Advertisement

10 ಎಕರೆಯಲ್ಲಿ ತಲೆ ಎತ್ತಿರುವ ಸುತ್ತೂರು ಗೋ ಶಾಲೆ

04:14 PM Jan 15, 2018 | Team Udayavani |

ನಂಜನಗೂಡು: ಪ್ರತಿ ವರ್ಷದ ಜಾತ್ರೆಯಲ್ಲೂ ಹೊಸ ಹೊಸತನ್ನು ಸಮರ್ಪಿಸುವ ಸಂಪ್ರದಾಯವನ್ನು ಪರಿಪಾಲಿಸುವ ಸೂತ್ತೂರಿನ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಈ ಬಾರಿ ಸಮಾಜಕ್ಕೆ ಗೋಶಾಲೆಯನ್ನು ನೀಡಲಿದ್ದಾರೆ. ರಾಷ್ಟ್ರಾದ್ಯಂತ ಗೋ ಹತ್ಯೆ ಹೆಚ್ಚಿರುವ ಈ ಸಮಯದಲ್ಲಿ ಭಾರತೀಯ ದೇಶಿ ಹಸುಗಳನ್ನು ರಕ್ಷಿಸಲು ಪಣ ತೊಟ್ಟಿರುವ ಶ್ರೀಗಳು 10 ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಿಸಿದ್ದು, ಈ ಬಾರಿಯ ಜಾತ್ರೆಯ ಮೂರನೇ ದಿನವಾದ ಸೋಮವಾರ ಈ ಗೋಶಾಲೆಯ ಲೋಕಾರ್ಪಣೆ ನಡೆಯಲಿದೆ.

Advertisement

ನಂಜನಗೂಡು ತಿ.ನರಸಿಪುರದ ಮುಖ್ಯ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದ ಪಕ್ಕದ 10 ಎಕರೆ ಪ್ರದೇಶದಲ್ಲಿ ಈ ಶಾಲೆ ತಲೆ ಎತ್ತಿದ್ದು, ಈಗಾಗಲೇ 50 ಕ್ಕೂ ಹೆಚ್ಚು ದೇಶಿ ಹಸುಗಳು ಶಾಲೆಯಲ್ಲಿ ಆಶ್ರಯ ಪಡೆದಿವೆ. ಸುಮಾರು 70 ಲಕ್ಷ ರೂ. ವೆಚ್ಚದ ಈ ಗೋಶಾಲೆಗಾಗಿ ಈಗಾಗಲೇ 20 ಎಕರೆ ಪ್ರದೇಶದ ಭತ್ತದ ಹುಲ್ಲನ್ನು ಶೇಖರಿಸಲಾಗಿದ್ದು, 3 ಎಕರೆ ಪ್ರದೇಶದಲ್ಲಿ ಹಸುಗಳಿಗಾಗಿ ಹಸಿರು ಹುಲ್ಲು ಬೆಳೆಸಲು ಶ್ರೀಗಳು ಆದೇಶಿಸಿದ್ದು, ಆ ಹುಲ್ಲು ಸಹ ಸಿದ್ಧವಾಗಿದೆ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಮಹೇಶ್ವರನ್‌ ಹಾಗೂ ಅರುಣ ಬಾಳಮಟ್ಟಿ. ಪ್ರಾರಂಭದಲ್ಲಿ 50 ಹಸುಗಳಿಂದ ಆರಂಭಗೊಳ್ಳುವ ಈ ದೇಶಿ ಹಸು ಸಂರಕ್ಷಣಾ ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ದೇಶಿ ತಳಿಗಳಿಗೆ ಆಶ್ರಯ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ದೇಶಿ ಹಸುಗಳ ತಳಿಯನ್ನು ಕಾಪಾಡುವ ರಾಜ್ಯ ಸರ್ಕಾರದ ಯೋಜನೆಯೊಂದಿಗೆ ಇಲ್ಲಿ ಇದು ಸಾಕಾರಗೊಳ್ಳುತ್ತಿದ್ದು ಸರ್ಕಾರ 35 ಲಕ್ಷ ರೂ. ನೀಡಿದರೆ ಶ್ರೀಮಠ ಭೂಮಿಯೊಂದಿಗೆ ತಾನೂ ಸಹ 35 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದು,
ಸದ್ಯ ನಿರ್ವಹಣಾ ಜವಾಬ್ದಾರಿಯನ್ನು ಕೃಷಿ ವಿಜ್ಞಾನ ಕೇಂದ್ರವೇ ವಹಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಅಶಕ್ತರಿಗೆ ಸಹಕಾರ: ಸೋಮವಾರ ರಾಜ್ಯದ ಗಣಿ ಸಚಿವ ವಿನಯ ಕುಲಕರ್ಣಿ ಲೋಕಾರ್ಪಣೆಗೊಳಿಸಿದ ನಂತರ ಈ ಗೋಶಾಲೆಯ ಕಾರ್ಯ ಚಟುವಟಿಕೆ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ನಾಡ ಹಸುಗಳನ್ನು ಸಾಕಲೂ ಆಗದೇ ಮಾರಾಟ ಮಾಡಲೂ ಅಗದ ಅಶಕ್ತರು ತಮ್ಮ ಗೋವುಗಳನ್ನು ಇಲ್ಲಿಗೆ ಆಶ್ರಯಕ್ಕಾಗಿ ತಂದು ಬಿಡಬಹುದು ಎನ್ನುವ ಬಾಳಮಟ್ಟಿಯವರು ಈಗಾಗಲೇ ಮಲೆನಾಡ ಗಿಡ್ಡ, ಗುಜರಾತಿನ ಗೀರ್‌ , ಹಳ್ಳಿಕಾರ್‌, ಬರಗೂರು ತಳಿಗಳು 50 ಗೋವುಗಳು ಇಲ್ಲಿ ಆಶ್ರಯ ಪಡೆಯುತ್ತಿವೆ ಎಂದರು.

