ಬೆಂಗಳೂರು: ಮನೆ ಕಿಟಕಿಯ ಸರಳು ಕತ್ತರಿಸಿ ಒಳ ನುಗ್ಗಿ ಬೆಡ್‌ರೂಮ್‌ನ ಕಬೋರ್ಡ್‌ನಲ್ಲಿಟ್ಟಿದ್ದ 90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋ ಪಿಯನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಪ್ರದೀಪ್ ಮಂಡಲ್(35) ಬಂಧಿತ. ಆರೋಪಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕಳವು ಸಂಬಂಧ ಶೇಷಾದ್ರಿಪುರ ನಿವಾಸಿ ಮಂಜುಳಾ ದೇವಿ(63) ಎಂಬವರು ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರ ಠಾಣೆ ಪೊಲೀಸರು ಅಪರಿಚಿಕ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ದೂರುದಾರೆ ಮಂಜುಳಾ ದೇವಿ ಜ.17ರಂದು ಸಂಜೆ 5 ಗಂಟೆಗೆ ತಮ್ಮ ಮನೆಯ ಡೋರ್‌ಲಾಕ್ ಮಾಡಿಕೊಂಡು ದೇವರ ಕಾರ್ಯನಿಮಿತ್ತ ರಾಜಸ್ಥಾನಕ್ಕೆ ತೆರಳಿದ್ದರು. ಫೆ.4ರಂದು ಮಧ್ಯಾಹ್ನ 3 ಗಂಟೆಗೆ ವಾಪಸ್ ಬಂದಾಗ ಮನೆ ಕಿಟಕಿಯ ಸರಳುಗಳು ಕತ್ತರಿಸಿ, ಮನೆಯ ಬೆಡ್‌ರೂಮ್‌ನ ಕಬೋರ್ಡ್‌ನ ಲಾಕರ್‌ನಲ್ಲಿಟ್ಟಿದ್ದ 90 ಲಕ್ಷ ರೂ. ಮೌಲ್ಯದ 2 ಕೆ.ಜಿ. 250 ಗ್ರಾಂ ತೂಕದ ಚಿನ್ನದ ಬಿಸ್ಕೆಟ್ ಮತ್ತು ಚಿನ್ನದ ಒಡವೆಗಳು, ಬೆಳ್ಳಿ ಲೋಟ ಗಳು, ಬೆಳ್ಳಿಯ ಹಸು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಆರೋಪಿ ಅಸ್ಸಾಂನಿಂದ ನಗರಕ್ಕೆ ರೈಲಿನಲ್ಲಿ ಬಂದು ಮೆಜೆಸ್ಟಿಕ್‌ನ ಲಾಡ್ಜ್ನಲ್ಲಿ ರಾತ್ರಿ ಉಳಿದುಕೊಳ್ಳುತ್ತಿದ್ದ. ಬೆಳಗ್ಗೆ ಬೈಕ್‌ನಲ್ಲಿ ಸುತ್ತಾಡುತ್ತ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ಜ.17ರಂದು ಮಂಜುಳಾ ದೇವಿ ಮನೆಯಲ್ಲಿ ಕದ್ದಿದ್ದ ಚಿನ್ನಾಭರಣಗಳನ್ನು ಅಸ್ಸಾಂನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ, ವಿಲಾಸಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.
250 ಸಿಸಿ ಕ್ಯಾಮೆರಾಗಳ ಪರಿಶೀಲನೆ:
ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು 250ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಗಳನ್ನು ಪರಿಶೀಲನೆ ನಡೆಸಿ ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿ ಅಸ್ಸಾಂಗೆ ಹೋಗಿ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದಾರೆ. ಆರೋಪಿಯು ಲಾಡ್ಜ್ನ ನೋಂದಣಿ ಪುಸ್ತಕದಲ್ಲಿ ತನ್ನ ವಿವರ ಬರೆಯದೇ ವಂಚಿಸಿದ್ದಾನೆ .