Advertisement

ಟೇಕ್ವಾಂಡೋದಲ್ಲಿ ಮಿಂಚುತ್ತಿರುವ ಗೋಕಾಕ್‌ನ ಶ್ರೇಯಾ

03:55 AM Mar 25, 2017 | |

ಒಂದು ಗುರಿ ಸಾಧನೆಗೆ ಆಸಕ್ತಿ, ಶ್ರದ್ಧೆ, ಛಲ ಇದ್ದರೆ ಏನೆಲ್ಲಾ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಗೋಕಾಕ್‌ನ ಯುವತಿ ಶ್ರೇಯಾ ಸುನೀಲ ರಾಯಬಾಗಿ ಅವರೇ ಸಾಕ್ಷಿ. ಯುವ ಪ್ರತಿಭೆ ಶ್ರೇಯಾ ಅವರ ಯಶೋಗಾಥೆ “ದಂಗಲ್‌’ ಚಲನಚಿತ್ರದ ಕಥೆ ಹೋಲುತ್ತದೆ. ಈಕೆ ರಾಷ್ಟ್ರ ಮಟ್ಟದ ಟೇಕ್ವಾಂಡೋ ಸ್ಫರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಗೈದು ಹೆಣ್ಣು ಅಬಲೆಯಲ್ಲ ಸಬಲೆ ಎಂಬುವುದನ್ನು ತೋರಿಸಿದ್ದಾರೆ.

Advertisement

ಟೇಕ್ವಾಂಡೋ ಸ್ಫರ್ಧೆಯಲ್ಲಿ ಚಿನ್ನ ಗೆದ್ದ ಯುವತಿ ಶ್ರೇಯಾ ರಾಯಬಾಗಿ ಅವರಿಗೆ ಸ್ವತಃ ತಂದೆಯೇ ತರಬೇತುದಾರರಾಗಿ, ಮಗಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಗೋಕಾಕ ನಗರದ ಹೊಸಪೇಠ ಗಲ್ಲಿಯ ನಿವಾಸಿ ಸುನೀಲ ಮತ್ತು ಲಲಿತಾ ದಂಪತಿಯ ಮಗಳಾಗಿ ಜನಿಸಿದ ಶ್ರೇಯಾ ಬಾಲಕಿಯಾಗಿದ್ದಾಗಲೇ ಟೇಕ್ವಾಂಡೋ ಕ್ರೀಡೆಯತ್ತ ಆಕರ್ಷಿತರಾಗಿದ್ದರು. ಇದನ್ನು ಗಮನಿಸಿದ ತಂದೆ ಸ್ಫರ್ಧೆಯ ನಿಯಮ, ವಿಶಿಷ್ಟ ಭಂಗಿಗಳನ್ನು ಅಂತರ್ಜಾಲದಲ್ಲಿ ಜಾಲಾಡುತ್ತ ಮಾಹಿತಿ ನೀಡುತ್ತಾ ಹೋದರು. ಜತೆಗೆ ಟೇಕ್ವಾಂಡೋ ತರಬೇತಿ ಶಾಲೆಗೆ ಸೇರಿಸಲಾಗಿತ್ತು. ಆದರೆ ತನಗೆ ತರಬೇತುದಾರರು ಸರಿಯಾಗಿ ಟೇಕ್ವಾಂಡೋ ಹೇಳಿಕೊಡುತ್ತಿಲ್ಲ ಎಂದು ಮನನೊಂದಿದ್ದರು. ಈ ಸಮಯದಲ್ಲಿ ತಂದೆಯೇ ಗುರುವಿನ ಸ್ಥಾನದಲ್ಲಿ ನಿಂತು ತರಬೇತಿ ನೀಡಿದ್ದಾರೆ. ಇದರ ಪ್ರತಿಫ‌ಲವಾಗಿ ಇಂದು ಶ್ರೇಯಾ ರಾಷ್ಟ್ರಮಟ್ಟದ ಟೇಕ್ವಾಂಡೋ ಸ್ಫರ್ಧೆಯಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ.

