ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಪರಾರಿಯಾಗಿದ್ದ ಬಿಹಾರ ಮೂಲದ ಆರೋಪಿ ಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುರೇಂದ್ರ ಕಾಮತ್ (29) ಬಂಧಿತ. ಆರೋಪಿಯಿಂದ 50 ಲಕ್ಷ ರೂ. ಮೌಲ್ಯದ 502 ಗ್ರಾಂ ಮೌಲ್ಯದ ಚಿನ್ನಾಭರಣ, 99.5 ಗ್ರಾಂ ಡೈಮಂಡ್ ಒಡವೆಗಳು, 199 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 12 ಸಾವಿರ ರೂ. ನಗದು ಹಾಗೂ ಅಮೆರಿಕನ್ ಡಾಲರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ, ದೊಡ್ಡನೆಕ್ಕುಂದಿಯ ಅಮಿತ್ ಜೈನ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೂರುದಾರ ಅಮಿತ್ ಜೈನ್ ದೊಡ್ಡನೆಕ್ಕುಂದಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದು, 3 ವರ್ಷಗಳಿಂದ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಎಲ್ಲರ ನಂಬಿಕೆ ಗಳಿಸಿದ್ದ. ಹೀಗಾಗಿ ಮನೆಯ ಎಲ್ಲೆಡೆ ಓಡಾಡಲು ಅವಕಾಶ ನೀಡಲಾಗಿತ್ತು. ಅದನ್ನು ದುರುಪಯೋಗ ಪಡಿಸಿಕೊಂಡ ಆರೋಪಿ, ಮಾಲೀಕರು ಚಿನ್ನಾಭರಣಗಳನ್ನು ಇಟ್ಟಿರುವ ಜಾಗ ನೋಡಿಕೊಂಡಿದ್ದ. ಈ ಮಧ್ಯೆ ಅಮಿತ್ ಜೈನ್ ಮತ್ತು ಕುಟುಂಬ ಏ.12ರಂದು ಕಾರ್ಯನಿಮಿತ್ತ ಮುಂಬೈಗೆ ತೆರಳಿತ್ತು. ಆಗ ಆರೋಪಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಬಿಹಾರಕ್ಕೆ ಪರಾರಿಯಾಗಿªದ. ಏ.15ರಂದು ಅಮಿತ್ ಜೈನ್ ವಾಪಸ್ ಬಂದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಬಳಿಕ ಸುರೇಂದ್ರ ಕುಮಾರ್ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ವಿಳಾಸ ಪಡೆದು ಬಿಹಾರಕ್ಕೆ ತೆರಳಿ ಪರಿಶೀಲಿಸಿದಾಗ, ಆತ ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಮಾಹಿತಿ ಸಿಕ್ಕಿತ್ತು. ನಂತರ ವಿಜಯವಾಡದಲ್ಲಿ ಹುಡುಕಾಟ ನಡೆಸಿದ್ದಾಗ ವಿಜಯವಾಡದ ರೈಲ್ವೆ ನಿಲ್ದಾಣ ಬಳಿ ಪೊಲೀಸರನ್ನು ಕಂಡು ಆರೋಪಿ ಓಡಿ ಹೋಗಲು ಯತ್ನಿಸಿದ್ದಾನೆ. ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಮನೆ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ವೈಟ್‌ಫೀಲ್ಡ್ ಉಪವಿಭಾಗದ ಡಿಸಿಪಿ ಡಾ ಶಿವಕುಮಾರ್ ಮತ್ತು ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ಎಂ.ಸಿ.ಕವಿತಾ ನೇತೃತ್ವದಲ್ಲಿ ಮಹದೇವಪುರ ಠಾಣೆ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.