ಉಪ್ಪಿನಂಗಡಿ : ವಿಜ್ಞಾನ ಅದೆಷ್ಟೇ ಮುಂದುವರಿದರೂ ವಿಜ್ಞಾನದ ಸಾಧನೆ – ಸಂಶೋಧನೆಗಳಲ್ಲಿ ದೇವರ ಕೃಪೆಯೂ ಪ್ರಧಾನವಾಗಿ ಗೋಚರಿಸಿದೆ. ಅಂತರಿಕ್ಷಕ್ಕೆ ಕಳುಹಿಸಿದ ಉಪಗ್ರಹ ಪೂರ್ವ ನಿಗದಿತ ರೀತಿಯಲ್ಲಿ ಕಾರ್ಯನಿರ್ವಹಿಸದೇ ಹೋದಾಗ ವಿಜ್ಞಾನಿಗಳು ದೇವರಿಗೆ ಮೊರೆ ಹೋಗಿ ಯಶಸ್ಸು ಸಾಧಿಸಿದ ಘಟನಾವಳಿಗಳು ಹಲವು ಇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು.
ಧರ್ಮಸ್ಥಳ ಕ್ಷೇತ್ರದ ಒಡೆತನದಲ್ಲಿರುವ ಇಲ್ಲಿನ ಕದಿಕ್ಕಾರು ಬೀಡು ಎಂಬಲ್ಲಿ ನೂತನವಾಗಿ ನಿರ್ಮಿಸಿದ ರಾಜನ್ ದೈವ ಕಲ್ಕುಡ, ಉಪ್ಪಿನಂಗಡಿಯ ಗ್ರಾಮ ದೈವಗಳ ಬೀಡಿನ ಪಂಜುರ್ಲಿ ದೈವಗಳ ಪುನಃಪ್ರತಿಷ್ಠೆ ಹಾಗೂ ಕಲಶಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಶಾಸ್ತ್ರ ಶೈಲಿಯಲ್ಲಿ ದೇವಾಲಯಗಳಲ್ಲಿ ದೇವತಾರಾಧನೆ ನಡೆದರೆ, ಜನಪದೀಯ ಶೈಲಿಯಲ್ಲಿ ಬಂದ ದೈವಾರಾಧಾನೆ ಮನುಷ್ಯನ ಬದುಕಿನಲ್ಲಿ ಭರವಸೆಯನ್ನು ಮೂಡಿಸುತ್ತಿದ್ದವು. ಆಪತ್ತು ಬಂದಾಗ ರಕ್ಷಣೆಗಾಗಿ ಕಾಯುವ ಶಕ್ತಿಯನ್ನು ನಂಬುವ ಕಾರ್ಯ ಅನಾದಿ ಕಾಲದಿಂದಲೂ ಬಂದಿದೆ. ವಿಜ್ಞಾನದ ಯುಗದಲ್ಲೂ ಇದು ಮುಂದುವರೆದಿದೆ. ಅಬ್ದುಲ್ ಕಲಾಂ ಅವರಂತಹ ವಿಜ್ಞಾನಿಗಳೂ ತಮ್ಮ ಸಂಶೋಧನೆಯ ಸಾಫಲ್ಯಕ್ಕಾಗಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದರು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ 50 ವರ್ಷಗಳನ್ನು ಪೂರೈಸಿದ ಡಾ| ಹೆಗ್ಗಡೆ ಅವರನ್ನು ಅಭಿನಂದಿಸಲಾಯಿತು. ಕದಿಕ್ಕಾರು ಬೀಡಿನ ಅಭಿವೃದ್ಧಿಯನ್ನು ಕೈಜೋಡಿಸಿದ ಮಹನೀಯರನ್ನು ಹೆಗ್ಗಡೆಯವರು ಸಮ್ಮಾನಿಸಿದರು. ವೇದಿಕೆಯಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ಪುತ್ತೂರು ತಾಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಗಣ್ಯರಾದ ಸಂಜೀವ ಮಠಂದೂರು, ಮಹೇಂದ್ರ ವರ್ಮ, ಸುಜಾತಾ ಕೃಷ್ಣ ಆಚಾರ್ಯ, ಕರುಣಾಕರ ಸುವರ್ಣ, ಯು. ರಾಮ, ಧನ್ಯಕುಮಾರ್ ರೈ, ಎನ್. ಉಮೇಶ್ ಶೆಣೈ, ಡಾ| ನಿರಂಜನ್ ರೈ, ರಾಮಚಂದ್ರ ಮಣಿಯಾಣಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಲಕ್ಷ್ಮಣ ಮಣಿಯಾಣಿ, ರಾಮಣ್ಣ ಗೌಡ, ರಾಜಗೋಪಾಲ ಭಟ್, ಪಾತಾಳ ವೆಂಕಟರಮಣ ಭಟ್ ಉಪಸ್ಥಿತರಿದ್ದರು.
ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ಮಿತ್ರಸೇನ ಜೈನ್ ಸ್ವಾಗತಿಸಿ, ವಂದಿಸಿದರು. ಅಭಯ್ ಜೈನ್ ಅಭಿನಂದನ ಭಾಷಣ ಮಾಡಿದರು. ಬೀಡಿನಲ್ಲಿ ದೈವಜ್ಞರಾದ ಮಂಜುನಾಥ ಭಟ್ ಅಂತರ, ವೇದಮೂರ್ತಿ ಶ್ರೀನಿವಾಸ ಬಡೆಕ್ಕಿಲ್ಲಾಯ, ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಅವರ ಭಾಗೀಧಾರಿಕೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ನೆರವೇರಿತು.
ನಂಬಿದವರಿಗೆ ಅನುಗ್ರಹ
ನಂಬಿಕೆ ಎಂದರೆ ವಿಶ್ವಾಸ, ಅಪನಂಬಿಕೆ ಎಂದರೆ ಅವಿಶ್ವಾಸ. ಮೂಡನಂಬಿಕೆ ಅತಿರೇಕದ ಭಾವನೆ ಎಂದು ವಿಶ್ಲೇಷಿಸಿದ ಅವರು, ದೇವರನ್ನು ನಂಬಿದವನಿಗೆ ದೇವರ ಅನುಗ್ರಹ ಬಂದೇ ಬರುತ್ತದೆ ಎಂದು ಪ್ರತಿಪಾದಿಸಿದರು.