ಕಾಪು: ಉಡುಪಿ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ (ಕಮಾಂಡೆಂಟ್) ಡಾ| ಕೆ. ಪ್ರಶಾಂತ್ ಶೆಟ್ಟಿ ಅವರು 2015 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕದ ಗೌರವಕ್ಕೆ ಪಾತ್ರರಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಬೆಂಗಳೂರಿನಲ್ಲಿ ಪ್ರಶಸ್ತಿ ಪದಕ ಪ್ರಧಾನ ಮಾಡಿದರು.
2013 ರಿಂದ ಉಡುಪಿ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಆಗಿರುವ ಡಾ| ಕೆ. ಪ್ರಶಾಂತ್ ಶೆಟ್ಟಿ ಅವರು ಕಳೆದ ೮ ವರ್ಷಗಳಿಂದ ಗೃಹರಕ್ಷಕದಳವನ್ನು ಯಶಸ್ವಿಯಾಗಿ ಸಂಘಟಿಸುತ್ತಾ ಬರುತ್ತಿದ್ದು 150 ಮಂದಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ, ಜೊತೆಗೆ 2 ಮಹಿಳಾ ಘಟಕವನ್ನು ಪ್ರಾರಂಭಿಸುವಲ್ಲಿಯೂ ಯಶಸ್ವಿಯಾಗಿದ್ದರು.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಆರ್.ಟಿ.ಒ, ಅಬಕಾರಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆಕಾಶವಾಣಿ, ಬಂಧಿಖಾನೆ, ಪ್ರವಾಸೋದ್ಯಮ ಇಲಾಖೆ ಸಹಿತವಾಗಿ ಕಾನೂನು ಸುವ್ಯವಸ್ಥೆ ಸಂದರ್ಭ ಗೃಹರಕ್ಷಕದಳದ ಸಿಬಂದಿಗಳನ್ನು ಕರ್ತವ್ಯಕ್ಕೆ ಒದಗಿಸುವ ಮೂಲಕ ವಿವಿಧ ಇಲಾಖೆಗಳಿಂದ ಪ್ರಶಂಸಾ ಪತ್ರವನ್ನು ಗಳಿಸಿದ್ದಾರೆ. ಉಡುಪಿ ಪರ್ಯಾಯ, ಕಾರ್ಕಳ ಮಹಾಮಸ್ತಕಾಭಿಷೆಕ, ರಾಜ್ಯ ಮಟ್ಟದ ಬಾಲಕ – ಬಾಲಕಿಯರ ಕ್ರೀಡಾಕೂಟ, ದಸರಾ ಮತ್ತು ಗಣೇಶೋತ್ಸವ ಸಹಿತ ವಿವಿಧ ಸಂದರ್ಭಗಳಲ್ಲಿ ಬಂದೋಬಸ್ತ್‌ಗೆ ಸಿಬಂದಿಗಳನ್ನು ನಿಯೋಜಿಸುವ ಮೂಲಕ ಸಾರ್ವತ್ರಿಕ ಶ್ಲಾಘನೆಗೆ ಪಾತ್ರರಾಗಿದ್ದರು.
ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಮಾಸ್ಟರ್ ಆಫ್ ಸರ್ಜರಿ ಪದವೀಧರರಾಗಿದ್ದು ಕಾಪು ಪ್ರಶಾಂತ್ ಹಾಸ್ಪಿಟಲ್‌ನ ನಿರ್ದೇಶಕರಾಗಿದ್ದು, ಪ್ರಶಾಂತ್ ಪ್ಯಾರಾ ಮೆಡಿಕಲ್‌ನ ಸ್ಥಾಪಕರಾಗಿ, ಕಾಪು ದಂಡತೀರ್ಥ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ, ಕಟಪಾಡಿ ಮಟ್ಟು ಬೀಚ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಹಾರಿಝೋನ್ ಹೋಮ್ ಸ್ಟೇ ಇದರ ನಿರ್ದೇಶಕರಾಗಿದ್ದಾರೆ.
ಡಾ| ಕೆ. ಪ್ರಶಾಂತ್ ಶೆಟ್ಟಿ ಅವರಿಗೆ ಗ್ರಾಮೀಣ ಪ್ರದೇಶದ ಉತ್ತಮ ವೈದ್ಯಕೀಯ ಸೇವೆಗಾಗಿ ದೆಹಲಿಯ ಗ್ಲೋಬಲ್ ಅಚೀವರ್‍ಸ್ ಫೌಂಡೇಷನ್ ಸಂಸ್ಥೆಯು ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ ಸಹಿತವಾಗಿ ಹಲವು ಗೌರವ ಪ್ರಶಸ್ತಿಗಳು, ಸಮ್ಮಾನಗಳು ಲಭಿಸಿವೆ.