Advertisement

ಗೋಡ್ಸೆ ಸಮರ್ಥನೆ ಆತಂಕಕಾರಿ ಬೆಳವಣಿಗೆ

01:20 AM May 20, 2019 | Lakshmi GovindaRaj |

ಬೆಂಗಳೂರು: “ಮಹಾತ್ಮ ಗಾಂಧೀಜಿಯನ್ನು ಹತ್ಯೆಗೈದ ನಾಥೂರಾಮ್‌ ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ’ ವಿಚಾರವಾದಿ ಪ್ರೊ.ಜಿ.ಕೆ. ಗೋವಿಂದರಾವ್‌ ಕಳವಳ ವ್ಯಕ್ತಪಡಿಸಿದರು.

Advertisement

ಹಂಪಿನಗರದ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಭಾನುವಾರ ವಿಜಯನಗರ ಮತ್ತು ಗೋವಿಂದರಾಜನಗರ ನಿವಾಸಿಗಳ ವಿಶ್ವ ಮಾನವ ವೇದಿಕೆ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದೆಡೆ ಸಂವಿಧಾನ ಬದಲಾವಣೆ ಕೂಗು ಕೇಳಿಬರುತ್ತಿದೆ.

ಮತ್ತೂಂದೆಡೆ ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದೆಲ್ಲದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಕೆಲಸ ಮಾಡುತ್ತಿದೆ. ಬಹುಶಃ ಪ್ರಧಾನಿ ನರೇಂದ್ರ ಮೋದಿ, ಹೀಗೆ ಮಾತನಾಡುವಂತೆ ಪಕ್ಷದ ಸಂಸದರನ್ನು ಎತ್ತಿಕಟ್ಟುತ್ತಿದ್ದಾರೆ ಅನಿಸುತ್ತಿದೆ ಎಂದು ಅವರು ಆರೋಪಿಸಿದರು.

ಅಂಬೇಡ್ಕರ್‌ಗೆ ಸಂವಿಧಾನ ರಚಿಸಲು ಅವಕಾಶ ದೊರೆತಿದ್ದು ದೇಶದ ಪುಣ್ಯ. ಸಂವಿಧಾನ ರಚನೆ ಹಿಂದೆ ಪ್ರೇರಕ ಶಕ್ತಿಗಳಿದ್ದವು. ಹಾಗಾಗಿಯೇ ಅಂಬೇಡ್ಕರ್‌ ಚಿಂತನೆಗಳಿಗೆ ವಿವಿಧ ಆಯಾಮಗಳು ದೊರೆತವು. ಇದರಿಂದ ದಲಿತರಿಗೂ ಅವಕಾಶ ಸಿಗುವಂತಾಯಿತು. ಒಂದು ವೇಳೆ ಆ ಕಾಲದ ಮನುವಾದಿಗಳಿಗೆ ಈ ಅವಕಾಶ ಸಿಕ್ಕಿದ್ದರೆ, ದಲಿತರ ಸ್ಥಿತಿ ಅಧೋಗತಿಗೆ ತಲುಪುತ್ತಿತ್ತು ಎಂದರು.

ದಲಿತ ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಅಂಬೇಡ್ಕರ್‌ ಜಯಂತಿಯನ್ನು ಇಡೀ ಜಗತ್ತು ಆಚರಿಸುತ್ತಿದೆ. ವಿದೇಶಗಳಲ್ಲಿ ಅಂಬೇಡ್ಕರ್‌ ಜೀವನ ಸಾಧನೆ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಪರಿನಿರ್ವಾಣದ ನಂತರವಂತೂ ಅವರ ಕೀರ್ತಿ ಅಧಿಕವಾಯಿತು. ಅಲ್ಲದೆ, ಸಮಾಜಕ್ಕೆ ಒಳಿತು ಮಾಡುವವರಿಗೆಲ್ಲ ಅಂಬೇಡ್ಕರ್‌ ಸ್ಫೂರ್ತಿಯಾಗಿದರು ಎಂದು ಹೇಳಿದರು.

Advertisement

ಮಹಾತ್ಮ ಗಾಂಧಿ ನಂತರದ ಶ್ರೇಷ್ಠ ವ್ಯಕ್ತಿ ಯಾರು ಎಂಬುದನ್ನು ದೃಶ್ಯ ಮಾಧ್ಯಮವೊಂದು ಸಮೀಕ್ಷೆ ಮಾಡಿದಾಗ, ಜವಾಹರಲಾಲ್‌ ನೆಹರು ಅವರಿಗೆ ಎಂಟು ಸಾವಿರ, ಇಂದಿರಾ ಗಾಂಧಿಗೆ 19 ಸಾವಿರ ಮತಗಳು ದೊರೆತರೆ, ಡಾ.ಅಂಬೇಡ್ಕರ್‌ ಅವರಿಗೆ 19 ಲಕ್ಷ ಮತಗಳು ಬಂದವು. ಡಾ.ಅಂಬೇಡ್ಕರ್‌ ಒಂದು ಸಮುದಾಯದ ನಾಯಕರಲ್ಲ; ಎಲ್ಲ ವರ್ಗಗಳ ನಾಯಕ ಎಂಬುದನ್ನು ಇದು ಸೂಚಿಸುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next