ಪಣಜಿ: ‘ಗೋದಾವರಿ ಸಿನಿಮಾ ಇಂದು ಪ್ರಸ್ತುತ ಎನಿಸದಿರಲೂ ಬಹುದು. ಆದರೆ 2070 ರಲ್ಲಿ ಈ ಸಿನಿಮಾ ನೋಡುವಾಗ ಈಗಿನ ಸಿನಿಮಾದ ಪ್ರಾಮುಖ್ಯತೆ ತಿಳಿಯಬಹುದು’.
ಹೀಗೆ ಉತ್ತರಿಸಿದ್ದು ಮರಾಠಿ ಚಲನಚಿತ್ರ ಗೋದಾವರಿಯ ಚಿತ್ರ ನಿರ್ದೇಶಕ ನಿಖಿಲ್ ಮಹಾಜನ್. ಸಂದರ್ಭ: 52 ನೇ ಇಫಿ ಚಿತ್ರೋತ್ಸವದಲ್ಲಿ.
ಗೋದಾವರಿ ಚಲನಚಿತ್ರವು ಚಿತ್ರೋತ್ಸವದ ಅಂತಾರಾಷ್ಟ್ರೀಯ ಸಿನಿಮಾಗಳ ಸ್ಪರ್ಧೆಯಲ್ಲಿದ್ದು, ಸುವರ್ಣ ಮಯೂರ ಪ್ರಶಸ್ತಿಗೆ ಸೆಣಸುತ್ತಿದೆ.
ಗೋದಾವರಿ ನದಿಯ ಹಿನ್ನೆಲೆಯನ್ನಾಗಿಟ್ಟುಕೊಂಡೇ, ಪರಂಪರೆ, ಸಂಪ್ರದಾಯ ಮತ್ತು ಆಧುನಿಕತೆ, ಬದುಕು ಮತ್ತು ಆಯ್ಕೆಗಳು, ನಂಬಿಕೆಗಳು ಮತ್ತು ತಲೆಮಾರುಗಳು-ಇತ್ಯಾದಿ ಸಂಗತಿಗಳನ್ನು ಬಹಳ ಸೂಕ್ಷ್ಮ ನೆಲೆಯಲ್ಲಿ ಚರ್ಚಿಸುತ್ತದೆ.
ಗೋದಾವರಿಯ ಕಥಾ ನಾಯಕ ನಿಶಿಕಾಂತ್ ದೇಶ್ ಮುಖ್ (ಜಿತೇಂದ್ರ ಜೋಷಿ) ಗೋದಾವರಿಯ ತೀರದಲ್ಲೇ ತಮ್ಮ ಪಾರಂಪರಿಕ ಮನೆಯಲ್ಲಿರುವವ. ತಮ್ಮ ಸುತ್ತಲ ವಾಡೆಯ ಎಲ್ಲ ಅಂಗಡಿಗಳ ಬಾಡಿಗೆಯನ್ನು ವಸೂಲು ಮಾಡಿಕೊಂಡು ಬದುಕುತ್ತಿರುವವ. ಅವನಿಗೆ ಎದುರಿನ ಗೋದಾವರಿ, ಅದಕ್ಕೂ ಜನರಿಗೂ ಇರುವ ಭಾವನಾತ್ಮಕ ಸಂಬಂಧಗಳು, ನದಿಯ ಮೇಲಿನ ನಂಬಿಕೆಗಳು, ಅಲ್ಲಿ ನಡೆಯುವ ಧಾರ್ಮಿಕ ಕ್ರಿಯೆಗಳು-ಯಾವುದನ್ನೂ ಇಷ್ಟಪಡದವ. ಅವು ಯಾವುದರಲ್ಲೂ ನಂಬಿಕೆ ಇಲ್ಲದವ. ಇವೆಲ್ಲವೂ ಒಂದು ಬಗೆಯ ಜಂಜಡವೆಂದು ತಿಳಿದವ. ಈ ಹಿನ್ನೆಲೆಯಲ್ಲೇ ಅಜ್ಜ-ಅಪ್ಪ-ಮಗನ ನಡುವಿನ ಸಂಬಂಧಗಳೂ ಅಷ್ಟಕಷ್ಟೇ. ಎಲ್ಲಿಯವರೆಗೆ ನಿಶಿಕಾಂತ್ ನ ಇಡೀ ಪರಿಸರದ ಬಗೆಗಿನ ವರ್ಜ್ಯೃ ಇತ್ತೆಂದರೆ, ಆ ಪರಿಸರವನ್ನೇ ಬಿಟ್ಟು ಬೇರೆಲ್ಲೂ ತಾನೊಬ್ಬನೇ ಇರುತ್ತಾನೆ ಇಡೀ ಕುಟುಂಬವನ್ನು (ಅಜ್ಜ, ಅಪ್ಪ, ಅಮ್ಮ, ಪತ್ನಿ ಮತ್ತು ಮಗಳು).
