Advertisement
1982, ಏಪ್ರಿಲ್ 17ರ ಬೆಳಗ್ಗೆ 10 ಗಂಟೆಯ ಸುಮಾರು. ಗೋಕಾಕ್ ಚಳವಳಿಗೆ, ಪ್ರಥಮ ಬಾರಿಗೆ ವರನಟ ಡಾ. ರಾಜ್‌ಕುಮಾರ್ ಪ್ರವೇಶ ಕೊಟ್ಟ ಸುವರ್ಣ ಘಳಿಗೆ ಅದು. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಕನ್ನಡಿಗರು ಕಿಕ್ಕಿರಿದಿದ್ದರು. ಶಿವರಾಮ್, ಅಂಬರೀಶ್, ಮುಸುರಿ ಕೃಷ್ಣಮೂರ್ತಿ, ಹೊನ್ನಪ್ಪ ಭಾಗವತರ್ ಸೇರಿದಂತೆ ಬಹುತೇಕ ಗಣ್ಯರ ಸಮಾಗಮ. ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ವಿಧಾನಸೌಧದವರೆಗೆ ಸಾಗಿಬಂದ ಮೆರವಣಿಗೆಯಲ್ಲಿ, ಒಬ್ಬರ ನೆರಳು ಮತ್ತೂಬ್ಬರಿಗೆ ಕಾಣಿಸುತ್ತಿರಲಿಲ್ಲ. ಅಷ್ಟು ಜನಸಂದಣಿ. ಆ ಐತಿಹಾಸಿಕ ದೃಶ್ಯ ಸೆರೆಹಿಡಿಯಲು, ಸ್ಟಿಲ್ ಫೋಟೊಗ್ರಾಫರ್‌ಗಳೇನೋ ಇದ್ದರು;
Related Articles
Advertisement
ಈಗ ಮೊಬೈಲ್‌ನಲ್ಲಿ ಸೆಕೆಂಡ್‌ಗಳೊಳಗೆ ವಿಡಿಯೊ ಶೂಟ್ ಮಾಡಿ, ಅಲ್ಲಿಯೇ ಎಡಿಟ್ ಮಾಡಿ, ತಕ್ಷಣ ಶೇರ್ ಮಾಡಿ ಬಿಡಬಹುದು. ಆದರೆ, ಹಿಂದೆ ಹೀಗಿರಲಿಲ್ಲ. ಏಪ್ರಿಲ್- ಜೂನ್, ಬೆಂಗಳೂರಿನಲ್ಲಿ ನಡೆದ ಚಳವಳಿ ಹಾಗೂ ಮೈಸೂರಿನಲ್ಲಿ ನಡೆದ ಜಾಥಾದ ಸುಮಾರು ಎರಡೂವರೆ ಗಂಟೆಯ ಫೂಟೇಜ್ ನನ್ನ ಬಳಿ ಇದೆ. ಅಂದು “ಸೂಪರ್ 8 ಮಿ.ಮೀ. ಕ್ಯಾಮೆರಾ’ದಲ್ಲಿ, ನಾಲ್ಕೈದು ನಿಮಿಷದ ವಿಡಿಯೊ ಸೆರೆ ಹಿಡಿಯಲು, 400- 500 ರೂ. ತಗುಲುತ್ತಿತ್ತು. ಆ ವಿಡಿಯೊಗಳನ್ನು ಪ್ರೊಸೆಸಿಂಗ್‌ಗಾಗಿ ಲ್ಯಾಬೊರೇಟರಿಗೆ ಕಳಿಸಬೇಕಿತ್ತು. ಆದರೆ, ಭಾರತದಲ್ಲಿ ಲ್ಯಾಬ್ ಇರಲಿಲ್ಲ. “ಕೊಡಾಕ್’ ಆದರೆ ಸಿಂಗಾಪುರವನ್ನೂ, “ಅಗಾ#’ ಆದರೆ ಜರ್ಮನಿಯನ್ನೂ ಆಶ್ರಯಿಸಬೇಕಿತ್ತು. “ಗೋಕಾಕ್’ ವಿಡಿಯೊದ ಕಾಟ್ರಿಡ್ಜ್ಗಳನ್ನು ಅಲ್ಲಿಗೆಲ್ಲ ಕಳಿಸಿದ್ದೆ.
