ಶಿರಸಿ: ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ನಡೆದ ಅಂತರ್ಜಾಲೀಯ ಕಾರ್ಯಕ್ರಮದಲ್ಲಿ ಗೋಕರ್ಣಮಂಡಲ.ಇನ್ ವೆಬ್ ಸೈಟ್ ಅನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ತೆರಿಗೆ ವಿಭಾಗದ ನಿವೃತ್ತ ಜಂಟಿ ಆಯುಕ್ತರು ಮತ್ತು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಸುಬ್ರಾಯ ಎಂ. ಹೆಗಡೆ ಗೌರಿಬಣ್ಣಿಗೆ, ಗೋಕರ್ಣಮಂಡಲ ವೆಬ್ ಸೈಟ್ ನ್ನು ಉದ್ಘಾಟಿಸಿ ಇ-ಗೋಕರ್ಣವಾಣಿಯನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು ನಮ್ಮ ಪರಂಪರೆಯನ್ನು ನಾವು ಪಾಲಿಸಿದರೆ ಮಾತ್ರ ಮುಂದಿನ ಪೀಳಿಗೆ ಅದನ್ನು ಕಲಿಯಲು ಸಾಧ್ಯ. ನಾವು ಹಿರಿಯರಿಗೆ ನಮಸ್ಕಾರ ಮಾಡುವ ಪದ್ದತಿಯನ್ನು ರೂಢಿಸಿಕೊಂಡರೆ ಮಾತ್ರ ನಮ್ಮ ಮಕ್ಕಳು ಹಿರಿಯರಿಗೆ ಗೌರವಿಸುವುದನ್ನು ಕಲಿಯುತ್ತಾರೆ. ಹಾಗಾಗಿ ಸಣ್ಣ-ಪುಟ್ಟ ಅವಕಾಶಗಳನ್ನು ಬಳಸಿಕೊಂಡು ನಮ್ಮ ಸಂಸ್ಕೃತಿ ಮತ್ತು ಶಿಷ್ಟಾಚಾರಗಳನ್ನು ನಮ್ಮ ಮಕ್ಕಳಿಗೆ ಕಲಿಸುವ ಅವಶ್ಯಕತೆಯಿದೆ ಎಂದರು. ವೆಬ್ ಸೈಟ್ ನಲ್ಲಿನ ಇ-ಗೋಕರ್ಣವಾಣಿಯನ್ನು ಶ್ಲಾಘಿಸಿದ ಅವರು ಗೋಕರ್ಣವಾಣಿಯು ಉತೃಷ್ಟ ಲೇಖನಗಳನ್ನೊಳಗೊಂಡಿದೆ. ನಮ್ಮ ಪರಂಪರೆ, ತಿಂಡಿ-ತಿನಿಸುಗಳು, ಹಬ್ಬ-ಹರಿದಿನಗಳು, ಆಚಾರ-ವಿಚಾರಗಳು, ಅಡಿಕೆ-ಕೊಯ್ಲು, ಆಲೆಮನೆ ಇತ್ಯಾದಿಗಳಿಗೆ ಸಂಬಂಧಪಟ್ಟ ಲೇಖನಗಳು ಹೆಚ್ಚು ಹೆಚ್ಚು ಪ್ರಕಟವಾಗಲಿ. ಇವು ಮುಂದಿನ ತಲೆಮಾರಿನ ಇತಿಹಾಸತಜ್ಞರಿಗೆ ಅಧ್ಯಯನದ ವಸ್ತುವಾಗುವಂತಿರಲಿ ಎಂದು ಅವರು ಸಲಹೆಯಿತ್ತರು.
ಗೋಕರ್ಣಮಂಡಳದ ಸ್ಥಾಪಕ ಸದಸ್ಯರುಗಳಲ್ಲೊಬ್ಬರಾದ ನಾರಾಯಣ ಜೋಯಿಸ, ಎಂಭತ್ತರ ದಶಕದ ನೆನಪುಗಳನ್ನು ಮೆಲುಕು ಹಾಕುತ್ತ ದೆಹಲಿ ಕನ್ನಡ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇರಿದ ನಂತರ ಶ್ರೀಯುತ ಈಶ್ವರ ಭಟ್, ಶ್ರೀಯುತ ಗೋಪಾಲ ಕಡೆಕೊಡಿ, ಶ್ರೀಯುತ ರಾಮಚಂದ್ರ ಭಟ್, ಶ್ರೀಯುತ ಅಡ್ಕೋಳಿ ಮತ್ತಿತರ ಹಿರಿಯ ಸದಸ್ಯರೊಂದಿಗಿನ ಒಡನಾಟ ಮತ್ತು ಗೋಕರ್ಣಮಂಡಲದ ಸ್ಥಾಪನೆಯಾದ ಬಗ್ಗೆ ವಿಸ್ತೃತವಾಗಿ ವಿವರಿಸಿದರು.
ದೆಹಲಿ ಕರ್ನಾಟಕ ಸಂಘ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ, ಹವ್ಯಕ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು, ಗೋಕರ್ಣಮಡಲದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ದೆಹಲಿಯ ಕನ್ನಡಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಗಣೇಶ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಕ್ಷೆ ಶಾಲಿನಿ ಪ್ರಶಾಂತ್ ಸ್ವಾಗತಿಸಿದರು. ಕೋಶಾಧಿಕಾರಿ ಲಲಿತಾ ಹೆಗಡೆ ವಂದಿಸಿದರು.