ಕುಂದಾಪುರದಲ್ಲಿ ಆ. 12 ರಂದು ಯಕ್ಷರಂಗ -2016 ಪ್ರಯುಕ್ತ ನಡೆದ ನಾಟಕ ಗೋಕುಲ ನಿರ್ಗಮನದ ದಿನ ಜೋರು ಮಳೆ . ಆದರೂ ಕಲಾ ಮಂದಿರ ತುಂಬಿತ್ತು ಕೃಷ್ಣನ ಗೋಕುಲ ನಿರ್ಗಮನ ನೋಡಲು. ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರ ಪ್ರಸ್ತುತಿ, ಪು.ತಿ.ನ ರಚಿಸಿದ, ಅರೆಹೊಳೆ ಶ್ವೇತ ನಿರ್ದೇಶಿಸಿದ ಗೋಕುಲ ನಿರ್ಗಮನ ಎಲ್ಲರನ್ನೂ ಆಕರ್ಷಿಸುವಲ್ಲಿ ಸಫಲವಾಯಿತು. ಪುಟ್ಟ ಮಕ್ಕಳಿಂದ ಹಿಡಿದು ಬೇರೆ ಬೇರೆ ವಯಸ್ಸಿನವರು ಪಾಲ್ಗೊಂಡು ನಡೆಸಿಕೊಟ್ಟ ಈ ನೃತ್ಯನಾಟಕ ಮನಸ್ಸಿನಲ್ಲಿ ಛಾಪು ಮೂಡಿಸಿತು.
ಬಣ್ಣ ಬಣ್ಣದ ಗೋಕುಲ ಕೃಷ್ಣನ ಕೊಳಲಿಂದಲೇ ಅರಳಿರುತ್ತದೆ ಎಂದೇ ಆರಂಭವಾಗುವುದು ಈ ನಾಟಕ ಗೋಕುಲದಲ್ಲಿ ಪ್ರತಿ ನಗು, ನೆಮ್ಮದಿ ಎಲ್ಲವೂ ಕೃಷ್ಣನ ಮಾಧುರ್ಯಕ್ಕೆ ಮೀಸಲು ಅನ್ನುತ್ತದೆ. ಕೃಷ್ಣನ ಮುರಳಿ, ಇಡೀ ಗೋಕುಲದ ಸಂಸ್ಕೃತಿ, ಮಾಧುರ್ಯವನ್ನು ಪ್ರತಿನಿಧಿಸುತ್ತದೆ. ಕಲೆಯ ಆಧಾರದ ಆ ನಗರದಲ್ಲಿ ನಗುವಿಗಷ್ಟೇ ಸ್ಥಾನ ಜಗಳಕ್ಕಲ್ಲ, ಬೇಸರಕ್ಕಲ್ಲ ಎಂಬಂತೆ ಗಾನ, ನೃತ್ಯ ಲಾಲಿತ್ಯ, ಶೃಂಗಾರ ಮೇಳೈಸಿರುತ್ತದೆ. ಇವೆಲ್ಲಕ್ಕೂ ಮಂಕು ಕವಿಯುವುದು ಅಕ್ರೂರರ ಆಗಮನದಿಂದ.
ಲಾಲಿತ್ಯ, ಮುರಳಿಯಲ್ಲೇ ಮುಳುಗಿದ ಕೃಷ್ಣನನ್ನ ಪಡೆಯಲು, ಶೌರ್ಯ, ವೀರತನದ ಹುಂಬಿನ ಬಲರಾಮನನ್ನ ಉಪಯೋಗಿಸುತ್ತಾರೆ ಅಕ್ರೂರರು. ಮಧುರೆಯಲ್ಲಿ, ರಾಜ್ಯ ನಿರ್ವಹಣೆ, ಶೌರ್ಯದ ಪ್ರತಿ ಇರಬೇಕೆಂದು ಅರಿತ ಕೃಷ್ಣ ರಾಧೆ ಜೊತೆಗೆ ಕೊಳಲನ್ನೂ ಬಿಟ್ಟು ಹೊರಡುತ್ತಾನೆ, ನಳನಳಿಸುತ್ತಿದ್ದ ಗೋಕುಲ ಮಂಕಾಗುತ್ತದೆ. ಕೊಳಲಿಲ್ಲದೆ ಅಳುತ್ತಿದ್ದ ಗೋಕುಲದಲ್ಲಿ ರಾಧೆ ಕೊಳಲಾಗಿ ಹೊಮ್ಮತ್ತಾಳೆ.
