Advertisement

ಮಣ್ಣಿನ ಗಣಪನಲ್ಲಿ ಸಿಗಬಹುದು ಚಿನ್ನ, ಬೆಳ್ಳಿ ನಾಣ್ಯ!

11:28 AM Aug 21, 2017 | |

ಬೆಂಗಳೂರು: “ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ, ಮನೆಯಲ್ಲೇ ವಿಸರ್ಜಿಸಿ, ಬೆಳ್ಳಿ ಅಥವಾ ಚಿನ್ನದ ನಾಣ್ಯ ತಮ್ಮದಾಗಿಸಿಕೊಳ್ಳಿ’ ಇದು ಸರ್ಕಾರದ ಘೋಷಣೆಯಲ್ಲ. ಬದಲಿಗೆ ಸಮರ್ಪಣ ಸೇವಾ ಸಂಸ್ಥೆ ಸಹಯೋಗದಲ್ಲಿ ಮಾಜಿ ಉಪಮೇಯರ್‌ ಹರೀಶ್‌ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ತನ್ಮೂಲಕ ಪರಿಸರ ಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಪ್ರೋತ್ಸಾಹಿಸಲಾಗುತ್ತಿದೆ.

Advertisement

ಮಣ್ಣು ಮತ್ತು ಸಗಣಿಯಿಂದ ತಯಾರಿಸಿರುವ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಲ್ಲಿ ಬೆಳ್ಳಿ ಮತ್ತು ಚಿನ್ನದ ನಾಣ್ಯಗಳನ್ನು ಹಾಕಲಾಗಿದೆ. ಇಂತಹ ಅದೃಷ್ಟದ ಗಣಪತಿ ವಿಗ್ರಹಗಳು ಅತ್ಯಂತ ಅಗ್ಗದ ದರದಲ್ಲಿ ದೊರೆಯಲಿದ್ದು, ಈಗಾಗಲೇ ಈ ರೀತಿಯ ಆರು ಸಾವಿರ ಮೂರ್ತಿಗಳನ್ನು ಸಿದ್ಧಪಡಿಸಿರುವ ಸಂಸ್ಥೆ, 10 ಸಾವಿರ ಮೂರ್ತಿ ರೂಪಿಸುವ ಗುರಿ ಹೊಂದಿದೆ.

ರಾಜಾಜಿನಗರ 1ನೇ ಬ್ಲಾಕ್‌ನಲ್ಲಿರುವ ಸರ್‌ ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಆಯೋಜಿಸಿದ್ದ ಈ ಅಪರೂಪದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕರು ಗಣೇಶ ವಿಸರ್ಜನೆಯನ್ನು ಮನೆಯಲ್ಲೇ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ನಾವೇ ಕೈಯಲ್ಲಿ ಮಣ್ಣು ಮತ್ತು ಸಗಣಿಯಿಂದ ಮಾಡಿದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದರಿಂದ ಪರಿಸರಕ್ಕೆ ಪೂರಕ. ಹಾಗೇ ನಮ್ಮ ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ ಎಂದರು.

“ರಾಸಾಯನಿಕ, ಪ್ಲಾಸ್ಟಿಕ್‌ ರೀತಿಯ ವಸ್ತುಗಳನ್ನು ಬಳಸಿ ತಯಾರಾದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ವಿಸರ್ಜನೆ ಸಂದರ್ಭದಲ್ಲಿ ಕೆರೆಗಳು ಕಲುಷಿತಗೊಳ್ಳುತ್ತವೆ. ಜನರ ಆರೋಗ್ಯಕ್ಕೂ ತೊಂದರೆಯಾಗುತ್ತದೆ. ಮಣ್ಣು ಮತ್ತು ಸಗಣಿಯಿಂದ ಮಾಡಿದ ಪರಿಸರ ಸ್ನೇಹಿ ಗಣಪತಿ ಬಳಕೆ ಇದಕ್ಕೆ ಸೂಕ್ತ ಪರಿಹಾರ,’ ಎಂದು ಸಲಹೆ ನೀಡಿದರು.

ದೇಶದಲ್ಲೇ ಮೊದಲು
ಬೆಳ್ಳಿ ಹಾಗೂ ಚಿನ್ನದ ನಾಣ್ಯಗಳನ್ನು ಹೊಂದಿರುವ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವ ಮೂಲಕ ಮನೆಯಲ್ಲೆ ಗಣೇಶ ವಿಸರ್ಜಿಸಲು ಪ್ರೋತ್ಸಾಹ ನೀಡುತ್ತಿರುವುದು ದೇಶದಲ್ಲೇ ಮೊದಲ ಪ್ರಯತ್ನ ಎನ್ನಬಹುದು. ಈ ಕಾರ್ಯ ಹೀಗೆ ಮುಂದುವರಿಯಲಿ. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಬಳಿಕ ಅದನ್ನು ಮನೇಯಲ್ಲೇ ವಿಸರ್ಜನೆ ಮಾಡುವುದರಿಂದ ಅದೃಷ್ಟವಂತರಿಗೆ ಬೆಳ್ಳಿ ಅಥವಾ ಬಂಗಾರದ ನ್ಯಾಣ್ಯ ಸಿಗಲಿದೆ.’ ಎಂದು ಸದಾನಂದಗೌಡರು ಹೇಳಿದರು.

