ಮಣಿಪಾಲ: ಮುಂಬಯಿಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ 40 ಲ.ರೂ.ಮೌಲ್ಯದ ಚಿನ್ನಾಭರಣ ಮತ್ತು ಡೈಮಂಡ್ ಆಭರಣಗಳು ಕಳವಾದ ಘಟನೆ ನಡೆದಿದೆ.
ದೀಪಾ ರೈ(44) ಚಿನ್ನಾಭರಣ ಕಳೆದುಕೊಂಡವರು.
ಮಹಾರಾಷ್ಟ್ರದ ಮುಲುಂದು ವೈಶಾಲಿ ನಗರದ ದೀಪಾ ರೈ ಅವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಟಪಾಡಿಯಲ್ಲಿರುವ ತಮ್ಮ ಮನೆಗೆ ಡಿ.5ರಂದು ಅಕ್ಕ, ಭಾವ, ಅಮ್ಮ ಹಾಗೂ ತಂದೆಯೊಂದಿಗೆ ಮುಂಬಯಿಯ ಪನ್ವೇಲಿನಿಂದ ಮತ್ಸ್ಯಗಂಧ ರೈಲಿನಲ್ಲಿ ಹೊರಟಿದ್ದರು. ಈ ವೇಳೆ ತಮ್ಮ ಚಿನ್ನಾಭರಣಗಳನ್ನು 3 ಬ್ಯಾಗ್‌ಗಳಲ್ಲಿ ಇರಿಸಿ, ಸೀರೆಯ ಮಧ್ಯಭಾಗದಲ್ಲಿ ಇಟ್ಟುಕೊಂಡಿದ್ದರು. ಡಿ.6ರಂದು ಮುಂಜಾನೆ 5 ಗಂಟೆಗೆ ರೈಲು ಕುಂದಾಪುರ ಸ್ಟೇಷನ್ ತಲುಪಿದ್ದು, ಉಡುಪಿಯಲ್ಲಿ ಇಳಿಯಲು ಸಿದ್ದತೆ ನಡೆಸಿ ಅವರು ಬ್ಯಾಗ್‌ಗಳನ್ನು ರೈಲಿನ ಬಾಗಿಲಿನ ಬಳಿ ತಂದು ಇರಿಸಿದ್ದರು.
ರೈಲು ಮುಂಜಾನೆ 5.40ಕ್ಕೆ ಉಡುಪಿಯ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು, ಬಳಿಕ ರೈಲಿನಿಂದ ಇಳಿದು ಕಟಪಾಡಿಯ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ 3 ಬ್ಯಾಗ್‌ನಲ್ಲಿಟ್ಟಿರುವ ಚಿನ್ನಾಭರಣಗಳು ಕಳವಾಗಿರುವುದು ಕಂಡುಬಂತು. ಕಳವಾಗಿರುವ ಚಿನ್ನಾಾಭರಣಗಳ ಅಂದಾಜು ತೂಕ 850 ಗ್ರಾಂ.ಆಗಿದ್ದು, ಒಟ್ಟು ಮೌಲ್ಯ 34 ಲ.ರೂ.ಆಗಿದೆ. ಕಳವಾದ ಡೈಮಂಡ್ ಮೌಲ್ಯ 6 ಲ.ರೂ.ಆಗಿದೆ ಎಂದು ಅಂದಾಜಿಸಲಾಗಿದೆ. ಇವುಗಳ ಒಟ್ಟು ಮೌಲ್ಯ 40 ಲ.ರೂ.ಆಗಿದೆ.
Related Articles
ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.