ಮುಂಬಯಿ: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲ ಇದರ ಜಂಟಿ ಆಯೋಜನೆಯಲ್ಲಿ ಶರನ್ನವರಾತ್ರಿಯ ಮಹಾ ನವಮಿಯಂದು ದೀಪಾರಾಧನೆಯು ಆಶ್ರಯದ ವಿ. ಎಚ್. ಸೋಮೇಶ್ವರ್ ಸಭಾಗೃಹದಲ್ಲಿ ಸೆ. 29ರಂದು ನಡೆಯಿತು.
ಸಂಜೆ ವೇದಮೂರ್ತಿ ಶ್ರೀ ಕೃಷ್ಣರಾಜ ಉಪಾಧ್ಯಾಯರ ನೇತƒತ್ವದಲ್ಲಿ ಪುರೋಹಿತ ವರ್ಗದವರು ಶ್ರೀ ದೇವಿಯ ಮಂಡಲ ರಚಿಸಿ ಪಂಚಜ್ಯೋತಿ ಮಧ್ಯದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಾಧಿಗಳನ್ನು ವಿದ್ಯುಕ್ತವ್ವಾಗಿ ನೆರವೇರಿಸಿದರು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿಯ ಕೃಷ್ಣ ಆಚಾರ್ಯ ಮತ್ತು ಪ್ರೀತಿ ಆಚಾರ್ಯ ದಂಪತಿ ವಹಿಸಿದ್ದರು. ಶ್ರೀ ದೇವಿಗೆ ಮಹಾ ಮಂಗಳಾರತಿಯಾದ ನಂತರ ಶ್ರೀ ಕೃಷ್ಣ ಆಚಾರ್ಯ ದಂಪತಿ ಸುವಾಸಿನಿ ಪೂಜೆ ನೆರವೇರಿಸಿದರು. ಇಂದು ರಾವ್, ವತ್ಸಲಾ ನಾವಡ, ಸ್ಮಿತಾ ಧಾರೇಶ್ವರ್ ಹಾಗೂ ನಿರ್ಮಲಾ ಶಿವತ್ತಾಯ ಅವರು ಸಹಕರಿಸಿದರು. ಸುವಾಸಿನಿ ಪೂಜೆಯನ್ನು ಬದ್ರಿನಾರಾಯಣ ಪಿಲಿಂಜೆ ಮತ್ತು ಪೂರ್ಣಿಮಾ ದಂಪತಿ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಗೋಕುಲ ಭಜನಾ ಮಂಡಳಿಯವರಿಂದ ಭಜನೆ, ಸ್ತೋತ್ರ ಪಠನೆಗಳೊಂದಿಗೆ ಶಾರದಾ ಪೂಜೆಯನ್ನು ನೆರವೇರಿಸಲಾುತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಪರ್ಯಾಯ ಸಂಚಾರಕ್ಕೆ ಮುಂಬಯಿಗೆ ಆಗಮಿಸಿದ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರವನ್ನು ಪುರೋಹಿತ ವರ್ಗ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿಯ ಬಿ. ರಮಾನಂದ ರಾವ್, ಕೃಷ್ಣ ಆಚಾರ್ಯ, ಬಿಎಸ್‌ಕೆಬಿ ಅಸೋಸಿಯೇಶನ್ ಉಪಾಧ್ಯಕ್ಷ ವಾಮನ್ ಹೊಳ್ಳ, ಕಾರ್ಯದರ್ಶಿ ಅನಂತ ಪದ್ಮನಾಭ ಪೋತಿ, ಹಾಗೂ ಪದಾಧಿಕಾರಿಗಳು ಪೂರ್ಣ ಕುಂಭದೊಂದಿಗೆ ಆಶ್ರಯಕ್ಕೆ ಸ್ವಾಗತಿಸಿ ಬರಮಾಡಿಕೊಂಡರು. ವಿಶ್ವಸ್ಥ ಮಂಡಳಿಯ ಪರವಾಗಿ ಬಿ. ರಮಾನಂದ ರಾವ್ ದಂಪತಿ ಪೂಜ್ಯರ ಪಾದಪೂಜೆಗೈದರು.
