Advertisement
ಸಚಿವ ವಿನಯ್ ಕುಲಕರ್ಣಿ ಅವರ ವಿನಯ್ ಡೇರಿ ಬೆಳ್ಳಿಹಬ್ಬದಲ್ಲಿ ಪಾಲ್ಗೊಂಡು ನಂತರ ತುರ್ತು ಸಭೆ ನಡೆಸಿ ಪತ್ರಿಕಾಗೋಷ್ಠಿ ನಡೆಸಿದ ಸ್ವಾಮೀಜಿಗಳು, ಲಿಂಗಾಯತ ಸ್ವತಂತ್ರಧರ್ಮ ಆಗಬಾರದು ಎಂದು ಪಂಚ ಪೀಠಾಧೀಶರು ಪ್ರಯತ್ನ ಮಾಡುತ್ತಿದ್ದಾರೆ. ಲಿಂಗಾತಯ ಧರ್ಮ ಸ್ವತಂತ್ರ ಧರ್ಮವಾಗಲು ಪೂರಕ ದಾಖಲೆಗಳೂ ಇವೆ. 1930ರಿಂದ ಆಗಾಗ ಹೋರಾಟಗಳು ನಡೆದುಕೊಂಡೇ ಬಂದಿವೆ. ಡಿ.22ಕ್ಕೆ ಅಸ್ತಿತ್ವಕ್ಕೆ ಬಂದ ನ್ಯಾ. ನಾಗಮೋಹನ ದಾಸ್ ಸಮಿತಿಯು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸ್ಥಾನಮಾನ ಸಂಬಂಧ ದಾಖಲೆ ಸಲ್ಲಿಸಲು ಎಲ್ಲರಿಂದಲೂ ಕೇಳಿತ್ತು. ಸಂಗ್ರಹಗೊಂಡ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಇದೀಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸಮಿತಿ ನೀಡಿರುವ ವರದಿಯನ್ನು ಅಂಗೀಕರಿಸಿ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮಠಾಧೀಶರು ಒತ್ತಾಯಿಸಿದರು.
ಕಿಡಿಕಾರಿದರು. ಲಿಂಗಾಯತ ಧರ್ಮ ಜನರ ಧರ್ಮ, ಜನರಿಗೆ ಒಳ್ಳೆಯದಾಗಲಿ ಎಂಬುದು ಲಿಂಗಾಯತ ಧರ್ಮ ಹೋರಾಟದ ಆಶಯವಾಗಿದೆ. ಬೆರಳೆಣಿಕೆಯ ಪಂಚಾಚಾರ್ಯ ಮಠಾಧೀಶರ ಹೇಳಿಕೆ ಜನಹಿತಕ್ಕೆ ವಿರುದ್ಧವಾಗಿದೆ.
Related Articles
Advertisement
ಸಿಎಂ ಮೇಲಿದೆ ನಂಬಿಕೆ: ಬೈಲೂರಿನ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಮಾರ್ಚ್ 19ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾ.ನಾಗಮೋಹನ ದಾಸ್ ಅವರ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಖಂಡಿತಾ ಅಂಗೀಕರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಒಂದೊಮ್ಮೆ ಅಂಗೀಕರಿಸದಿದ್ದರೆ ಮುಂದಿನ ಹೋರಾಟದ ರೂಪರೇಷೆ ಕುರಿತಂತೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು. ಕೂಡಲಸಂಗಮದ ಬಸವಜಯ ಮೃತ್ಯುಂಜಯಸ್ವಾಮೀಜಿ ಮಾತನಾಡಿ, ಸಚಿವರಾದ ಈಶ್ವರ ಖಂಡ್ರೆ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ ಅವರು ಸ್ವತಂತ್ರ ಧರ್ಮ ಶಿಫಾರಸ್ಸಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದು ಮಾಧ್ಯಮಗಳ ಸೃಷ್ಟಿ. ಇದೀಗ ತರಳಬಾಳು ಮಠದ ಸಿರಿಗೆರೆ ಸ್ವಾಮೀಜಿ ಈ ಇಬ್ಬರೊಂದಿಗೆ ಮಾತುಕತೆ ನಡೆಸಿದ್ದಾರೆ. ನಂತರ ಅವರೂ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅಮಿತಾ ಶಾ ವಿರುದ್ಧ ಆರೋಪ: ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ|ಸಿದ್ದರಾಮ ಸ್ವಾಮೀಜಿ ಮಾತನಾಡಿ, ಜೈನ ಧರ್ಮಕ್ಕೆ ಸೇರಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜೈನ ಧರ್ಮ ಸ್ವತಂತ್ರ ಧರ್ಮವಾಗಲು ಯಾವುದೇ ಅಡ್ಡಿ ಮಾಡಲಿಲ್ಲ. ಆದರೆ ಇದೀಗ ಲಿಂಗಾಯತ ಧರ್ಮಕ್ಕೆ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹಿಂದೂ ಧರ್ಮದಿಂದ ಲಿಂಗಾಯತರನ್ನು
ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಆರ್ ಎಸ್‌ಎಸ್ ಮುಖಂಡರು ಹೇಳುತ್ತಿದ್ದಾರೆ. ಹಾಗಿದ್ದರೆ ಇವರಿಗೆ ಆಗುತ್ತಿರುವ ತೊಂದರೆಯಾದರೂ ಏನು ? ಎಂದು ಸ್ವಾಮೀಜಿ ಪ್ರಶ್ನಿಸಿದರು. ಅಲ್ಪಸಂಖ್ಯಾತರಿಗೂ ತೊಂದರೆ ಇಲ್ಲ: ಸ್ವತಂತ್ರ ಧರ್ಮ ಸ್ಥಾಪನೆಯಾದರೆ ಸಮಾಜ ಇಬ್ಭಾಗವಾಗುವ ಸಂದೇಹ ಬೇಡ. ವೀರಶೈವರೂ ಇದರ ಭಾಗವಾಗಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೇ ಅಲ್ಪಸಂಖ್ಯಾತ ಸಮುದಾಯಗಳೂ ಆತಂಕಗೊಳ್ಳುವ ಅಗತ್ಯವಿಲ್ಲ. ಅನಗತ್ಯವಾಗಿ ಅವರಲ್ಲೂ ಗೊಂದಲ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು. ಈ ಸರ್ಕಾರದ ವಿರುದ್ಧವೂ ಮತ್ತೆ ಹೋರಾಟ ಮಾ.19 ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಂದು ವೇಳೆ ಸ್ವತಂತ್ರ ಲಿಂಗಾಯತ ಧರ್ಮ ಕುರಿತು ನೀಡಿದ ವರದಿಯನ್ನು ಒಪ್ಪದೇ ಹೋದರೆ ಈ ಕುರಿತು ಹೋರಾಟ ಅನಿವಾರ್ಯವಾಗುತ್ತದೆ. ಅದು ಪ್ರತಿಭಟನೆ, ನ್ಯಾಯಾಂಗದ ಹೋರಾಟ, ಸುಪ್ರಿಂಕೋರ್ಟ್‌ವರೆಗೂ ಹೋಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡದಿದ್ದರೆ ಈ ಸರ್ಕಾರದ ವಿರುದ್ಧವೂ ಕೂಡ ಹೋರಾಟ ಮಾಡುತ್ತೇವೆ ಎಂದು ನಾಗನೂರು ಮಠದ
ಡಾ|ಸಿದ್ದರಾಮ ಸ್ವಾಮೀಜಿ ಸೇರಿದಂತೆ ಅನೇಕರು ಸರ್ಕಾರವನ್ನು ಎಚ್ಚರಿಸಿದರು. ಪ್ರತ್ಯೇಕ ಧರ್ಮ ವರದಿ ಅವೈಜ್ಞಾನಿಕ
ಸಿರವಾರ: ಲಿಂಗಾಯತ ಸ್ವತಂತ್ರ ಧರ್ಮ ಕುರಿತು ನ್ಯಾ. ನಾಗಮೋಹನ್ ದಾಸ್ ನೇತೃತ್ವದ ತಂಡ ನೀಡಿರುವ ವರದಿ ಅವೈಜ್ಞಾನಿಕ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ಹೇಳಿದರು. ಸಮೀಪದ ಬಲ್ಲಟಗಿ ಗ್ರಾಮದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಧರ್ಮವೇ ಅಲ್ಲ ಮತ್ತು ಸಿದ್ಧಾಂತ ಶಿಖಾಮಣಿ ಖೊಟ್ಟಿ ಎಂದು ತಜ್ಞರ ಸಮಿತಿ ವರದಿ ಕೊಟ್ಟಿರುವುದು ಸತ್ಯಕ್ಕೆ ದೂರವಾಗಿದ್ದು, ಇದು ಖಂಡನೀಯ. ಸರ್ಕಾರ ರಚಿಸಿರುವ ತಜ್ಞರ ತಂಡದಲ್ಲಿ ಯಾರೊಬ್ಬರಿಗೂ ವೀರಶೈವ ಧರ್ಮದ ಇತಿಹಾಸ, ಪರಂಪರೆ ಬಗ್ಗೆ ಕನಿಷ್ಠ ತಿಳಿವಳಿಕೆ ಇಲ್ಲ. ಅಂತಹ ಸಮಿತಿಯಿಂದ ನ್ಯಾಯಯುತ ವರದಿ ನಿರೀಕ್ಷೆ ಅಸಾಧ್ಯ. ಸತ್ಯ ಸಂಗತಿಗಳನ್ನು ಬದಿಗೊತ್ತಿ ಮತ್ತು ಪಂಚಪೀಠಗಳ ಬಗೆಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸುತ್ತಿರುವ ಸರ್ಕಾರವು ಮುಂದೆ ಅದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಬಸವಣ್ಣನವರೇ ವೀರಶೈವ ಧರ್ಮ ಸ್ವೀಕರಿಸಿ ವೀರಶೈವ ಲಿಂಗಾಯತ ಒಂದೇ ಮಾರ್ಗದಲ್ಲಿ ಸಮಾಜ ಸುಧಾರಣೆ ಮಾಡಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ತಕ್ಷಣ ಸರ್ಕಾರ ವರದಿಯನ್ನು ತಿರಸ್ಕರಿಸಿ ಸಮಾಜದ ಬಗ್ಗೆ ತಿಳಿದಿರುವ ತಜ್ಞರ ತಂಡ ರಚಿಸಿ ವರದಿ ಸಂಗ್ರಹಕ್ಕಾಗಿ ಅಗತ್ಯ ಕಾಲಾವಕಾಶ ನೀಡಬೇಕು ಎಂದರು.