Advertisement

ಸಮರ್ಪಣ ಸಂಸ್ಥೆ ಅಧ್ಯಕ್ಷ ಶಿವಕುಮಾರ್‌ ಹೊಸಮನಿ ಮಾತನಾಡಿ, “ಪ್ರತಿ ವರ್ಷ ಗಣೇಶ ಹಬ್ಬದ ವೇಳೆ ಒಂದಲ್ಲ ಒಂದು ವಿಶೇಷ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷ 10 ಸಾವಿರ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದು, ಈ ಪೈಕಿ ಶೇ.60ರಷ್ಟು ವಿಗ್ರಹಗಳಲ್ಲಿ ಬೆಳ್ಳಿ ನಾಣ್ಯಗಳು ಇರಲಿವೆ. 4 ಮೂರ್ತಿಗಳಿಗೆ ಮಾತ್ರ ಬಂಗಾರದ ನಾಣ್ಯಗಳನ್ನು ಹಾಕಲಾಗಿದೆ,’ ಎಂದರು ವಿವರಿಸಿದರು.

“ಇದೊರಂದಿಗೆ ಮನೆಯಲ್ಲೇ ಮೂರ್ತಿ ವಿಸರ್ಜನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೂರ್ತಿಗೆ ಬಳಕೆ ಮಾಡಿರುವ ಮಣ್ಣಿನಲ್ಲಿ ಹೂವು, ತರಕಾರಿ, ಸೊಪ್ಪು, ತುಳಸಿ ಗಿಡದ ಬೀಜಗಳನ್ನು ಹಾಕಲಾಗಿದೆ,’ ಎಂದರು. ಕಾರ್ಯಕ್ರಮದಲ್ಲಿ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಎಂ.ನಾಗರಾಜ್‌, ಬೆಳ್ಳಿ ನಾಣ್ಯಗಳ ದಾನಿಗಳಾದ ಗಣೇಶ ಜುವೆಲರ್ಸ್‌ ಮಾಲೀಕರು, ಮಂಡಳ ಅಧ್ಯಕ್ಷ ಪ್ರಸನ್ನ, ಆರ್‌ಎಸ್‌ಎಸ್‌ನ ಮಹೋನ್‌ ಜೀ ಉಪಸ್ಥಿತರಿದ್ದರು.

5 ಗ್ರಾಂ ಬೆಳ್ಳಿ, 1 ಗ್ರಾಂ ಚಿನ್ನದ ನಾಣ್ಯ!
ಶೇ.70ರಷ್ಟು ಮಣ್ಣು ಮತ್ತು ಶೇ.30ರಷ್ಟು ಸಗಣಿಯಿಂದ ತಯಾರಿಸಲಾಗಿರುವ ಸಾವಿರಾರು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಲ್ಲಿ 5 ಗ್ರಾಂ ತೂಕದ ಬೆಳ್ಳಿ ಮತ್ತು 1 ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ಇರಿಸಲಾಗಿದೆ. ಈಗಾಗಲೇ 6 ಸಾವಿರ ವಿಗ್ರಹಗಳು ಮಾರಾಟವಾಗಿದ್ದು, ಈ ಪೈಕಿ 3,800 ವಿಗ್ರಹಗಳಲ್ಲಿ ನಾಣ್ಯಗಳಿವೆ.

* ಯಾವುದಕ್ಕೆ ಎಷ್ಟು? ಇಂಚು  ದರ(ರೂ.)
7        100
9        180
11      200
14      250
16      450
19      550

ಎರಡು ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ಮಾಡಿಕೊಂಡು ಬರುತ್ತಿದ್ದೇವೆ. ಸಾರ್ವಜನಿಕರು ಪರಿಸರ ಸ್ನೇಹಿ ಗಣಪತಿ ಬಳಸಲು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವೇ ಹೊರತು, ಸ್ವಾರ್ಥವಿಲ್ಲ. ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಭವಿಷ್ಯದಲ್ಲಿ ಎದುರಾಗುವ ಪರಿಸರ ಮಾಲಿನ್ಯ ತಪ್ಪಿಸಲು ಜನತೆ ಸಹಕರಿಸಬೇಕು.
-ಎಸ್‌.ಹರೀಶ್‌, ಮಾಜಿ ಉಪಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next