರೇಸ್‌ನಿಂದ ನಿರ್ಗಮಿಸಿದರು.
Related Articles
ಇದು ವಿಶ್ವಕಪ್‌ನಲ್ಲಿ ಅಪೂರ್ವಿ ಗೆದ್ದ 3ನೇ ವೈಯಕ್ತಿಕ ಪದಕ. 2015ರ ಚಾಂಗÌನ್ ವರ್ಲ್ಡ್ಕಪ್‌ನಲ್ಲಿ ಕಂಚು, ಅದೇ ವರ್ಷದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
Advertisement
ಇಲ್ಲಿನ ಸವಾಲು ಕಠಿನ ಎಂಬ ಅರಿವಿತ್ತು. ಆದರೆ ಕಠಿನ ಅಭ್ಯಾಸ ನಡೆಸಿದ್ದೆ. ಯಾವ ಕಾರಣಕ್ಕೂ ಹಿಂದುಳಿಯಬಾರದು ಎಂಬ ದೃಢ ನಿರ್ಧಾರ ನನ್ನದಾಗಿತ್ತು. ನಿರೀಕ್ಷಿಸಿದ ಫಲಿತಾಂಶವೇ ಲಭಿಸಿದೆ. ಬಹಳ ಖುಷಿಯಾಗಿದೆ.-ಅಪೂರ್ವಿ ಚಾಂಡೇಲ