4ನೇ ತರಗತಿಯಲ್ಲಿಯೇ ಟೇಕ್ವಾಂಡೋ ಆಸಕ್ತಿ
 ಶ್ರೇಯಾ ರಾಯಬಾಗಿ ಗೋಕಾಕ ನಗರದ ಎಲ್‌ಇಟಿ ಕಾಲೇಜಿನ  ದ್ವಿತೀಯ ವಿಜಾnನ ವಿಭಾಗದ ಪಿಯುಸಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. ಈಕೆ 4ನೇ ತರಗತಿ ಓದುತ್ತಿರುವಾಗ ಶಾಲೆಯಲ್ಲಿ ಟೇಕ್ವಾಂಡೋ ಪ್ರಾತ್ಯಕ್ಷಿಕೆಯಿಂದ ಆಕರ್ಷಿತರಾಗಿದ್ದರು. ಆದರೆ ಮಹಿಳೆಯರಿಗೆ ಟೇಕ್ವಾಂಡೋ ಕಲಿಕೆ ಕಷ್ಟಕರವಾದ್ದರಿಂದ ಆ ಕ್ರೀಡೆ ಕಲಿಯುವುದು ಬೇಡವೆಂದು ತಂದೆ ಅನೇಕ ಸಾರಿ ಸಲಹೆ ನೀಡಿದ್ದರು. ಆದರೂ ಪಟ್ಟು ಬಿಡದ ಶ್ರೇಯಾ ಟೇಕ್ವಾಂಡೋ ಸ್ಫರ್ಧೆಯಲ್ಲಿ ಸಾಧನೆ ಮಾಡಬೇಕು ಎಂಬ ಛಲದಿಂದ ಹಿಂದೆ ಸರಿಯಲಿಲ. ಮಗಳ ಆಸಕ್ತಿ, ಛಲ ಗಮನಿಸಿದ ತಂದೆ ಕೊನೆಗೆ ಒಪ್ಪಿಗೆ ನೀಡಿ ಬೆಳಗಾವಿಯ ಕ್ರೀಡಾ ತರಬೇತಿ ಶಾಲೆಗೆ ಸೇರಿಸಿದರು. 

 ಆದರೆ ಆಕೆಗೆ ತರಬೇತುದಾರರಿಂದ ಅಷ್ಟೊಂದು ಪೋ›ತ್ಸಾಹ ಸಿಗಲಿಲ್ಲವೆಂದು ಮನನೊಂದ ಶ್ರೇಯಾ ತನ್ನ ತಂದೆ ಬಳಿ ಅಳಲು ತೋಡಿಕೊಂಡಳು. ಆಗ ತಂದೆ ಅಂತರ್ಜಾಲದಲ್ಲಿ ಟೇಕ್ವಾಂಡೋ ಕ್ರೀಡಾ ಕಲೆಯ ಬಗ್ಗೆ ತಿಳಿದು ತರಬೇತಿಗೆ ನಿಂತರು. ಸುಮಾರು 10 ವರ್ಷಗಳಿಂದ ಮಗಳಿಗೆ ಟೇಕ್ವಾಂಡೋ ಕಲಿಸಲು ಸಮಯ ಮೀಸಲಿಟ್ಟಿದ್ದಾರೆ. 

