ಮುಂಬಯಿ: ಹಳದಿ ಲೋಹ, ಚಿನ್ನದ ಬೆಲೆ ಮುಂದಿನ 5 ವರ್ಷಗಳಲ್ಲಿ ಪ್ರತಿ ಔನ್ಸ್ (ಜಗತ್ತಿನ ಹಲವು ದೇಶಗಳಲ್ಲಿ ಚಿನ್ನ ಅಳೆಯುವ ಮಾಪನ. 1 ಔನ್ಸ್ ಅಂದರೆ 28.34 ಗ್ರಾಂ)ಗೆ 3 ಸಾವಿರ ಡಾಲರ್‌ಗಳಿಂದ 5 ಸಾವಿರ ಡಾಲರ್‌ಗಳಿಗೆ ಏರಿಕೆಯಾಗಲಿದೆ.
ಆ ಬಗ್ಗೆ ಕೆನಡಾದ ಮ್ಯಾಡ್ರಿಡ್‌ನಲ್ಲಿರುವ ಕ್ವಾಡ್ರಿಗಾ ಇಗ್ನಿಯಸ್ ಎಂಬ ವಿತ್ತ ಕ್ಷೇತ್ರದ ವಿಶ್ಲೇಷಣಾ ಸಂಸ್ಥೆ ಮುನ್ಸೂಚನೆ ನೀಡಿದೆ. 2016ರಲ್ಲಿಯೂ ಇದೇ ಸಂಸ್ಥೆಯ ಡಿಯಾಗೋ ಪರ್ರಿಲ್ಲಾ ಅವರು, ದಾಖಲೆಯ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ಹೇಳಿದ್ದರು. ಅನಂತರದ ದಿನಗಳಲ್ಲಿ ಅದು ನಿಜವೂ ಆಗಿತ್ತು.
2016ರಲ್ಲಿ ಆಗಿದ್ದಂತೆ ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 3ರಿಂದ 5 ಸಾವಿರ ಡಾಲರ್ ಏರಿಕೆಯಾಗಲಿದೆ ಎಂದಿದ್ದಾರೆ. 2020ರ ಆಗಸ್ಟ್‌ನಲ್ಲಿ ಚಿನ್ನಕ್ಕೆ ದಾಖಲೆಯ ಬೆಲೆ, 2,075 ಡಾಲರ್‌ಗೆ ಜಿಗಿದಿತ್ತು.
ಜಗತ್ತಿನಾದ್ಯಂತ ಕೊರೊನಾ ಜನರ ಜೀವನವನ್ನು ಹೈರಾಣು ಮಾಡಿರು ವಂತೆಯೇ ಜಗತ್ತಿನ ಹಲವು ದೇಶಗಳಲ್ಲಿ 1,800 ಡಾಲರ್ ವರೆಗೆ ಚಿನ್ನದ ಬೆಲೆ ಏರಿಕೆಯಾಗಿದೆ. ಕಳೆದ ತಿಂಗಳು ಅಮೆರಿಕದ ಫೆಡರಲ್ ರಿಸರ್ವ್ ಚಿನ್ನದ ಮೇಲಿನ ಹೂಡಿಕೆ ಬಗ್ಗೆ ಕಠಿನ ನಿಲುವು ಪ್ರಕಟಿಸಿದ್ದರಿಂದ ಹಳದಿ ಲೋಹದ ಬೆಲೆ ಕೊಂಚ ಇಳಿಕೆಯಾಗಿತ್ತು.
ಸೋಂಕಿನಿಂದ ಜಗತ್ತಿನ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳುತ್ತಿರುವಂತೆಯೇ ಪ್ರತಿ ಔನ್ಸ್ ಚಿನ್ನದ ಬೆಲೆ 1,700 ಡಾಲರ್‌ಗೆ ಕುಸಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜು ಮಾಡಿದ್ದಾರೆ. ವಿಶ್ಲೇಷಕರ ಪ್ರಕಾರ ವರ್ಷಾಂತ್ಯಕ್ಕೆ ಈ ಪ್ರಕ್ರಿಯೆ ಶುರುವಾಗಲಿದ್ದು, 2022ರಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ.