ಹೊನ್ನಾವರ: ಐತಿಹಾಸಿಕ ಕಾಶಿಗೆ ಹೊಸ ಕಳೆ ನೀಡುವ ಹಾಗೂಧಾರ್ಮಿಕ-ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೂಪುಗೊಂಡ ಕಾಶಿ ವಿಶ್ವನಾಥ್ ಧಾಮ್ ಕಾರಿಡಾರ್ ಯೋಜನೆ ಉದ್ಘಾಟನೆಗೊಂಡ ಬಳಿಕ ದೇಶ-ವಿದೇಶದ ಗಮನ ಸೆಳೆದಿದೆ. ಪ್ರಧಾನಿ ಮೋದಿ ಕನಸಿನ ಯೋಜನೆಗಳಲ್ಲಿ ಒಂದಾದ ಇದರ ಅನುಷ್ಠಾನದ ಹಿಂದೆ ದಕ್ಷಿಣಕಾಶಿಖ್ಯಾತಿಯ ಗೋಕರ್ಣ ಮೂಲದ ಅಧಿಕಾರಿಯೊಬ್ಬರ ಶ್ರಮವಿದೆ.
ಅಂದಾಜು 339 ಕೋಟಿ ವೆಚ್ಚದ ಅತ್ಯಂತ ಮಹತ್ವ ಪೂರ್ಣ ಅತ್ಯಾಧುನಿಕ ಕಾಶಿ ವಿಶ್ವನಾಥ್ ಕಾರಿಡಾರ್ ಯೋಜನೆಯ ರೂವಾರಿ ಕರುನಾಡಿನ ನಿತಿನ್ ಗೋಕರ್ಣ. ಇವರು ವಾರಣಾಸಿಯ ಜಿಲ್ಲಾಧಿಕಾರಿಗಳಾಗಿದ್ದಾಗಲೇ ಈ ಯೋಜನೆಯ ಜವಾಬ್ದಾರಿ ಇವರ ಹೆಗಲೇರಿತ್ತು. ಐತಿಹಾಸಿಕ ಕಾಶಿಯ ಪುರಾತನ ಮಹತ್ವ ಮಾಸದಂತೆ ಹೊಸ ಕಳೆ ನೀಡುವ ಯೋಜನೆಗೆ ರೂಪು ರೇಷೆ ಸಿದ್ಧಪಡಿಸಿದ್ದೇ ನಿತಿನ್ ಗೋಕರ್ಣ ಹಾಗೂ ತಂಡ.
ಗೋಕರ್ಣದ ಕಂದ: ಉತ್ತರ ಭಾರತದಲ್ಲಿ ಕಾಶಿ ಎಷ್ಟು ಪ್ರಮುಖ ಸ್ಥಳವೋ ಅಷ್ಟೇ ಪ್ರಾಮುಖ್ಯತೆ ಹಾಗೂ ಐತಿಹಾಸಿಕ ಹಿನ್ನೆಲೆಯ ದಕ್ಷಿಣ ಕಾಶಿ ಖ್ಯಾತಿಯ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಿಜ್ಜೂರು ನಿತಿನ್ ಅವರ ತವರು. ಸಾರಸ್ವತ ಸಮುದಾಯದ ನಿತಿನ್ ಗೋಕರ್ಣ ಅವರ ಅಜ್ಜ ಮುಂಬೈಯಲ್ಲಿ ರೇಲ್ವೆ ಉದ್ಯೋಗಿಯಾಗಿದ್ದರು. ಹೀಗಾಗಿ 6 ದಶಕಗಳ ಹಿಂದೆಯೇ ಅವರ ಕುಟುಂಬ ಗೋಕರ್ಣದಿಂದ ಮುಂಬೈಗೆ ಸ್ಥಳಾಂತರ ಗೊಂಡಿತ್ತು. ನಿತಿನ್ ಅವರ ತಂದೆ ಸಹ ಮುಂಬೈಯಲ್ಲಿ ಉದ್ಯೋಗಿ. ಇಲ್ಲಿಯೇ ಜನಿಸಿದ್ದ ನಿತಿನ್ ಮುಂಬೈನಲ್ಲೇ ಶಿಕ್ಷಣ ಪಡೆದು ನಂತರ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾಗಿದ್ದರು. ಇವರು 1990ರ ಬ್ಯಾಚ್‌ನ ಐಎಎಸ್ ಅಧಿಕಾರಿ.ಕಳೆದ ಅನೇಕ ವರ್ಷಗಳಿಂದ ತವರಿ ನಿಂದ ಬೇರೆಡೆ ವಲಸೆ ಹೋಗಿದ್ದರೂ ಸಹ ಸಾರಸ್ವತ ಸಮುದಾಯದ ರೂಢಿಯಂತೆ ಇವರ ಕುಟುಂಬ ತಮ್ಮ ಹೆಸರಿನ ಮುಂದೆ ಇಂದಿಗೂ ಊರಿನ ಹೆಸರನ್ನೇ ಇಟ್ಟುಕೊಂಡಿದೆ.