ಶ್ರೀಗಳು ಆಶೀರ್ವಚನ ನೀಡಿ, ಪರ್ಯಾಯ ಪೀಠವನ್ನು ಏರಲಿರುವ ಮಠಾಧೀಶರು ಮುಂಬಯಿಗೆ ಆಗಮಿಸುವಾಗ ಪ್ರಥಮವಾಗಿ ಗೋಕುಲ ಶ್ರೀ ಕೃಷ್ಣನ ಸನ್ನಿಧಿಗೆ ಆಗಮಿಸುವುದು ಸಂಪ್ರದಾಯ. ಆದರೆ ಸದ್ಯ ಗೋಕುಲ ಪುನರ್ ನಿರ್ಮಾಣ ಹಂತದಲ್ಲಿರುವುದರಿಂದ ಆಶ್ರಯದ ಬಾಲಾಲಯದಲ್ಲಿರುವ ಶ್ರೀ ಕೃಷ್ಣನ ದರ್ಶನ ದುರ್ಗಾಮಾತೆಯ ವಿಶೇಷ ಆರಾಧನೆಯಂದು ಆಗಬೇಕೆಂಬುದು ದೈವ ಸಂಕಲ್ಪವಾಗಿದೆ. ದೇವಿಯ ಪ್ರಸನ್ನ ಕಾಲವಾದ ಶರನ್ನವರಾತ್ರಿಯ ಪರ್ವಕಾಲದಲ್ಲಿ ದೀಪಾರಾಧನೆಯನ್ನು ಮಾಡುವುದು ಅತ್ಯಂತ ವಿಶೇಷ. ದೀಪ ಜ್ಞಾನದ ಪ್ರತೀಕ. ದೀಪ ಉರಿಯಬೇಕಾದರೆ ತುಪ್ಪ, ಬತ್ತಿ ಮತ್ತು ಬೆಂಕಿ ಬೇಕು. ಗೋಕುಲ ಸಂಸ್ಥೆ ದೀಪವಿದ್ದಂತೆ. ತುಪ್ಪ ಪ್ರೀತಿಯ, ಬೆಂಕಿ ಜ್ಞಾನದ ಹಾಗೂ ತಾನು ಉರಿದು ಲೋಕಕ್ಕೆ ಬೆಳಕನ್ನು ನೀಡುವ ಬತ್ತಿ ಆತ್ಮಾರ್ಪಣೆಯ ಪ್ರತೀಕ. ಅಂತೆಯೇ ಗೋಕುಲ ಎಂಬ ಸಂಸ್ಥೆ ಇಷ್ಟು ವರ್ಷ ಬೆಳೆಯುತ್ತಾ ಬಂದಿದೆ ಎಂದಾದರೆ ಅದಕ್ಕೆ ಸಂಸ್ಥೆಯ ಸದಸ್ಯರೆಲ್ಲರ ಪ್ರೀತಿ, ಅರ್ಪಣಾ ಮನೋಭಾವ ಹಾಗೂ ಜ್ಞಾನವಂತರ ಸಹಕಾರದಿಂದ ಮಾತ್ರ. ಅಂತೆಯೇ ಭವಿಷ್ಯದಲ್ಲಿ ನಿರ್ಮಾಣವಾಗಲಿರುವ ಗೋಕುಲದ ಏಳಂತಸ್ತಿನ ಭವನ ಕೇವಲ ಸಿಮೆಂಟ್‌ನ ಭವನವಾಗದೆ ಆಧ್ಯಾತ್ಮಿಕ ಹಾಗೂ ಸದಸ್ಯರೆಲ್ಲರ ಪ್ರೀತಿ ಸ್ನೇಹದ ಭವನವಾಗಲಿದೆ ಎಂದು ನುಡಿದು ಶುಭಹಾರೈಸಿದರು. ಆನಂತರ ಶ್ರೀಗಳು ಬಾಲಾಲಯದಲ್ಲಿ ಶ್ರೀ ಗೋಪಾಲಕೃಷ್ಣನಿಗೆ ಪೂಜೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ಥ ಮಂಡಳಿಯ ಬಿ. ರಮಾನಂದ ರಾವ್, ಕೃಷ್ಣ ಆಚಾರ್ಯ, ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳ, ಶೈಲಿನಿ ರಾವ್, ಕಾರ್ಯದರ್ಶಿ ಎ. ಪಿ. ಕೆ. ಪೋತಿ. ಜತೆ ಕಾರ್ಯದರ್ಶಿಗಳಾದ ಪಿ. ಸಿ. ಎನ್. ರಾವ್, ಚಿತ್ರಾ ಮೇಲ್ಮನೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗುರುರಾಜ್ ಭಟ್, ಸಿ. ಕೆ. ಭಟ್, ಶಿವರಾಯ, ಉಮೇಶ್ ರಾವ್, ಯು. ಆರ್. ರಾವ್, ಶಶಿಧರ್ ರಾವ್, ದಾಮೋದರ್ ಭಟ್, ದೀಪಕ್ ಶಿವತ್ತಾಯ, ಚಂದ್ರಾವತಿ ರಾವ್, ಸಹನಾ ಪೋತಿ, ಪ್ರೇಮಾ ಎಸ್ ರಾವ್, ಇಂದ್ರಾಣಿ ರಾವ್, ಸ್ಮಿತಾ ಭಟ್, ಅರ್ಪಿತಾ ಬಂಟ್ವಾಳ್, ವಾಣಿ ಭಟ್, ವನಿತಾ ರಾವ್ ಮುಂತಾದವರು ಉಪಸ್ಥಿತರಿದ್ದರು. ಸೇವಾರ್ಥಿಗಳಿಗೆ ಹಾಗೂ ಉಪಸ್ಥಿತರಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.