Advertisement

ಚಿನ್ನಾಭರಣ ಮಾರುಕಟ್ಟೆ “ಝಗಮಗ’; ಶೇ.95ರಷ್ಟು ವ್ಯಾಪಾರ

11:01 PM Oct 23, 2022 | Team Udayavani |

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ವೇಳೆ ಎರಡು ವರ್ಷ ಮಂಕಾಗಿದ್ದ ರಾಜ್ಯದ ಚಿನ್ನಾಭರಣ ಮಾರುಕಟ್ಟೆ ಈ ಬಾರಿ ಝಗಮಗಿಸುತ್ತಿದೆ. ಜತೆಗೆ ವಹಿವಾಟು ಸಹ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಶೇ. 25ರಷ್ಟು ಖರೀದಿ ಪ್ರಕ್ರಿಯೆಯಲ್ಲಿ ಏರಿಕೆ ಕಂಡು ಬಂದಿದೆ.

Advertisement

ಮುಂಗಡ ಬುಕ್ಕಿಂಗ್‌
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಚಿನ್ನಾಭರಣ ಮಾಲಕರು ಮುಂಗಡ ಬುಕ್ಕಿಂಗ್‌ ಜತೆಗೆ ರಿಯಾಯಿತಿ ದರದ ಮಾರಾಟ ಹಾಗೂ ವಜ್ರಾಭರಣ ಖರೀದಿಗೆ ತಕ್ಕಂತೆ ಗಿಫ್ಟ್ ಕೂಡ ಘೋಷಣೆ ಮಾಡಿದ್ದಾರೆ. ಅಂಗಡಿಗಳಿಗೆ ಭೇಟಿ ನೀಡಿ ಶೇ.10ರಷ್ಟು ಜನರು ಆಭರಣ ಖರೀದಿ ಮಾಡಿದರೆ ಉಳಿದ ಶೇ.90ರಷ್ಟು ಗ್ರಾಹಕರು ಮುಂಗಡವಾಗಿಯೇ ತಮಗಿಷ್ಟವಾದ ಆಭರಣಗಳನ್ನು ವಿನ್ಯಾಸ ಪಡಿಸಿ ಖರೀದಿಸಿದ್ದಾರೆಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಾರೆ.

ಶೇ.95ರಷ್ಟು ವ್ಯಾಪಾರ
ಕಳೆದ ವರ್ಷ ಚಿನ್ನಾಭರಣ ಮಾರುಕಟ್ಟೆಯಲ್ಲಿ ಒಟ್ಟಾರೆ ಶೇ.70ರಷ್ಟು ಖರೀದಿ ಪ್ರಕ್ರಿಯೆ ನಡೆದಿತ್ತು. ಆದರೆ ಈ ಬಾರಿ ಕೋವಿಡ್‌ ಅಡೆತಡೆಯಿಲ್ಲದ ಹಿನ್ನೆಲೆಯಲ್ಲಿ ಜತೆಗೆ ಪ್ರತಿಷ್ಠಿತ ಮಳಿಗೆಗಳು ಭಿನ್ನ ಆಫರ್‌ಗಳನ್ನು ನೀಡಿರುವುದರಿಂದ ಶೇ.95ರಷ್ಟು ವ್ಯಾಪಾರ ವಹಿವಾಟು ನಡೆದಿದೆ. ಡೈಮಂಡ್‌ ವ್ಯಾಪಾರದಲ್ಲಿ ಶೇ.5ರಷ್ಟು ಏರಿಕೆ ಆಗಿದೆ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಡಾ| ಬಿ.ರಾಮಾಚಾರಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದಾದ್ಯಂತ ಸುಮಾರು 25 ಸಾವಿರ ಚಿನ್ನಾಭರಣ ಮಾರಾಟ ಮಳಿಗೆಗಳಿವೆ. ಬೆಂಗಳೂರಿನಲ್ಲಿ ತಯಾರಾಗುವ ಭಿನ್ನ ಆಭರಣಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ. 142 ದೇಶಗಳಿಗೆ ಸಿಲಿಕಾನ್‌ ಸಿಟಿಯಿಂದ ಆಭರಣ ರಫ್ತಾಗಲಿದೆ ಅಮೆರಿಕ, ಯೂರೋಪ್‌, ಆಫ್ರಿಕಾ, ದಕ್ಷಿಣ ಏಷ್ಯಾ, ರಷ್ಯಾ ಸಹಿತ ಹಲವು ದೇಶಗಳಲ್ಲಿರುವ ಭಾರತೀಯರು ಕೂಡ ಖರೀದಿಸಿದ್ದಾರೆ ಎಂದು ತಿಳಿಸುತ್ತಾರೆ.

ಪ್ರಮೋಶನ್‌ ಸ್ಕೀಮ್‌ ಜಾರಿ
ಈ ಸಲ ಕೆಲವು ಪ್ರಮೋಷನ್‌ ಸ್ಕೀಮ್‌ಗಳನ್ನು ಅಸೋಸಿಯೇಷನ್‌ಗಳ ಮೂಲಕ ಪರಿಚಯಿಸಲಾಗಿದೆ. ಸಂಘದ ಯೋಜನೆಯಂತೆ ರಾಜ್ಯಾದ್ಯಂತ ಆಭರಣ ಮಳಿಗೆಗಳಲ್ಲಿ 50 ಸಾವಿರ ಹಾಗೂ ಅದಕ್ಕೂ ಹೆಚ್ಚಿನ ಚಿನ್ನ ಖರೀದಿ ಮಾಡಿದ ಗ್ರಾಹಕರಿಗೆ ಕೂಪನ್‌ ನೀಡಲಾಗುತ್ತಿದೆ. ವಿಜೇತರಿಗೆ ಅವರು ಖರೀದಿಸಿದ ಆಭರಣದ ಬೆಲೆ ಅನುಸಾರ ಅರ್ಧ ಕೆಜಿ ಚಿನ್ನ, 1 ಕೆಜಿ ಚಿನ್ನ ಹಾಗೂ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಲಾಗುವುದು. ವ್ಯಾಪಾರ ಹೆಚ್ಚಿಸಲು ಈ ರೀತಿಯ ಆಫ‌ರ್‌ಗಳನ್ನು ನೀಡಲಾಗಿದೆ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಾರೆ.

Advertisement

ಕರ್ನಾಟಕ ಜುವೆಲ್ಲರಿ ಅಸೋಸಿಯೇಶನ್‌ ಅಧ್ಯಕ್ಷ ಟಿ.ಎ.ಶರವಣ, ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಬಾರಿ ಜನರು ಮನೆ ಬಿಟ್ಟು ಹೊರಗಡೆ ಹೋಗಿ ಹಣ ಖರ್ಚು ಮಾಡಿರಲಿಲ್ಲ. ಈ ಬಾರಿ ಆ ಹಣವನ್ನು ಆಭರಣಗಳ ಖರೀದಿಗೆ ಬಳಸುತ್ತಿದ್ದಾರೆಂದು ಮಾಹಿತಿ ನೀಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next