Advertisement

ಚಿನ್ನಾಭರಣ ವಹಿವಾಟು ಶೇ.20ರಷ್ಟು ಹೆಚ್ಚಳ

04:26 PM Apr 20, 2018 | |

ಹುಬ್ಬಳ್ಳಿ: ಅಕ್ಷಯ ತೃತಿಯಾ ನಿಮಿತ್ತ ನಗರದಲ್ಲಿ ಚಿನ್ನಾಭರಣದ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಕಳೆದ ಬಾರಿಗಿಂತ ಶೇ.20ರಷ್ಟು ಮಾರಾಟ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

Advertisement

ನಗರದಲ್ಲಿನ ಚಿನ್ನಾಭರಣಗಳ ಕಾರ್ಪೋರೇಟ್‌ ಶೋರೂಮ್‌ಗಳಲ್ಲಿ ಕೂಡ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಶೋರೂಮ್‌ ಗಳು ಮುಂಗಡ ಬುಕ್ಕಿಂಗ್‌ಗೆ ಅವಕಾಶ ನೀಡಿದ್ದರಿಂದ ಚಿನ್ನದ ದರ ಹೆಚ್ಚಾಗುವ ಆತಂಕದಿಂದ ಮುಂಗಡವಾಗಿ ಬುಕ್ಕಿಂಗ್‌ ಮಾಡಿ ಆಭರಣ ಖರೀದಿಸಿದರು. ಕೆಲವು ಶೋರೂಮ್‌ ಗಳಲ್ಲಿ ಕಾಯ್ನಗಳಿಗೆ ಪ್ರತ್ಯೇಕ ಕೌಂಟರ್‌ಗಳನ್ನು ಮಾಡಲಾಗಿತ್ತು. ಕೆಲ ಶೋರೂಮ್‌ಗಳು ಯಾವುದೇ ಮೇಕಿಂಗ್‌ ಚಾರ್ಜ್‌ ಇಲ್ಲದೇ 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಿದವು. 1 ತೊಲಿ ಬಂಗಾರದ ಆಭರಣ ಖರೀದಿಸಿದರೆ 1 ತೊಲಿ ಬೆಳ್ಳಿ ಆಭರಣ ಉಚಿತ, ಮೇಕಿಂಗ್‌ ಚಾರ್ಜ್‌ನಲ್ಲಿ ಕಡಿತ ಸೇರಿದಂತೆ ಚಿನ್ನಾಭರಣ ಶೋರೂಮ್‌ಗಳು ಗ್ರಾಹಕರನ್ನು ಆಕರ್ಷಿಸಲು ಹಲವಾರು ಕೊಡುಗೆಗಳನ್ನು ನೀಡಿದ್ದವು.

ಮದುವೆ ಸೀಜನ್‌ನಿಂದಾಗಿ ವಜ್ರದ ಉಂಗುರ, ತಾಳಿಚೈನ್‌, ಎರಡು ಸುತ್ತುಂಗುರಗಳು, ನೆಕ್‌ಲೇಸ್‌ ಹೀಗೆ ಮ್ಯಾರೇಜ್‌ ಪ್ಯಾಕೇಜ್‌ ಆರ್ನಾಮೆಂಟ್ಸ್‌ ಬುಕ್ಕಿಂಗ್‌ ಮಾಡಿದವರು ಅಕ್ಷಯ ತೃತಿಯಾದಂದು ಡಿಲೆವರಿ ಪಡೆದರು.

ನಗರದಲ್ಲಿ ಜೋಯಾಲುಕ್ಕಾಸ್‌, ಕಲ್ಯಾಣ್‌, ಲಕ್ಷ್ಮೀ ಗೋಲ್ಡ್‌ ಪ್ಯಾಲೇಸ್‌, ಕೆಜಿಪಿ ಜ್ಯುವೆಲರ್, ಮಲಬಾರ್‌, ಚೆಮ್ಮನೂರ್‌ ಶೋರೂಮ್‌ಗಳಲ್ಲಿ ವ್ಯಾಪಾರ ಜೋರಾಗಿತ್ತು. ಅಲ್ಲದೇ ಸಾಂಪ್ರದಾಯಿಕ ಆಭರಣ ಮಾರಾಟಗಾರರಾದ ಸರಾಫ‌ ಅಂಗಡಿಗಳಲ್ಲೂ ವಹಿವಾಟು ಉತ್ತಮವಾಗಿ ನಡೆದಿದೆ.

ಮೇಕಿಂಗ್‌ ಚಾರ್ಜ್‌ ಹೊರೆ ಹಾಗೂ ರಿಸೇಲ್‌ ಸಂದರ್ಭದಲ್ಲಿ ವೇಸ್ಟೇಜ್‌ ಶುಲ್ಕದಿಂದ ತಪ್ಪಿಸಿಕೊಳ್ಳುವ ದಿಸೆಯಲ್ಲಿ ಹಲವರು ಅಂಚೆ ಕಚೇರಿಯಿಂದ ಚಿನ್ನದ ನಾಣ್ಯಗಳನ್ನು ಕೂಡ ಖರೀದಿಸಿದ್ದಾರೆ.