ನಾಟಕ ಇಷ್ಟೇ. ಆದರೂ ಲಾಲಿತ್ಯವನ್ನು ಪ್ರದರ್ಶಿಸುವ ಮಕ್ಕಳ ನೃತ್ಯಗಳು ತೀರ ಸಾಂಪ್ರದಾಯಿಕವಲ್ಲದೆಯೂ ಖಚಿತತೆಯಿಂದ ಕೂಡಿತ್ತು. ನಾಟಕದಲ್ಲಿ ಜೀವಸ್ಪರ್ಷತೆಯ ಬಗ್ಗೆ ತುಂಬಾ ಮಾತುಗಳಿವೆ, ಹಾಡುಗಳಿವೆ. ಕೃಷ್ಣ ಜೀವನದ ಮಾಧುರ್ಯವಾಗಿ ಹೊರಹೊಮ್ಮಿದರೆ, ಬಲರಾಮ ಶೌರ್ಯದ ಪ್ರತೀಕವಾಗುತ್ತಾನೆ. ಕೊನೆಯಲ್ಲಿ ಶೌರ್ಯಕ್ಕಿರುವ ಪ್ರಾಮುಖ್ಯತೆ ಜೀವನ ಸ್ಪರ್ಷತೆಗೆ ಇಲ್ಲದಿರುವುದು ಈ ನಾಟಕದ ಒಟ್ಟೂ ಆಶಯವಾಗುತ್ತದೆ. ಆದರೆ ಜೊತೆಗೆ ಜೀವನದ ಮಾಧುರ್ಯ ಒಬ್ಬರಿಂದ ಇನ್ನೊಬ್ಬರಿಗೆ ಬದಲಾಗುತ್ತಾ ಹೋಗುತ್ತದೆ. ಇದು ಕೃಷ್ಣನ ಮುರಳಿ ರಾಧೆಯ ಪಾಲಾಗುತ್ತಾ ಸಾಗುವಲ್ಲಿ ತೋರಿಸಲ್ಪಡುತ್ತದೆ. ಇವತ್ತಿನ ಬದುಕಿನಲ್ಲಿ ಕಾಣೆಯಾಗಿ ಮಂಕಾಗಿರುವ ಸಮಾಜಕ್ಕೆ ಕೃಷ್ಣನ ಮುರಳಿಯ ಅವಶ್ಯಕತೆ ಈ ನೃತ್ಯನಾಟಕ ನೆನಪಿಸುತ್ತದೆ. ರಾಧೆ ಕೃಷ್ಣರ ಪ್ರೀತಿಯಲ್ಲಿ ಕೃಷ್ಣನಾಗಿ ಶ್ವೇತಾ ಅರೆಹೊಳೆ ಪರಾನ್ಮುಖಳಾಗುತ್ತಾರೆ. ತನ್ನ ಆಂಗಿಕ ಅಭಿನಯ ಹಾಗೂ ನೃತ್ಯ ಭಂಗಿಗಳಿಂದ ಪ್ರೇಕ್ಷಕರನ್ನ ಸೆಳೆಯುತ್ತಾರೆ. ಅಕ್ರೂರನ ಪಾತ್ರ ಶ್ವೇತಾ ಅರೆಹೊಳೆಯವರ ನಿರ್ದೇಶನದಂತೆಯೇ ಮನಸ್ಸಿನಲ್ಲಿ ನಿಂತು ಬಿಡುತ್ತದೆ. ಇಡೀ ನƒತ್ಯನಾಟಕದ ನಿರ್ದೇಶನವನ್ನು ಶ್ವೇತಾ ಅರೆಹೊಳೆ ಚೆನ್ನಾಗಿ ಮಾಡಿದ್ದಾರೆ.
ವಸ್ತ್ರ ವಿನ್ಯಾಸವನ್ನು ಸರಳ ಹಾಗೂ ನಾಜೂಕಾಗಿ ನಿರ್ವಹಿಸಿದ್ದು ಗಮನಾರ್ಹ. ಇಡೀ ನಾಟಕದ ಜೀವಾಳ ಶ್ವೇತಾ ಅರೆಹೊಳೆಯ ನಿರ್ದೇಶನ ಹಾಗೂ ಉತ್ತಮ ನೃತ್ಯ ಪ್ರದರ್ಶನ. ಅವರ ಆಂಗಿಕಗಳು ಗಮನವನ್ನ ಆಕೆಯ ಮೇಲೇ ಇರುವಂತೆ ಮಾಡುತ್ತದೆ. ಮುದ್ರಿತ ಮಾತುಗಳೂ ಹಾಡುಗಳಿಂದ ಕೂಡಿದ ಈ ನಾಟಕದ ಮಾತುಗಳು ಸ್ವಲ್ಪ ಬದಲಾಗಬಹುದಿತ್ತೇನೋ ಅನ್ನಿಸುವುದು ನಿಜವಾದರೂ ನಾಟಕದ ಹೊಸತನ ಇದರಲ್ಲಿ ಕಾಣುತ್ತದೆ. ಹಾಡುಗಳು, ಹಾಡುಗಾರರು ನಾಟಕವನ್ನ ಜೀವಂತವಾಗಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯೆದಲ್ಲಿ ಒಂದಷ್ಟು ನಿಂತ ನೀರಿನಂತೆ ಭಾಸವಾಗುವ ನಾಟಕ ಒಟ್ಟಾರೆಯಾಗಿ ಮನಸ್ಸಿಗೆ ಆಹ್ಲಾದಕರ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಡಾ| ರಶ್ಮಿ ಕುಂದಾಪುರ