ಗೋಕರ್ಣ: ಇಲ್ಲಿಯ ಸಮೀಪದ ಬಳಲೆ-ಮಾದನಗೇರಿ ಬಳಿ ಹಾದು ಹೋಗಿರುವ ಚತುಷ್ಪಥ ಹೆದ್ದಾರಿ ಹಲವು ಅನಾಹುತಗಳಿಗೆ ರಹದಾರಿಯಾಗಿದ್ದು, ವಾಹನ ಸವಾರರು, ಪ್ರಯಾಣಿಕರು ಭಯಭೀತಿಯಿಂದಲೇ ಸಂಚರಿಸಬೇಕಾಗಿದೆ. ನಾಲ್ಕು ರಸ್ತೆ ಕೂಡುವ ಮಾದನಗೇರಿಯಲ್ಲಿ ಮೇಲ್ಸೇತುವೆ ನಿರ್ಮಿಸದೆ ಇರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.
ಶಿರೂರಿನಲ್ಲಿ ಬಂಡೆಗಳನ್ನು ಕೊರೆದು ರಸ್ತೆ ಮಾಡಲಾಗಿದೆ. ಆದರೆ ಇದು ಅವೈಜ್ಞಾನಿಕವಾಗಿ ಕೊರೆಯಲಾಗಿದ್ದು, ಬಂಡೆಯಂಚಿನಿಂದಲೇ ರಸ್ತೆ ನಿರ್ಮಿಸಿರುವುದರಿಂದ ಯಾವುದೇ ಕ್ಷಣದಲ್ಲಿ ಬಂಡೆ ಕುಸಿಯುವ ಅಥವಾ ಸೀಳುಬಿಟ್ಟ ಸಣ್ಣ ಪುಟ್ಟ ಕಲ್ಲುಗಳು ಬೀಳುವ ಸಾಧ್ಯತೆಯಿದೆ. ಇನ್ನು ಮಳೆಗಾಲದಲ್ಲಿ ನೀರಿನ ಒತ್ತಡಕ್ಕೆ ಒಡೆದುನಿಂತ ಕಲ್ಲು ಬೀಳುವ ಸಾಧ್ಯತೆ ಅಧಿಕವಾಗಿರುವುದರಿಂದ ಇದು ವಾಹನದ ಮೇಲೆ ಬಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ.
ಸ್ಥಳೀಯರು ಕೂಡ ಈ ಬಗ್ಗೆ ಐಆರ್‌ಬಿ ಕಂಪನಿಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೋಡ್ಸಣಿ ಸಮೀಪದ ಗಂಗಾವಳಿ ಸೇತುವೆ ಬಳಿ ತೀರಾ ಅಪಾಯಕಾರಿ ತಿರುವು ಇರುವುದರಿಂದ ಇಲ್ಲಿ ಆಗಾಗ ವಾಹನಗಳು ಪಲ್ಟಿಯಾಗುತ್ತಿರುವುದು ಕಂಡುಬರುತ್ತಿದೆ.ಪಟ್ಟಣದ ಹುಲಿದೇವರ ವಾಡದಲ್ಲಿ ನಾಲ್ಕು ರಸ್ತೆ ಕೂಡು ರಸ್ತೆಯಲ್ಲಿ ಇನ್ನುವರೆಗೂ ಚತುಷ್ಪಥ ರಸ್ತೆ ನಿರ್ಮಿಸದೆ ಏಕಮುಖವಾಗಿವುದರಿಂದ ವಾಹನ ಸವಾರರು ವೇಗವಾಗಿ ಬಂದು ನಂತರ ಎದುರಿಗೆ ಬರುವ ವಾಹನವನ್ನು ನೋಡಿ ಗಾಬರಿಗೊಂಡು ಅಪಘಾತಗಳು ಸಂಭವಿಸುತ್ತದೆ.
ಇನ್ನು ಅವರ್ಸಾದಲ್ಲಿ ಹಾಗೂ ಮಾದನಗೇರಿಯಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಸಾಕಷ್ಟು ಕಡೆಗಳಲ್ಲಿ ಇನ್ನೂ ರಸ್ತೆ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಅದು ಕೂಡ ತೀರಾ ಅಪಾಯಕಾರಿಯಾಗಿರುವುದರಿಂದ ಆಗಾಗ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯ ಎಂಬಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಂತಹ ಹತ್ತಾರು ಸಮಸ್ಯೆಗಳನ್ನು ಸರಿಪಡಿಸಬೇಕಾಗಿದೆ.
ಇಲ್ಲದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಹೋಗಲಿದೆ.
*ನಾಗರಾಜ ಮಂಜಗುಣಿ