ಬೆಂಗಳೂರು: ಕೋಲಾರದಲ್ಲಿರುವ ಭಾರತ್ ಗೋಲ್ಡ್ ಮೈನ್ಸ್ ಸಂಸ್ಥೆಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಗಣಿ ಇಲಾಖೆ ಅಧಿಕಾರಿಗಳು, ಕೋಲಾರ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ, ಶೀಘ್ರವೇ ಕೇಂದ್ರ ಗಣಿ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಕೆ.ಎಚ್.ಮುನಿಯಪ್ಪ, 2015ರ ಹೊಸ ಗಣಿ ನೀತಿ ಪ್ರಕಾರ ಕಲ್ಲಿದ್ದಲು ಮತ್ತು ಜಿಂಕ್ ಗಣಿಗಾರಿಕೆ ಹೊರತು ಪಡಿಸಿ ಕೇಂದ್ರ ಸರ್ಕಾರ ಎಲ್ಲ ಗಣಿಗಾರಿಕೆಯನ್ನು ರಾಜ್ಯ ಸರ್ಕಾರಗಳಿಗೆ ಒಪ್ಪಿಸಬೇಕು. ಈ ಕುರಿತು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, 1600 ಕೋಟಿ ರೂ. ಬಾಕಿ ಹಣ ಪಾವತಿಸುವಂತೆ ಸೂಚಿಸಿದೆ.
ಆದರೆ, 130 ವರ್ಷಗಳಿಂದ ಕೇಂದ್ರ ಸರ್ಕಾರ ಭಾರತ್ ಗೋಲ್ಡ್ ಮೈನ್ಸ್‌ನಿಂದ ಆದಾಯ ಪಡೆದುಕೊಂಡಿದೆ. ಈಗ ಯಾವುದೇ ಬಾಕಿ ಹಣಕ್ಕೆ ಬೇಡಿಕೆ ಇಡದೇ ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕೆಂದು ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಭಾರತ್ ಗೋಲ್ಡ್ ಮೈನ್ಸ್ ಪ್ರದೇಶದಲ್ಲಿ 12 ಸಾವಿರ ಎಕರೆ ಜಮೀನು ಇದ್ದು, ಅದರಲ್ಲಿ ಸುಮಾರು ಎರಡು ಸಾವಿರ ಎಕರೆ ಜಮೀನಿನಲ್ಲಿ ಮಾತ್ರ ಗಣಿಗಾರಿಕೆ ನಡೆಸಲಾಗಿದೆ. ಉಳಿದ ಪ್ರದೇಶ ಖಾಲಿ ಇದ್ದು, ಅದರಲ್ಲಿ ಕೈಗಾರಿಕೆ ಹಾಗೂ ಟೌನ್‌ಶಿಪ್‌ಗ್ಳನ್ನು ಆರಂಭಿಸಲು ಅವಕಾಶವಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಭೂಮಿ ಹಸ್ತಾಂತರಿಸಿದರೆ, ಅಲ್ಲಿನ ಕಾರ್ಮಿಕರಿಗೆ ಅನುಕೂಲವಾಗುವಂತೆ ಕೈಗಾರಿಕೆಗಳನ್ನು ಸ್ಥಾಪಿಸಬಹುದು ಎಂದರು.
ಅಲ್ಲದೇ ಚಿನ್ನದ ಗಣಿಗಾರಿಕೆ ಮಾಡಲು ಅವಕಾಶ ಇದ್ದು, ಸದ್ಯ ಒಂದು ಟನ್‌ಗೆ 3ರಿಂದ 5 ಗ್ರಾಂ ಚಿನ್ನ ದೊರೆಯುತ್ತದೆ. ಆಸ್ಟ್ರೇಲಿಯಾ ಹಾಗೂ ಆಫ್ರಿಕಾಗಳಲ್ಲಿ ಕನಿಷ್ಠ 5 ಗ್ರಾಂ ಚಿನ್ನ ದೊರೆಯುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿದರೆ ಹೆಚ್ಚಿನ ಚಿನ್ನ ಉತ್ಪಾದನೆ ಮಾಡಬಹುದು ಎಂದು ಹೇಳಿದರು.