Advertisement

4 ಕೋಟಿ ವಿಮೆಗಾಗಿ ಚಿನ್ನ ಲೂಟಿ ನಾಟಕ

10:08 AM Aug 01, 2023 | Team Udayavani |

ಬೆಂಗಳೂರು: ಈ ಪ್ರಕರಣದಲ್ಲಿ ಸಂತ್ರಸ್ತ ಹಾಗೂ ಆರೋಪಿ ಎಲ್ಲವೂ ಒಬ್ಬನೇ! ಅಂದರೆ ದೂರು ದಾರನೇ ಸುಲಿಗೆಕೋರನಾಗಿದ್ದಾನೆ.! ಹೌದು, ಕೋಟ್ಯಂತರ ರೂ. ವಿಮೆ ಹಣ ಪಡೆ ಯಲು ಹಾಗೂ ಬೇರೆಯವರಿಗೆ ಮಾರಾಟ ಮಾಡಲು ಸಿನಿಮೀಯ ಶೈಲಿಯಲ್ಲಿ ಸಂಚು ರೂಪಿಸಿ ಚಿನ್ನಾಭರಣ ಸುಲಿಗೆಯಾಗಿದೆ ಎಂದು ಸುಳ್ಳು ದೂರು ದಾಖಲಿಸಿದ ಜ್ಯೂವೆಲ್ಲರಿ ಶಾಪ್‌ ಮಾಲೀಕ ಕಾಟನ್‌ಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ರಾಜಸ್ಥಾನ ಮೂಲದ ರಾಜು ಜೈನ್‌ (25) ಬಂಧಿತ ಜ್ಯುವೆಲ್ಲರಿ ಶಾಪ್‌ ಮಾಲೀಕ. ಈತನ ಜತೆ ಕೃತ್ಯಕ್ಕೆ ಸಹಕಾರ ನೀಡಿದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.

ಜುಲೈ 12ರಂದು ತನ್ನ ಸಂಬಂಧಿ ಬಾಲಕರ ಮೂಲಕ ನಾಲ್ಕು ಕೋಟಿ ರೂ. ಮೌಲ್ಯದ 3 ಕೆ.ಜಿ.780 ಗ್ರಾಂ ತೂಕದ ಚಿನ್ನಾಭರಣ ಸುಲಿಗೆ ಆಗಿದೆ ಎಂದು ದೂರು ನೀಡಿದ್ದ. ಸದ್ಯ ಆರೋಪಿಗಳಿಂದ 1 ಕೆ.ಜಿ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನ ಮೂಲದ ರಾಜುಜೈನ್‌ ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಚಾಮರಾಜಪೇಟೆಯಲ್ಲಿ ವಾಸವಾಗಿದ್ದಾನೆ. ನಗರತ್‌ ಪೇಟೆಯ ಕೇಸರ್‌ ಎಂಬ ಜ್ಯೂವೆಲ್ಲರಿ ಅಂಗಡಿ ನಡೆಸುತ್ತಿದ್ದಾನೆ. ತನ್ನ ಊರಿನ ಇಬ್ಬರು ಅಪ್ರಾಪ್ತ ಬಾಲಕರಿಗೆ ಓದಿಸುವ ಜತೆಗೆ ಜ್ಯೂವೆಲ್ಲರಿ ಶಾಪ್‌ ನಲ್ಲೂ ಕೆಲಸ ನೀಡಿದ್ದ. ಈ ಮಧ್ಯೆ ಮುಂಬೈ ಹಾಗೂ ನೆರೆ ರಾಜ್ಯಗಳಿಂದ ಕೆ.ಜಿ.ಗಟ್ಟಲೇ ಚಿನ್ನಾಭರಣ ಖರೀದಿಸಿದ್ದ. ಆದರೆ, ಅದನ್ನು ಅಕ್ರಮವಾಗಿ ಮಾರಾಟ ಮಾಡಿ ಹಣ ಪಡೆಯಲು ಸಂಚು ರೂಪಿಸಿದ್ದಾನೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೇಗಿತ್ತು ಸಂಚು?: ಜುಲೈ 12ರಂದು ಸಂಜೆ 7.30ರ ಸುಮಾರಿಗೆ ಇಬ್ಬರು ಬಾಲಕರ ಮೂಲಕ 3 ಕೆ.ಜಿ. 780 ಗ್ರಾಂ ತೂಕದ ಚಿನ್ನಾಭರಣವನ್ನು ಅಂಗಡಿಯಲ್ಲಿ ಬ್ಯಾಗ್‌ಗೆ ತುಂಬಿಸಲಾಗಿತ್ತು. ಬಳಿಕ ಅದನ್ನು ಹೈದರಾಬಾದ್‌ಗೆ ಕಳುಹಿಸುವ ಸಲುವಾಗಿ ತನ್ನ ದ್ವಿಚಕ್ರ ವಾಹನದಲ್ಲಿ ಬಾಲಕರ ಮನೆಗೆ ಕಳುಹಿಸಿದ್ದ. ಮಾರ್ಗ ಮಧ್ಯೆ ಮೈಸೂರು ರಸ್ತೆಯ ಮೇಲು ಸೇತುವೆ ಬಳಿ ಇಬ್ಬರು ಅಪರಿಚಿತ ವ್ಯಕ್ತಿ ಗಳು, ಕಾಲಿನಿಂದ ಒದ್ದು ಚಿನ್ನಾಭರಣ ತುಂಬಿದ್ದ ಬ್ಯಾಗ್‌ ಕದ್ದೊಯ್ದಿದ್ದಾರೆ ಎಂದು ರಾಜು ಜೈನ್‌ ದೂರು ನೀಡಿದ್ದ. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದರೂ, ಬಾಲಕರ ಹೇಳಿಕೆ ಹಾಗೂ ರಾಜುಜೈನ್‌ ಹೇಳಿಕೆ ಪಡೆದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅಲ್ಲದೆ, ಬಾಲಕರಿಂದ ಅಂಗಡಿಯಲ್ಲೇ ಸಿಸಿ ಕ್ಯಾಮೆರಾಗೆ ಕಾಣುವಂತೆ ಚಿನ್ನಾಭರಣ ತುಂಬಿ ಸಿದ್ದ. ಬೈಕ್‌ನಲ್ಲಿ ಬ್ಯಾಗ್‌ ತೆಗೆದುಕೊಂಡು ಹೋಗುವ ದೃಶ್ಯ ಸೆರೆಯಾಗುವಂತೆಯೂ ನೋಡಿಕೊಂಡಿದ್ದ.

ಬಳಿಕ ಸಿಸಿ ಕ್ಯಾಮೆರಾ ಇಲ್ಲದ ಮೇಲ್ಸೇತುವೆ ಬಳಿ ಅದೇ ಬಾಲಕರ ಮೂಲಕ ಚಿನ್ನಾಭರಣವನ್ನು ಮತ್ತೂಂದು ಬ್ಯಾಗ್‌ಗೆ ತುಂಬಿಸಿ, ಖಾಲಿ ಬ್ಯಾಗ್‌ ಎಸೆದು, ನಂತರ ಘಟನಾ ಸ್ಥಳದಿಂದಲೇ ತನಗೆ ಕರೆ ಮಾಡಿಸಿಕೊಂಡು, ಸ್ಥಳಕ್ಕೆ ಸಂಬಂಧಿಕರು ಹಾಗೂ ಪೊಲೀಸರನ್ನು ಕರೆಸಿಕೊಂಡಿದ್ದ. ಈ ವೇಳೆಯೇ ಒಬ್ಬ ಬಾಲಕನಿಂದ ಮನೆಗೆ ಚಿನ್ನಾಭರಣ ತುಂಬಿದ ಬ್ಯಾಗ್‌ ಕಳುಹಿಸಿ, ಮತ್ತೆ ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ನಂತರ ತನ್ನ ಬಳಿಯಿದ್ದ ಚಿನ್ನಾಭರಣ ಸುಲಿಗೆಯಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಿಸಿ, ಬಳಿಕ ಪೊಲೀಸರ ತನಿಖೆಯಲ್ಲಿ ಚಿನ್ನಾಭರಣ ಸಿಕ್ಕಿಲ್ಲ ಎಂದು ಪ್ರಮಾಣ ಪತ್ರ ಪಡೆದು, ವಿಮಾ ಕಂಪನಿಗೆ ನೀಡಿ 4 ಕೋಟಿ ರೂ. ಪಡೆಯಲು ರಾಜು ಜೈನ್‌ ಯೋಜನೆ ರೂಪಿಸಿದ್ದ. ಅದಕ್ಕಾಗಿ ಸುಮಾರು ಒಂದು ತಿಂಗಳ ಮೊದಲೇ ಯೋಜನೆ ರೂಪಿಸಿದ್ದಾನೆ.

Advertisement

ಎಲ್ಲೆಲ್ಲಿ ಸಿಸಿ ಕ್ಯಾಮೆರಾಗಳಿವೆ ಎಂದು ತನ್ನ ಅಂಗಡಿಯಿಂದ ಮನೆವರೆಗಿನ ರಸ್ತೆಗಳಲ್ಲಿ ಪರಿಶೀಲಿಸಿದ್ದ. ಹೇಗೆ ಕೃತ್ಯವೆಸಗಬೇಕು? ತಾನೂ ಹಾಗೂ ಬಾಲಕರು ಯಾವ ರೀತಿ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಬೇಕು? ಪೊಲೀಸರ ಜತೆ ಹೇಗೆ ವರ್ತಿಸಬೇಕು? ಎಂದು ಬಾಲಕರಿಗೆ ಸಂಪೂರ್ಣವಾಗಿ ತರಬೇತಿ ನೀಡಿದ್ದ. ಅದಕ್ಕೆ ಪೂರಕವೆಂಬಂತೆ ಚಿನ್ನಾಭರಣ ಸಮೇತ ಬಾಲಕರನ್ನು ಹೈದರಾಬಾದ್‌ಗೆ ಕಳುಹಿಸಿದ್ದೇನೆ ಎಂದು ಬಿಂಬಿಸಲು ಬಸ್‌ ಟಿಕೆಟ್‌ ಬುಕ್‌ ಮಾಡಿದ್ದ. ಜತೆಗೆ ಸಿಸಿ ಕ್ಯಾಮೆರಾ, ಮೊಬೈಲ್‌ ಟವರ್‌ ಲೋಕೇಷನ್‌, ಮೊಬೈಲ್‌ ಕರೆಗಳ ಪರಿಶೀಲಿಸಿದರೂ ಕೃತ್ಯ ನಡೆದಿದೆ ಎಂದು ಹೊಂದಾಣಿಕೆ ಮಾಡಿದ್ದಾನೆ ಎಂದು ಆಯುಕ್ತರು ಹೇಳಿದರು.

