ಬೆಂಗಳೂರು: ನಗರದ ಮಡಿವಾಳದ ಉದ್ಯಮಿ ಸತ್ಯಪ್ರಕಾಶ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಬಿಹಾರ ಮೂಲದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಿಹಾರದ ಮಧುಬನಿ ಜಿಲ್ಲೆಯ ಅಖಿಲೇಶ್ ಕುಮಾರ್ (21 ವರ್ಷ) ಬಂಧಿತ ಆರೋಪಿ. ಈತ ಈ ಹಿಂದೆ ಸತ್ಯ ಪ್ರಕಾಶ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು 90 ಲಕ್ಷ ಮೌಲ್ಯದ 2 ಕೆ.ಜಿ ವಜ್ರ ಮತ್ತು ಚಿನ್ನದ ಒಡವೆಗಳು, ಅರ್ಧ ಕೆ.ಜಿ ಬೆಳ್ಳಿ ಸಾಮಾನುಗಳು ಮತ್ತು ಬೆಳೆ ಬಾಳುವ ಸ್ಟೀಲ್ ಮತ್ತು ಚಿನ್ನದ ವಾಚ್ ಗಳನ್ನು ಈತ ಕಳ್ಳತನ ಮಾಡಿ ತನ್ನೂರಿಗೆ ಪರಾರಿಯಾಗಿದ್ದ.
ಈ ಮೂಲಕ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಆಗ್ನೇಯ ವಿಭಾಗದ ಮಡಿವಾಳ ಪೊಲೀಸರು ಆರೋಪಿಯನ್ನು ಬಿಹಾರದಲ್ಲಿ ಬಂಧಿಸಿ ಕರೆತಂದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆಗ್ನೇಯ ವಿಭಾಗದ ಉಪ-ಪೊಲೀಸ್ ಕಮಿಷನರ್ ಡಾ.ಬೋರಲಿಂಗಯ್ಯರ ಮಾರ್ಗದರ್ಶನದಲ್ಲಿ, ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಜಿ.ಯು.ಸೋಮೇಗೌಡರ ನೇತೃತ್ವದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭರತ್ ಬಿ, ಮತ್ತು ಸಬ್ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಹಾಗು ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಪ್ರಕರಣದ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ಅಪರ ಪೊಲೀಸ್ ಆಯುಕ್ತರು, ಪೂರ್ವ ಬೆಂಗಳೂರು ನಗರ ಅವರು ಪ್ರಶಂಸಿದ್ದಾರೆ.