ಇಡೀ ವಾಡೆಯ ಮಳಿಗೆಗಳನ್ನು ತೆರವುಗೊಳಿಸಿ ಬಿಲ್ಡರ್ ನಿಂದ ದೊಡ್ಡ ಕಟ್ಟಡ ನಿರ್ಮಿಸಲು ಒಪ್ಪುತ್ತಾನೆ. ಗೋದಾವರಿ ಕೊಳಕಾಗಿದೆ. ಇಲ್ಲಿನ ನೀರು ಕುಡಿದರೆ ರೋಗಗಳು ಬರುತ್ತವೆ ಎಂಬ ತೀರ್ಮಾನಕ್ಕೆ ಬಂದಿರುವ ನಿಶಿಕಾಂತ್ ಗೆ ಒಮ್ಮೆ ಒಬ್ಬ ಸಾಧು ‘ಗೋದಾವರಿ ನನ್ನ ಅಮ್ಮ. ಯಾವಾಗಲೂ ಅಮ್ಮ ಮೈಲಿಗೆಯಾಗಬಹುದೇ ಹೊರತು ಕೊಳಕಾಗಲಾರಳು’ ಎನ್ನುವುದು ಬದುಕಿನ ಮತ್ತೊಂದು ದಿಸೆಯಲ್ಲಿ ಯೋಚಿಸಲು ಪ್ರೇರೇಪಿಸುತ್ತದೆ. ಬ್ರೈನ್ ಟ್ಯೂಮರ್ ಸಮಸ್ಯೆ ತನ್ನಲ್ಲಿ ಪತ್ತೆಯಾದಾಗ ನಿಶಿಕಾಂತ್ ಎಲ್ಲವನ್ನೂ ತೊರೆಯುವ ನಿರ್ಧಾರಕ್ಕೆ ಬರುತ್ತಾನೆ. ಅದಕ್ಕೆ ಸಿದ್ಧತೆಯನ್ನೂ ನಡೆಸುತ್ತಾನೆ. ಅಜ್ಜ ತೀರಿಕೊಂಡಾಗ ಅವನ ಅಸ್ಥಿಯನ್ನು ವಿಸರ್ಜನೆಯ ಮಾಡುವ ಆತ ಮತ್ತೊಬ್ಬರ ನಂಬಿಕೆಗಳನ್ನು ಕೊಲ್ಲುವ ನಿರ್ಧಾರದಿಂದ ಹಿಂದಕ್ಕೆ ಬರುತ್ತಾನೆ. ಬದುಕನ್ನು ನೋಡುವ ಕ್ರಮವನ್ನು ಹೊಸದಾಗಿ ಆರಂಭಿಸಿ, ಪರಂಪರೆಯ ಸಾಗುವಿಕೆಯೊಳಗೆ ಸೇರಿಕೊಂಡು ತಾನೂ ವಾಹಕನಾಗುತ್ತಾನೆ. ಹಾಗೆಯೇ ಪರಂಪರೆ ಮತ್ತು ಕುಟುಂಬವನ್ನು ಉಳಿಸಿಕೊಳ್ಳುವ ನೆಲೆಯಲ್ಲಿ ನಿರತನಾಗುತ್ತಾನೆ.
ಚಿತ್ರದ ಕುರಿತು ಮಾತು ಮುಂದುವರಿಸಿದ ನಿಖಿಲ್, ‘ನದಿಗಳು ಜೀವಸೆಲೆ. ಅವು ನಾಗರಿಕತೆಯನ್ನು ರೂಪಿಸುವಂಥವು. ಗೋದಾವರಿ ಸಹ ಅಂಥದ್ದೇ ಒಂದು ನದಿ. ಅದು ಅತ್ಯಂತ ಪವಿತ್ರ ಮತ್ತು ಪ್ರಮುಖವಾದ ನದಿ. ಅದರಲ್ಲಿ ಒಂದು ಮಾಂತ್ರಿಕ ಶಕ್ತಿ ಇದೆ ಎಂದು ಅಸಂಖ್ಯಾತ ಜನರು ನಂಬಿದ್ದಾರೆ’ ಎಂದು ವಿವರಿಸಿದರು.
‘ಗೋದಾವರಿ ನದಿಯನ್ನೂ ವಿವರವಾಗಿ ನೋಡಿದ್ದು ಇದೇ ಮೊದಲ ಬಾರಿ. ನಿಜಕ್ಕೂ ರೋಚಕವಾದ ಅನುಭವ’ ಎಂದು ಹೇಳಿದ ನಿಖಿಲ್, ‘ನಾನು ಮತ್ತು ಜಿತೇಂದ್ರ ಜೋಷಿ ಸೇರಿ ಈ ಸಿನಿಮಾ ಮಾಡಲು ನಿರ್ಧರಿಸಿದೆವು. ಈ ಸಿನಿಮಾ ಸಿನಿಮಾಕರ್ತ ನಿಶಿಕಾಂತ್ ಕಾಮತ್ ರಿಗೆ ಅರ್ಪಿಸಲಾಗಿದೆ’ ಎಂದು ಹೇಳಿದರು.
ವ್ಯಾಂಕೋವರ್ ಸಿನಿಮೋತ್ಸವದಲ್ಲಿ ಇದು ವಿಶ್ವ ಪ್ರೀಮಿಯರ್ ಕಂಡಿತ್ತು. ಡಿಸೆಂಬರ್ ನಲ್ಲಿ ಮಹಾರಾಷ್ಟ್ರದ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಸಿನಿಮಾದ ಪ್ರಧಾನ ಪಾತ್ರದಲ್ಲಿ ಜಿತೇಂದ್ರ ಜೋಷಿ, ನೀನಾ ಕುಲಕರ್ಣಿ, ವಿಕ್ರಂ ಗೋಖಲೆ, ಗೌರಿ ನಲ್ವಾಡೆ, ಪ್ರಿಯದರ್ಶನ್ ಜಾಧವ್ ಮತ್ತಿತರಿದ್ದಾರೆ.