ವಾಟ್ಸ್‌ಆ್ಯಪ್‌ ಕರೆ ಕೊಟ್ಟ ಸುಳಿವು: ಆದರೆ, ಆರೋಪಿಯ ಮೊಬೈಲ್‌ ವಶಕ್ಕೆ ಪಡೆದು ಪರಿಶೀಲಿಸಿದಾಗ ಘಟನಾ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ಕರೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇಂತಹ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ ಕರೆ ಏಕೆ ಮಾಡಲಾಗಿದೆ? ಜತೆಗೆ ಒಂದೇ ಟವರ್‌ನಲ್ಲಿ ಲೋಕೇಷನ್‌ ಬದಲಾವಣೆ ಮಾಡಿದ್ದ. ಹೀಗಾಗಿ ಅನುಮಾನಗೊಂಡ ಪೊಲೀಸರು, ಅಂಗಡಿಯಿಂದ ಘಟನಾ ಸ್ಥಳಕ್ಕೆ ತೆರಳಲು 7 ನಿಮಿಷ ಆಗಿದೆ. ಈ ನಡುವೆ ಯಾರು ಕೃತ್ಯ ಎಸಗಲು ಸಾಧ್ಯ ಎಂದು ತಾಂತ್ರಿಕ ತನಿಖೆ ನಡೆಸಿದಾಗ ದೂರುದಾರನೇ ಮಾಸ್ಟರ್‌ ಮೈಂಡ್‌ ಎಂಬುದು ಗೊತ್ತಾಗಿದೆ. ಆದರೂ ಆತ ಒಪ್ಪಿಕೊಂಡಿರಲಿಲ್ಲ. ಬಳಿಕ ಸಾಕ್ಷ್ಯಾಧಾರಗಳು ತೋರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ, ಎಸಿಪಿ ಕೆ.ಸಿ.ಗಿರಿ ನೇತೃತ್ವದಲ್ಲಿ ಠಾಣಾಧಿಕಾರಿ ಜಿ.ಬಾಲರಾಜ್‌ ತಂಡ ಕಾರ್ಯಾಚರಣೆ ನಡೆಸಿದೆ.

ಸ್ನೇಹಿತ, ನೆಟ್‌ಫ್ಲಿಕ್ಸ್ ಪ್ರೇರಣೆ: ಮುಂಬೈನಲ್ಲಿ ಈತನ ಸ್ನೇಹಿತನೊಬ್ಬ ಇದೇ ಮಾದರಿಯಲ್ಲಿ ಚಿನ್ನಾಭರಣ ಸುಲಿಗೆ ಮಾಡಿ, ವಿಮೆ ಹಣ ಪಡೆದುಕೊಂಡಿದ್ದ. ಈ ವೇಳೆ ಪೊಲೀಸರ ತನಿಖೆ ಹೇಗೆ ನಡೆಯುತ್ತದೆ? ಪ್ರಶ್ನೆಗಳೇನು? ಸೇರಿ ಒಟ್ಟಾರೆ ಪೊಲೀಸರ ತನಿಖೆಯ ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದ. ಜತೆಗೆ ಸ್ನೇಹಿತ, ನೆಟ್‌ಫ್ಲಿಕ್ಸ್ ನಲ್ಲಿ ಬರುವ ಚಿನ್ನಾಭರಣ ಕಳವಿಗೆ ಸಂಬಂಧಿಸಿದ ಕ್ರೈಂ ಸರಣಿಗಳನ್ನು ನೋಡಿ ಸಂಚು ರೂಪಿಸಿದ್ದಾನೆ. ಈ ಮಧ್ಯೆ ದೂರು ನೀಡಿದ ಆರೋಪಿ ಕೆಲ ರಾಜಕೀಯ ಮುಖಂಡರು ಹಾಗೂ ಸಂಘಟನೆಗಳ ಮೂಲಕ ಪೊಲೀಸರಿಗೆ ಪ್ರಕರಣ ಪತ್ತೆ ಹಚ್ಚುವಂತೆ ಒತ್ತಡ ಹಾಕಿಸಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next