ಜಾತ್ರಾ ಮಹೋತ್ಸದಿಂದಲೇ ದೇಶದ ಪರಂಪರೆ ಉಳಿವು 
ನಂಜನಗೂಡು:
ಭಾರತದ ಸಂಸ್ಕೃತಿ, ಪರಂಪರೆಗಳು ಉಳಿಯಲು ಇಂತಹ ಜಾತ್ರಾ ಮಹೋತ್ಸವಗಳೇ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ತಿಳಿಸಿದರು.

Advertisement

ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹದಲ್ಲಿ ಗಂಡು-ಹೆಣ್ಣಿಗೆ ಪ್ರತಿಜಾnವಿಧಿ ಬೋಧಿಸಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ, ಪರಂಪರೆಗಳು ಉಳಿದಿದ್ದರೆ, ಜಾತ್ರಾ ಮಹೋತ್ಸವಗಳಿಂದ. ಒಂದು ವಾರಗಳ ಕಾಲ ವೈಶಿಷ್ಟ್ಯಪೂರ್ಣವಾಗಿ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವ ಇಡೀ ನಾಡಿನಲ್ಲಿ ಸುಪ್ರಸಿದ್ಧ. ಎಲ್ಲರಿಗೂ
ಮಾರ್ಗದರ್ಶಕ. ಸಮಾಜಕ್ಕೆ ದಿಕ್ಸೂಚಿ ಇದ್ದಂತೆ. ದೇಶ -ವಿದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸುತ್ತೂರು ಮಠ ಮಾದರಿ ಕೆಲಸವನ್ನು ಮಾಡುತ್ತಿದೆ ಎಂದರು.

ಈ ಜಾತ್ರಾ ಮಹೋತ್ಸವದ ಮೂಲಕ ಲಕ್ಷಾಂತರ ಜನ ಒಂದೆಡೆ ಸೇರಿ ಧರ್ಮ ಜಾಗೃತಿಗೆ ಅವಕಾಶವಾಗಲಿದೆ. ಇಲ್ಲಿನ ಸಂದೇಶಗಳು ಇಡೀ ನಾಡಿಗೆ ಪಸರಿಸಬೇಕು ಎಂದು ಹೇಳಿದರು.

ಮನೆಕಟ್ಟಿನೋಡು-ಮದುವೆ ಮಾಡಿ ನೋಡು ಎಂಬ ಗಾದೆ ಮಾತಿನಂತೆ ಬಡ-ಮಧ್ಯಮ ವರ್ಗದವರು ಮಕ್ಕಳನ್ನು
ಮದುವೆ ಮಾಡುವುದೇ ಆರ್ಥಿಕವಾಗಿ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಶ್ರೀಮಠ ಸಾಮೂಹಿಕ ವಿವಾಹ ಮಾಡಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಇಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟವರು ಆದರ್ಶಪ್ರಾಯರಾಗಿ ಜೀವನ ನಡೆಸಿ ಎಂದು ಹಾರೈಸಿದರು. 

ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸುಕ್ಷೇತ್ರ ಹಾರಕೂಡ ಚನ್ನಬಸವೇಶ್ವರ ಮಠದ ಚನ್ನವೀರ ಶಿವಾಚಾರ್ಯ ಸ್ವಾಮಿಗಳು, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು
ಆಶೀರ್ವಚನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next