ಮೊದಲು ಐಪಿಎಸ್ ಬಳಿಕ ಐಎಎಸ್: ಮೊದಲು ಐಪಿಎಸ್ ಓದಿದ್ದ ನಿತಿನ್ ಪೊಲೀಸ್ ವರಿಷ್ಠಾಧಿಕಾರಿ ಯಾಗಿಯೂ ಕೆಲಸ ನಿರ್ವಹಿಸಿದ್ದರು. ಮತ್ತೆ ಐಎಎಸ್ ಓದಿ ಉತೀ¤ರ್ಣರಾಗಿ ವಾರಣಾಸಿಯ ಜಿಲ್ಲಾ ಧಿಕಾರಿಯಾದರು. ಆಗಲೇ ಕಾಶಿ ಕಾರಿಡಾರ್ ಯೋಜನೆಯ ರೂಪುರೇಷೆ ಸಿದ್ಧಪಡಿಸಿದ್ದರು. ನಂತರ ನಿತಿನ್ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆ ವಹಿಸಿಕೊಂಡ ನಂತರ ಇಡೀ ಯೋಜನೆಯ ಹೊಣೆಗಾರಿಕೆ ಇವರ ಹೆಗಲೇರಿತು.
ಇದು ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯಾಗಿತ್ತು. ಇಡೀ ಯೋಜನೆ ಭಾರತದ ಸನಾತನ ಸಂಸ್ಕೃತಿಯ ಪ್ರತೀಕ ಹಾಗೂ ಅಧ್ಯಾತ್ಮದ ಸಂಕೇತವಾಗಬೇಕು. ಅಲ್ಲದೇ ಐತಿಹಾಸಿಕ ಹಿನ್ನೆಲೆಗೆ ಪೆಟ್ಟು ಬೀಳದಂತೆ ಇಡೀ ಕಾಶಿಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ಕಳೆ ನೀಡುವ ಸವಾಲನ್ನು ಸ್ವೀಕರಿಸಿದ ನಿತಿನ್ ಹಾಗೂ ಅವರ ತಂಡ ಯೋಜನೆ ರೂಪುರೇಷೆ ಸಿದ್ಧಪಡಿಸಿ ಅಗತ್ಯವಿದ್ದಲ್ಲಿ ಮಾರ್ಪಾಡು ಮಾಡಿ ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸುವಲ್ಲಿ
ಯಶಸ್ವಿಯಾಗಿದೆ.
ತವರಿನೊಂದಿಗೆ ನಂಟು: ನಿತಿನ್ ಹಾಗೂ ಕುಟುಂಬ ತವರಿನೊಂದಿಗೆ ಈಗಲೂ ನಂಟು ಹೊಂದಿದೆ. ತಮ್ಮ ಮನೆತನದ ಹಾಗೂ ಸಂಬಂಧಿಗಳ ಮನೆಯಲ್ಲಿ ಮದುವೆ ಹಾಗೂ ಶುಭಕಾರ್ಯ, ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದರೆ ನಿತಿನ್ ಗೋಕರ್ಣಕ್ಕೆ ಆಗಮಿಸುತ್ತಾರೆ. ಎರಡು ವರ್ಷದ ಹಿಂದೆ ಗೋಕರ್ಣದವರೆಲ್ಲ ಸೇರಿ ಅನಿವಾಸಿ ಗೋಕರ್ಣದವರ ಸಂಘ ರಚಿಸಿಕೊಂಡಾಗ ಅದನ್ನು ನಿತಿನ್ ಗೋಕರ್ಣ ಅವರೇ ಉದ್ಘಾಟಿಸಿದ್ದರು. ಆಗ ಗೋಕರ್ಣ ಅಭಿವೃದ್ಧಿ ಕುರಿತು ತಮ್ಮ ಕಲ್ಪನೆಯನ್ನು ವಿವರಿಸಿ, ತಮ್ಮ ಸಹಕಾರ ನೀಡುವುದಾಗಿಯೂ ತಿಳಿಸಿದ್ದರು.
ಕಾಶಿಯಂತೆ ಆದೀತೆ ಗೋಕರ್ಣ?
ನಿತಿನ್ ಅವರು ಗೋಕರ್ಣ ಕ್ಷೇತ್ರದ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದಾರೆ.ಯಾರಿಗೂ ತಿಳಿಯದ ಇಲ್ಲಿಯ ಅನೇಕ ವಿಷಯ ಅವರಿಗೆ ತಿಳಿದಿದೆ. ಹೀಗಾಗಿ ಗೋಕರ್ಣ ಕ್ಷೇತ್ರವೂ ಕಾಶಿಯಂತೆ ಹೊಸ ರೂಪ ಪಡೆಯಲಿ ಎಂಬುದು ಜನರ ಆಶಯ. ನಿತಿನ್ ಗೋಕರ್ಣ ಮತ್ತುಕಾಶಿಯ ಸಂಬಂಧ ಗೋಕರ್ಣದ ಸರ್ವತೋಮುಖ ಉದ್ಧಾರಕ್ಕೆಕಾರಣವಾಗುವಂತೆ ಪ್ರಧಾನಿಗಳ ಗಮನ ಸೆಳೆದರೆ ಜಿಲ್ಲೆಯಲ್ಲಿ ಆತ್ಮಲಿಂಗದ ಅಂಶವುಳ್ಳ ಪಂಚಕ್ಷೇತ್ರಗಳು, ಗೋಕರ್ಣದ ಪುರಾಣ ಕಾಲದ ಗಣಪತಿ ಜಗತ್ತಿನ ಗಮನ ಸೆಳೆಯಬಹುದು.
-ಜೀಯು ಹೊನ್ನಾವರ