Advertisement
ಪ್ರತಿ ವರ್ಷ ಗಣೇಶ ಉತ್ಸವದ ವೇಳೆ ಕ್ರಿಯಾಶೀಲವಾಗುವ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು, ಪಿಒಪಿ ಗಣೇಶ ಮೂರ್ತಿಗಳ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿ, ನೂರಾರು ಮೂರ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಆದರೂ, ಹಬ್ಬದ ಮರುದಿನ ಕೆರೆ, ಕಲ್ಯಾಣಿಗಳಲ್ಲಿ ಸಾವಿರಾರು ಪಿಒಪಿ ಗಣೇಶನ ಮೂರ್ತಿಗಳು ಪತ್ತೆಯಾಗುತ್ತವೆ. ಪರಿಣಾಮ ಇದುವರೆಗೆ ಸಂಪೂರ್ಣ “ಪರಿಸರ ಸ್ನೇಹಿ’ ಸಾಧ್ಯವಾಗುತ್ತಿಲ್ಲ.
Related Articles
Advertisement
ಪಿಒಪಿ ಮಾರಾಟ ತಡೆಗೆ ವಿಫಲ: ಬಿಬಿಎಂಪಿ ಪಿಒಪಿಯಿಂದ ಪರಿಸರದ ಮೇಲೆ ಉಂಟಾಗುವ ಮಾರಕಗಳ ಬಗ್ಗೆ 2016ರಲ್ಲಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸಲಾಗಿತ್ತು. 2017ರಿಂದ ಕಟ್ಟುನಿಟ್ಟಾಗಿ ನಿಷೇಧ ನಿಯಮ ಅನುಷ್ಠಾನಗೊಳಿಸಿದೆ. 2017ರಲ್ಲಿ 3.48 ಲಕ್ಷದಷ್ಟು ಮೂರ್ತಿಗಳು ವಿಸರ್ಜನೆ ಮಾಡಲಾಗಿದ್ದು, ಪ್ರತ್ಯೇಕವಾಗಿ 16,353 ಪಿಒಪಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
2018ರಲ್ಲಿ 2.50 ಲಕ್ಷದಷ್ಟು ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದು, ಇದರಲ್ಲಿ 15,800 ಪಿಒಪಿ ಮೂರ್ತಿಗಳೇ ಇವೆ. ಸ್ವತಃ ಬಿಬಿಎಂಪಿ ಕೆರೆ, ಕಲ್ಯಾಣಿ ಹಾಗೂ ಸಂಚಾರಿ ಟ್ಯಾಂಕರ್‌ಗಳಲ್ಲೇ ಈ ಮೂರ್ತಿಗಳನ್ನು ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಿತ್ತು. ಈ ಅಂಕಿ-ಅಂಶಗಳು “ಪರಿಸರ ಸ್ನೇಹಿ’ ಉತ್ಸವದ ಜನಪ್ರಿಯತೆ ನಡುವೆಯೂ ಪಿಒಪಿ ಲಾಬಿ ಇರುವುದನ್ನು ಸೂಚಿಸುತ್ತದೆ.
ಕಳೆದ ವರ್ಷಕ್ಕಿಂತ ಕಡಿಮೆ: ಈ ಬಾರಿ 500 ಪಿಒಪಿ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಬಿಎಂಪಿಯ ಎಂಜಿನಿಯರ್‌ಗಳು, ಆರೋಗ್ಯ ಅಧಿಕಾರಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮತ್ತು ಪ್ರತಿಷ್ಠಾಪನೆಗೆ ಕಡಿವಾಣ ಹಾಕಲು ಯತ್ನಿಸುತ್ತಿದೆ.
ಈ ವರ್ಷ ವಿವಿಧ ಇಲಾಖೆಗಳು ಜಂಟಿಯಾಗಿ ನಗರದ ಒಳ ಮತ್ತು ಹೊರವಲಯ ಸೇರಿದಂತೆ 26 ಕಡೆ ದಾಳಿ ನಡೆಸಲಾಗಿದ್ದು, 500 ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ವಿಜಯೇಂದ್ರ ಮಾಹಿತಿ ನೀಡಿದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಪಾಲಿಕೆಯು 853 ಪಿಒಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿತ್ತು.
