ವಿಟ್ಲ: ಚೆಲ್ಲಡ್ಕ ಕುಟುಂಬದ ಸಾಮಾಜಿಕ ಕಳಕಳಿ ಮಹತ್ವ ಪೂರ್ಣವಾಗಿದೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕೈಂಕರ್ಯ ಶ್ರೇಷ್ಠವಾಗಿದೆ. ಸಾಮಾಜಿಕ ಸೇವೆಯ ಮೂಲಕ ರಾಷ್ಟ್ರ ಸದೃಢಗೊಳಿಸುವ ಕಾರ್ಯ ಶ್ರೇಷ್ಠವಾಗಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಶ್ಲಾಘಿಸಿದರು.
ಅವರು ಕೇಪು ಗ್ರಾಮದ ಚೆಲ್ಲಡ್ಕ ಕುಟುಂಬಸ್ಥರು ನೂತನವಾಗಿ ನಿರ್ಮಿಸಿದ ತರವಾಡು ಮನೆಯಲ್ಲಿ ನಾಗದೇವರ ಹಾಗೂ ಶ್ರೀ ಕಡ್ತಲೆ ಧೂಮಾವತಿ ಮತ್ತು ಅಂಗಡಿ ಧೂಮಾವತಿ, ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ನೇಮದ ಸಂದರ್ಭ ಏರ್ಪಡಿಸಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಮಿತಿ ಗೌರವಾಧ್ಯಕ್ಷ ಕುಟುಂಬದ ಹಿರಿಯರಾದ ವಿಟuಲ ಆಳ್ವ ಚೆಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ, ಗುರುರಾಜ ತಂತ್ರಿ ಕುಂಟುಕುಡೇಲು, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕರ್ನಿರೆ, ಅಧ್ಯಕ್ಷ ಬಾಳಪ್ಪ ಆಳ್ವ ಚೆಲ್ಲಡ್ಕ, ರಾಜಶೇಖರ ಚೌಟ ದೇವಸ್ಯ, ಯು.ಪಿ. ಪ್ರಕಾಶ್ ಭಾಗವಹಿಸಿದ್ದರು.
ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಧಾರ್ಮಿಕ ಉಪನ್ಯಾಸ ನೀಡಿದರು. ಇದೇ ಸಂದರ್ಭ ಡಾ| ಹಂಸರಾಜ ಆಳ್ವ ಮತ್ತು ವಿಟuಲ ಆಳ್ವ ಚೆಲ್ಲಡ್ಕ ಅವರನ್ನು ಸಮ್ಮಾನಿಸಲಾಯಿತು. ಉಪಾಧ್ಯಕ್ಷ ಸೀತಾರಾಮ ಆಳ್ವ ಚೆಲ್ಲಡ್ಕ ಮತ್ತು ಸುರೇಶ್ ಶೆಟ್ಟಿ ಪಡಿಬಾಗಿಲು ಅವರು ಸಮ್ಮಾನಿತರನ್ನು ಪರಿಚಯಿಸಿದರು.
ಕುಸುಮೋಧರ ಡಿ. ಶೆಟ್ಟಿ ಚೆಲ್ಲಡ್ಕ ದಡ್ಡಂಗಡಿ ಸ್ವಾಗತಿಸಿ, ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ದಡ್ಡಂಗಡಿ ಪ್ರಸ್ತಾವಿಸಿದರು. ಪುರುಷೋತ್ತಮ ಭಂಡಾರಿ ನಿರೂಪಿಸಿದರು. ಚಂದ್ರಹಾಸ ಆಳ್ವ ವಂದಿಸಿದರು.
ಕಲಶಾಭಿಷೇಕ, ಪುನರ್ ಪ್ರತಿಷ್ಠೆ
ಬೆಳಗ್ಗೆ ಗಣಪತಿ ಹವನ, ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ, ದೈವಸ್ಥಾನದಲ್ಲಿ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ಬೈಕಡ್ತಿ ಕಟ್ಟೆಯಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಕೊರತಿ ದೈವದ ಪ್ರತಿಷ್ಠೆ, ಕಲಶಾಭಿಷೇಕ, ಕುಪ್ಪೆ, ಪಂಜುರ್ಲಿ ದೈವದ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ನೆರವೇರಿತು.