ಬೆಂಗಳೂರು: ಆಂಧ್ರ ಮೂಲದ ಹೆಸರಾಂತ ಫಿಜಿಕೆಮ್ ಲ್ಯಾಬೋರೇಟರೀಸ್ ಪ್ರೈ.ಲಿ., ಮೊಟ್ಟ ಮೊದಲ ಬಾರಿಗೆ ರಾಜ್ಯದ ಮಾರುಕಟ್ಟೆಗೆ “ಗೋಕಾಫ್ 20:20′ ಕೆಮ್ಮಿನ ಸಿರಪ್ ಬಿಡುಗಡೆ ಮಾಡಿದೆ. ಸಂಪೂರ್ಣ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟಿರುವ ಔಷಧವನ್ನು ಸ್ಯಾಶೆ ರೂಪದಲ್ಲಿ ಹೊರ ತಂದಿರುವುದು ವಿಶೇಷ.
ನಗರದ ಹೋಟೆಲೊಂದರಲ್ಲಿ ಹಮ್ಮಿಕೊಂಡಿದ್ದ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ, “ಕೃಷಿತೋ ನಾಸ್ತಿ ದುರ್ಬಿಕ್ಷಂ’ ಎಂಬಂತೆ ಇತರರ ಕ್ಷೇಮವನ್ನು ಬಯಸಿ ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬಹುದು. ಇದಕ್ಕೆ ಸಾಕ್ಷಿ ಫಿಜಿಕೆಮ್ ಲ್ಯಾಬೋರೇಟರೀಸ್ ಸಿಎಂಡಿ ಸಿ.ಸಿ.ಕೇಶವರಾವ್. ಅವರು ಕಳೆದ 30 ವರ್ಷಗಳಿಂದ ಔಷಧೋದ್ಯಮದಲ್ಲಿ ಕಾರ್ಯ ನಿರತರಾಗಿ ಜನರ ಆರೋಗ್ಯ ಕಾಪಾಡುವ ಕಾಯಕದಲ್ಲಿ ತೊಡಗಿದ್ದಾರೆ.
ಇಂದು ಅವರ ಸಂಸ್ಥೆ ತಯಾರಿಸಿರುವ ಕೆಮ್ಮಿನ ಸಿರಪ್ ಗೋಕಾಫ್ 20:20 ನೂರಕ್ಕೆ ನೂರರಷ್ಟು ಆಯುರ್ವೇದ ಗುಣಗಳುಳ್ಳ ಅತ್ಯುತ್ತಮ ಉತ್ಪನ್ನ. ಅದರ ಬಗ್ಗೆ ಸ್ವತಃ ನಾನು ಎರಡು, ಮೂರು ತಿಂಗಳು ಸಂಶೋಧನೆ ನಡೆಸಿ ಮತ್ತು ಔಷಧವನ್ನು ಸೇವಿಸಿ ಉಪಯೋಗ ಪಡೆದುಕೊಂಡ ಮೇಲೆ ಬ್ರ್ಯಾಂಡ್ ಅಂಬಾಸಿಡರ್ ಆಗಲು ಒಪ್ಪಿಕೊಂಡಿದ್ದೇನೆ ಎಂದರು.
ಕನ್ನಡನಾಡಿನ ದತ್ತು ಪುತ್ರನಾದ ನಾನು ಕನ್ನಡಿಗರಿಗೆ ಒಳ್ಳೆಯದನ್ನು ಮಾಡಬೇಕು, ಒಳ್ಳೆಯದನ್ನು ಕೊಡಬೇಕೆಂಬ ಕಾರ್ಯದಲ್ಲಿದ್ದೇನೆ. ಅದರ ಒಂದು ಭಾಗವಾಗಿ ಈ ಗೋಕಾಫ್ ಸಿರಪ್‌ನ್ನು ಕರ್ನಾಟಕದ ಜನತೆಗೆ ಪರಿಚಯಿಸಲು ಬಂದಿದ್ದೇನೆ ಎಂದು ನುಡಿದರು.
ಸಂಸ್ಥೆಯ ಸಿಎಂಡಿ ಸಿ.ಸಿ.ಕೇಶವರಾವ್ ಮಾತನಾಡಿ, ಫಿಜಿಕೆಮ್ ಲ್ಯಾಬೋರೇಟರೀಸ್, 400ಕ್ಕೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸುತ್ತಿದೆ. ಈಗ ಗೋಕಾಫ್ 20:20 ಎಂಬ ಕೆಮ್ಮು ನಿವಾರಣೆ ಸಿರಪ್‌ನ್ನು ಹೊರ ತಂದಿದೆ. ತುಳಸಿ, ಮೆಂತಾಲ್, ಪಿಪ್ಪಲಿ, ಪುದೀನ ಮುಂತಾದ ಆಯುರ್ವೇದ ಮೂಲಿಕೆಗಳಿಂದ ಸಿದ್ಧಪಡಿಸಲಾಗಿರುವ ಕಾಫ್ ಸಿರಪ್ ಸೇವನೆಯನ್ನು ಐದು ವರ್ಷ ಮೇಲ್ಪಟ್ಟ ಎಲ್ಲರೂ ಉಪಯೋಗಿಸಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮೊಟ್ಟ ಮೊದಲ ಬಾರಿ ಕರ್ನಾಟಕದ ಮಾರುಕಟ್ಟೆಗೆ ಸಿರಪ್‌ನ್ನು ಸ್ಯಾಶೆ ರೂಪದಲ್ಲಿ ಬಿಡುಗಡೆ ಮಾಡಿದ್ದೇವೆ.
ವರ್ಷಾಂತ್ಯದೊಳಗೆ ರಾಜ್ಯದ 26 ಸಾವಿರ ಮೆಡಿಕಲ್ ಸ್ಟೋರ್ಗಳಿಗೂ ತಲುಪಲಿದ್ದೇವೆ. ಈಗಾಗಲೇ ಆಂಧ್ರದ 40 ಸಾವಿರಕ್ಕೂ ಹೆಚ್ಚಿನ ಮೆಡಿಕಲ್ ಸ್ಟೋರ್ಗಳಲ್ಲಿ ಫಿಜಿಕೆಮ್ ಉತ್ಪನಗಳು ದೊರಕುತ್ತಿವೆ. ಮುಂದಿನ ದಿನಗಳಲ್ಲಿ ನಮ್ಮ ಉತ್ಪನ್ನಗಳು ತಮಿಳುನಾಡಿನಲ್ಲೂ ಲಭ್ಯವಾಗಲಿವೆ. ಇನ್ನೂ 10 ಮೀ.ಲಿ.ವುಳ್ಳ ಈ ಸ್ಯಾಶೆ ರೂಪದ ಗೋಕಾಫ್‌ಗೆ ಕೇವಲ 5 ರೂ.ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.