Advertisement

ಹುಬ್ಬಳ್ಳಿಯ ಸರಾಫ‌ ಸಂಘದಲ್ಲಿ ಅಧಿಕೃತವಾಗಿ 160 ಜನ ಸದಸ್ಯರಿದ್ದು, ಸಣ್ಣ ಪುಟ್ಟ ವ್ಯಾಪಾರಿಗಳು ಸೇರಿ ಒಟ್ಟು ಸುಮಾರು 1000 ಚಿನ್ನಾಭರಣ ಮಾರಾಟಗಾರರಿದ್ದಾರೆ. ಮದುವೆಗಳ ಕಾರಣದಿಂದಾಗಿ ಚಿನ್ನಾಭರಣಗಳ ಖರೀದಿ ಪ್ರಮಾಣ ಹೆಚ್ಚಾಗಿದೆ. ಸರಾಫ‌ ಅಂಗಡಿಗಳಲ್ಲಿ ಖರೀದಿ ಮಾಡಿದವರಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಜನರ ಪ್ರಮಾಣ ಹೆಚ್ಚಾಗಿದೆ ಎಂದು ಸರಾಫ‌ ಸಂಘದವರು ಅಭಿಪ್ರಾಯಪಡುತ್ತಾರೆ.

ಕಳೆದ ವರ್ಷ ಅಕ್ಷಯ ತೃತಿಯ 2 ದಿನ ಇದ್ದುದರಿಂದ ಗ್ರಾಹಕರಲ್ಲಿ ಗೊಂದಲವಾಗಿತ್ತು. ಅಲ್ಲದೇ ಖರೀದಿ ಮಾಡಿದರೆ ಶುಭವಲ್ಲ ಎಂದು ಕೆಲವರು ಅಪಪ್ರಚಾರ ಮಾಡಿದ್ದರು. ಆದರೆ ಈ ಬಾರಿ ಅಕ್ಷಯ ತೃತಿಯಾದಂದು ಉತ್ತಮ ವ್ಯಾಪಾರ ನಡೆದಿದೆ. ಕಳೆದ ಬಾರಿಗಿಂತ ಶೇ.15ರಿಂದ ಶೇ.20ರಷ್ಟು ಹೆಚ್ಚಿನ ಮಾರಾಟ ನಡೆದಿರುವುದು ಸಂತಸದ ಸಂಗತಿ. ಯುವ ವರ್ಗದವರು ವಜ್ರಾಭರಣಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ. ಆಭರಣಗಳನ್ನು ಮೊದಲೇ ಬುಕ್ಕಿಂಗ್‌ ಮಾಡಿ ಅಕ್ಷಯ ತೃತಿಯಾದಂದು ತೆಗೆದುಕೊಂಡು ಹೋದವರ ಸಂಖ್ಯೆ ಹೆಚ್ಚು. ನಮ್ಮ ಶೋರೂಮ್‌ನಲ್ಲಿ ನಾಣ್ಯಗಳಿಗಾಗಿ
ಪ್ರತ್ಯೇಕ ಕೌಂಟರ್‌ಗಳನ್ನು ಮಾಡಲಾಗಿತ್ತು. ಮೇಕಿಂಗ್‌ ಶುಲ್ಕ ಪಡೆಯದೇ ಬುಧವಾರ ನಾಣ್ಯಗಳನ್ನು ಮಾರಾಟ ಮಾಡಲಾಗಿದೆ.
ಶಶಾಂಕ ಏಕಬೋಟೆ, ಪ್ರಧಾನ ವ್ಯವಸ್ಥಾಪಕ ಮಲಬಾರ್‌ ಗೋಲ್ಡ್‌ ಹುಬ್ಬಳ್ಳಿ.

ಕಳೆದ ಬಾರಿಗಿಂತ ಈ ಸಾರಿ ಚಿನ್ನಾಭರಣಗಳ ಮಾರಾಟ ಶೇ.20ರಷ್ಟು ವೃದ್ಧಿಯಾಗಿದೆ. ಕಳೆದ 3 ವರ್ಷಗಳಲ್ಲಿ ಈ ಬಾರಿ ವ್ಯಾಪಾರ ಹೆಚ್ಚಾಗಿದೆ. ಕನಿಷ್ಟ 2 ಗ್ರಾಂಗಳಿಂದ 5 ಗ್ರಾಂಗಳವರೆಗೆ ಖರೀದಿ ಮಾಡಿದವರ ಸಂಖ್ಯೆ ಅಧಿಕ. ಬೆಳಗ್ಗೆ 9ರಿಂದ ರಾತ್ರಿ 10ರವರೆಗೂ ಚಿನ್ನಾಭರಣಗಳ ಮಾರಾಟ ನಡೆದಿದೆ. ಶೇ.80ರಷ್ಟು ಜನರು ಆಭರಣ ಖರೀದಿಸಿದರೆ, ಶೇ.20ರಷ್ಟು ಜನರು ಗಟ್ಟಿ ಬಂಗಾರ ಖರೀದಿ ಮಾಡಿದ್ದಾರೆ.
ಗೋವಿಂದ ನಿರಂಜನ, ಉತ್ತರ ಕರ್ನಾಟಕ ಸರಾಫ್ ಸಂಘಗಳ ಮಹಾಸಭಾ ಅಧ್ಯಕ್ಷ 

ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next