Advertisement

ಮೊದಲಿಗೆ ರಾಜ್ಯಮಟ್ಟದ ಕಂಚಿನ ಪದಕ
ತಂದೆಯ ಸಹಾಯದಿಂದ ಕಲಿತ ಶ್ರೇಯಾ 4ನೇ ತರಗತಿ ಓದುತ್ತಿದ್ದಾಗ ಮೊದಲ ಬಾರಿಗೆ ರಾಜ್ಯ ಮಟ್ಟದ ಮುಕ್ತ ಟೇಕ್ವಾಂಡೋ ಸ್ಫರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. 5ನೇ ತರಗತಿಯಲ್ಲಿದ್ದಾಗ ರಾಜ್ಯ ಮಟ್ಟದ ಸಿಬಿಎಸ್‌ಸಿ ಟೇಕ್ವಾಂಡೋ ಸ್ಫರ್ಧೆಯಲ್ಲಿ ಬೆಳ್ಳಿ ಪದಕ, ಕೊಲಂಬಿಯಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಫರ್ಧೆಯಲ್ಲಿ ಬೆಳ್ಳಿ, ಕೇರಳದಲ್ಲಿ ನಡೆದ ಸ್ಫರ್ಧೆಯಲ್ಲಿ ಬೆಳ್ಳಿ, ಮಿರತ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಫರ್ಧೆಯಲ್ಲಿ ಚಿನ್ನದ ಪದಕ, ಚನ್ನೈನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. 

ಸಹೋದರಿ ಸಾಕ್ಷಿ ಕೂಡ ಚಿನ್ನದ ವಿಜೇತೆ
ಸದ್ಯ ಎರಡು ತಿಂಗಳಿನಿಂದ ಧಾರವಾಡದ ಸಾಯಿ ನ್ಪೋರ್ಟ್ಸ್ನಲ್ಲಿ ಶ್ರೇಯಾ ತರಬೇತಿ ಪಡೆಯುತ್ತಿದ್ದಾರೆ. ಆಕೆಯ ಸಹೋದರಿ ಸಾಕ್ಷಿ ಕೂಡ ಟೇಕ್ವಾಂಡೋ ಕ್ರೀಡಾ ಪಟುವಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಒಂದು ಚಿನ್ನ, ರಾಜ್ಯಮಟ್ಟದಲ್ಲಿ ಮೂರು ಚಿನ್ನ, ಸೌತ್‌ ಸಿಬಿಎಸ್‌ಸಿ ವಿಭಾಗದಲ್ಲಿ ಎರಡು ಚಿನ್ನ ಗೆದ್ದಿದ್ದಾರೆ.

ವಿವಿಧ ಟೂರ್ನಿಗಳಲ್ಲಿ ಚಿನ್ನ
ಶ್ರೇಯಾ ಈಗಾಗಲೇ ರಾಷ್ಟ್ರಮಟ್ಟದ ಟೇಕ್ವಾಂಡೋ (ಸಿಬಿಎಸ್‌ಸಿ) ವಿಭಾಗದ ಸ್ಫರ್ಧೆಯಲ್ಲಿ ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ. ರಾಜ್ಯ ಮಟ್ಟದ ಸ್ಫರ್ಧೆಗಳಲ್ಲಿ 5 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯ ಒಲಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಹೆಣ್ಣುಮಕ್ಕಳಿಗೆ ಟೇಕ್ವಾಂಡೋ ಕ್ರೀಡೆ ಕಷ್ಟಕರವಾದದ್ದು. ಈ ಕ್ರೀಡೆ ಕಲಿಯುವುದು ಬೇಡ ಅಂತಾ ಮೊದಲಿಗೆ ತಂದೆ ಹೇಳಿದ್ದರು. ಆದರೆ ಟೇಕ್ವಾಂಡೋ ಕ್ರೀಡೆಯಲ್ಲಿ ನಾನು ಏನಾದರೂ ಸಾಧನೆ ಮಾಡಿ ತೋರಿಸಬೇಕೆಂಬ ಛಲ ನನ್ನಲ್ಲಿ ಇತ್ತು. ಹೀಗಾಗಿ ತಂದೆಯ ಪೋ›ತ್ಸಾಹದಿಂದ ರಾಷ್ಟ್ರಮಟ್ಟದ ಟೇಕ್ವಾಂಡೋ ಕ್ರೀಡಾಪಟುವಾಗಿದ್ದೇನೆ. 
ಶ್ರೇಯಾ, ಟೇಕ್ವಾಂಡೋ ಸ್ಪರ್ಧಿ

 ಪ್ರದೀಪ ನಾಗನೂರ

Advertisement

Udayavani is now on Telegram. Click here to join our channel and stay updated with the latest news.

Next