ಆ ದೂರದ ದೇಶಗಳಿಂದ ವಿಡಿಯೊ, ನೋಡಲು ಯೋಗ್ಯ ರೂಪ ಪಡೆದು (ಫಾರ್ಮೆಟ್) ವಾಪಸು ಬರಲು, ಒಂದು ತಿಂಗಳು ಬೇಕಾಗುತ್ತಿತ್ತು. ಅಂಚೆಯ ಖರ್ಚು, ಪ್ರೊಸೆಸಿಂಗ್ ಶುಲ್ಕ ಎಲ್ಲಾ ಸೇರಿ, ಐದು ನಿಮಿಷದ ಫಿಲ್ಮ್ಗೆ ಸಾವಿರ ರೂ. ತಗುಲುತ್ತಿತ್ತು. ಎರಡೂವರೆ ಗಂಟೆಯ ರಾ ಫೂಟೇಜ್ ಈಗಲೂ ನನ್ನ ಬಳಿ ಇದೆ. ಅರ್ಧ ಗಂಟೆಯ ಪ್ರೊಸೆಸ್ಡ್ ವಿಡಿಯೊ ಈಗಾಗಲೇ ಹಲವೆಡೆ ಪ್ರದರ್ಶನ ಕಂಡಿದೆ. ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ರಾಜ್‌ಕುಮಾರ್ ಶೂಟಿಂಗ್‌ನಲ್ಲಿದ್ದಾಗ, ಅಲ್ಲಿಗೆ ಹೋಗಿ, ಚಳವಳಿಯ ವಿಡಿಯೊ ತೋರಿಸಿದ್ದೆ. ಬಹಳ ಸಂತಸಪಟ್ಟಿದ್ದರು.
ಆ ಕಾಲದಲ್ಲಿ ಸುದ್ದಿ ವಾಹಿನಿಗಳು ಇರಲಿಲ್ಲ. ಇಂಥದ್ದೊಂದು ಮಹತ್ವದ ಘಟನೆ ನಡೆಯುತ್ತಿರುವಾಗ, ಅದನ್ನು ಸೆರೆ ಹಿಡಿಯದೆ ಸುಮ್ಮನೆ ಕುಳಿತಿರಬಾರದು ಅನ್ನಿಸಿತು. ಫೋಟೊಗ್ರಫಿ ಮತ್ತು ವಿಡಿಯೊಗ್ರಫಿಯಲ್ಲಿ ಆಸಕ್ತಿ ಇದ್ದ ನಾನು, ಸುಮಾರು ಡಾಕ್ಯುಮೆಂಟರಿಗಳನ್ನು ಮಾಡಿದ್ದೇನೆ. ರಾಜೀವ್ ಗಾಂಧಿ ರಾಜಕೀಯ ಪ್ರವೇಶದ ದಿನ ನಡೆದ ರ್ಯಾಲಿ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕೆ ಇಂದಿರಾ ಗಾಂಧಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದು, ಕಳ್ಳಭಟ್ಟಿ ದುರಂತ ನಡೆದಾಗ ಅದನ್ನು ಸೆರೆ ಹಿಡಿದು, ಜಾಗೃತಿಗಾಗಿ ಮಾಡಿದ ಡಾಕ್ಯುಮೆಂಟರಿ, ವೀನಸ್ ಸರ್ಕಸ್ ದುರಂತ… ಹೀಗೆ ಐತಿಹಾಸಿಕ ಸಂತೋಷಗಳೂ, ಕರಾಳ ನೆನಪುಗಳ ಛಾಯೆಯನ್ನೂ ಸೆರೆಹಿಡಿದಿದ್ದೇನೆ.
“ಆ ಏಟು ನನಗೆ ಬೀಳಬಾರದಿತ್ತೇ?’: ಚಳವಳಿಯಲ್ಲಿ ಭಾಗವಹಿಸಿದವರಿಗೆ ಧನ್ಯವಾದ ಹೇಳಲು ಡಾ. ರಾಜ್‌ಕುಮಾರ್, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಭೆ ಆಯೋಜಿಸಿದ್ದರು. ಅದೊಂದು ಬೃಹತ್ ಸಭೆ. ಅವತ್ತೂ ಗಲಾಟೆ ಆಗಿತ್ತು. ಶಂಕರಪುರಂನಲ್ಲಿ ಸಭೆ ನೋಡಲು ಬಂದಿದ್ದ ಒಬ್ಬ ಹುಡುಗ, ಗುಂಡೇಟಿಗೆ ಬಲಿಯಾದ. ಅವತ್ತು ರಾಜ್ ತುಂಬಾ ನೊಂದಿದ್ದರು. “ಒಬ್ಬ ಮುಗ್ಧ ಯುವಕ ಪ್ರಾಣ ಕಳಕೊಂಡ. ಆ ಗುಂಡೇಟು ನನಗೇ ಬೀಳಬೇಕಿತ್ತು’ ಅಂತ ಗದ್ಗದಿತರಾಗಿದ್ದರು.
ನಿರೂಪಣೆ: ಪ್ರಿಯಾಂಕ ಎನ್.