ಪಿಒಪಿ ಕರಗಲು 20 ವರ್ಷ ಬೇಕು!: ನಗರದಲ್ಲಿರುವ ಕೆರೆಗಳಲ್ಲಿನ ಹೂಳೆತ್ತುವ ಕೆಲಸ ನಿಯಮಿತವಾಗಿ ನಡೆಯುತ್ತಿಲ್ಲ. ಒಂದು ಅಥವಾ ಎರಡು ದಶಕಗಳಿಗೆ ಒಮ್ಮೆ ಕೆರೆಗಳಲ್ಲಿನ ಹೂಳು ತೆಗೆಯಲಾಗುತ್ತಿದೆ. ಇನ್ನೂ ಕೆಲವು ಕೆರೆಗಳಿಗೆ ಈ ಭಾಗ್ಯವೂ ಇಲ್ಲ. ಹೀಗಾಗಿ, ಕೆರೆಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವುದರಿಂದ ಅಲ್ಲಿನ ಕೆರೆಗಳೂ ತಮ್ಮ ಸಾರ್ಮಥ್ಯವನ್ನು ಕಳೆದುಕೊಳ್ಳುತ್ತಿವೆ.
ಅಂದಹಾಗೆ ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗಲು ಕನಿಷ್ಠ 20 ವರ್ಷ ಬೇಕಾಗುತ್ತದೆ! ಕರಗಿದರೂ ಆ ನೀರು ಸೇವಿಸುವುದರಿಂದ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪಿಒಪಿ ಗಣೇಶ ಮೂರ್ತಿ ತಯಾರಿಕೆಗೆ ಬಳಸುವ ಸೀಸ ಬೇಗ ಕರಗಿದರೂ ಆ ನೀರನ್ನು ಸೇವಿಸುವ ವ್ಯಕ್ತಿ ಬುದ್ಧಿಮಾಂದ್ಯತೆ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಇದೆ. ಪಿಒಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದ ಕೆರೆಗಳು ತನ್ನ ಮೂಲಸ್ಥಿತಿಗೆ ಬರುವುದು ಕೂಡ ಕಷ್ಟ ಎನ್ನುತ್ತಾರೆ ತಜ್ಞರು.
ಅಂತರ್ಜಲವೂ ಮಲಿನ: ಕೆರೆಗಳಲ್ಲಿ ಸೀಸ, ಜಿಂಕ್‌ನಂತಹ ರಾಸಾಯನಿಕ ಪದಾರ್ಥಗಳು ಸೇರುವುದರಿಂದ ನೀರಿನ ಮಾಲಿನ್ಯದ ಜತೆಗೆ ಅಂತರ್ಜಲದ ಮಾಲಿನ್ಯವೂ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಸ್ಯಾಂಕಿ ಟ್ಯಾಂಕ್ ಗಾತ್ರದ ಕೆರೆಗಳಲ್ಲಿ ಶೇ. 10ರಷ್ಟು ನೀರು ಅಂತರ್ಜಲಕ್ಕೆ ಹೋಗುತ್ತದೆ.
ಹೀಗೆ ಹೋಗುವಾಗ ರಾಸಾಯನಿಕ ಪದಾರ್ಥಗಳನ್ನೂ ಕೊಂಡೊಯ್ಯುತ್ತದೆ. ಆಗ, ಅಂತರ್ಜಲ ಕೂಡ ವಿಷಕಾರಿಯಾಗುತ್ತದೆ. ಈಗಾಗಲೇ ನಗರದಲ್ಲಿ ಅಂತರ್ಜಲ ಮಟ್ಟ ಸಾವಿರ ಅಡಿಗಳಿಗೆ ಕುಸಿದಿರುವುದನ್ನು ಇಲ್ಲಿ ಸ್ಮರಿಸಬಹುದು. ಅಷ್ಟೇ ಅಲ್ಲ, ಕೆರೆಗಳಲ್ಲಿ ನೀರು ಹಿಡಿದಿಡುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ ಎಂದು ಪರಿಸರ ತಜ್ಞರು ತಿಳಿಸುತ್ತಾರೆ.
* ಹಿತೇಶ್ ವೈ