Advertisement

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

03:57 PM Mar 29, 2024 | Team Udayavani |

ಬಣ್ಣ ರಹಿತ ಗೋಭಿ ತಯಾರಿಸಿದರೂ ತಿನ್ನಲು ಜನ ಹಿಂದೇಟು | 200 ಪ್ಲೇಟ್‌ ಗೋಭಿ ಮಾರಾಟವಾಗುತ್ತಿದ್ದ ಜಾಗದಲ್ಲಿ 30 ಪ್ಲೇಟ್‌ಗೆ ಇಳಿಕೆ ನಿಷೇಧದ ನಂತರ ಮನೆಯಲ್ಲೇ ಚಾಟ್ಸ್‌ ತಯಾರಿಸಿ ತಿನ್ನು ವವರ ಸಂಖ್ಯೆ ಹೆಚ್ಚಳ | ಆದಾಯ ಕುಸಿದು ಬೀದಿ ಬದಿ ವ್ಯಾಪಾರಿಗಳು ಕಂಗಾಲು

Advertisement

ಬೆಂಗಳೂರು: ರಾಸಾಯನಿಕ ಪದಾರ್ಥ ಬಳಸಿ ತಯಾರಿಸುವ ಗೋಭಿ ಮಂಚೂರಿಗೆ ರಾಜ್ಯದಲ್ಲಿ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಶೇ.65 ಬೇಡಿಕೆ ಕುಸಿತವಾಗಿದ್ದು, ಇದರ ಜೊತೆಗೆ ಪಾನಿಪುರಿ ಸೇರಿ ಇತರೆ ಚಾಟ್ಸ್‌ಗಳನ್ನು ತಿನ್ನುವವರ ಸಂಖ್ಯೆ ಇಳಿಕೆಯಾಗಿದೆ.

ಗೋಭಿ ಮಂಚೂರಿ ಕೆಂಪಾಗಿ ಕಾಣಲಿ ಎಂದು ವ್ಯಾಪಕವಾಗಿ ಬಣ್ಣ ಬಳಕೆ ಹಾಗೂ ರುಚಿ ಹೆಚ್ಚಿಸಲು ರಾಸಾಯನಿಕರ ಪದಾರ್ಥಗಳು ಬಳಕೆಯಾ ಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿತ್ತು.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯಾದ್ಯಂತ 110ಕ್ಕೂ ಅಧಿಕ ಗೋಭಿ ಮಂಚೂರಿ ಸ್ಯಾಂಪಲ್‌ಗ‌ಳನ್ನು ಪರೀಕ್ಷೆ ರವಾನಿಸಿತ್ತು. ಅದರಲ್ಲಿ ಶೇ.90 ಮಾದರಿಯಲ್ಲಿ ಅಪಾಯಕಾರಿ ಸನ್‌ಸೆಟ್‌ಯಲ್ಲೋ ಹಾಗೂ ಇತರೆ ರಾಸಾಯನಿಕ ಅಂಶ ಪತ್ತೆ ಆಗಿತ್ತು. ಹೀಗಾಗಿ ರಾಜ್ಯ ಸರ್ಕಾರ 2024ರ ಮಾ.11ರಿಂದ ಗೋಭಿಯಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆಗೆ ನಿಷೇಧ ಹೇರಿತ್ತು.

ಹಳದಿಗೂ ಇಲ್ಲ ಬೇಡಿಕೆ!: ರಾಜ್ಯದಲ್ಲಿ ಕಲರ್‌ಫ‌ುಲ್‌ ಗೋಭಿ ನಿಷೇಧ ಹಿನ್ನೆಲೆಯಲ್ಲಿ ಗೋಭಿ ಮಂಜೂರಿ ತನ್ನ ಬಣ್ಣವನ್ನು ಕಳೆದುಕೊಂಡಿದೆ. ಕೆಂಪು ಬಣ್ಣದ ಗೋಭಿ ಇದೀಗ ಹಳದಿ ಬಣ್ಣದ ಗೋಭಿಯಾಗಿ ಪರಿವರ್ತನೆಯಾಗಿದೆ. ಕಳೆದ 18 ದಿನಗಳಿಂದ ಗೋಭಿ ಸೇವಿಸುವವರ ಪ್ರಮಾಣದಲ್ಲಿ ತೀವ್ರವಾಗಿ ಇಳಿಕೆಯಾಗಿದೆ. ಪ್ರತಿ ನಿತ್ಯ 6 ಸಾವಿರ ವ್ಯಾಪಾರವಾಗುತ್ತಿದ್ದ ಅಂಗಡಿಗಳಲ್ಲಿ ಇದೀಗ ಗೋಭಿಯಿಂದ ಒಂದು ಸಾವಿರ ವ್ಯಾಪಾರ ಆಗುವುದೇ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಬರೀ ಬಣ್ಣ ಕಾರಣವಲ್ಲ: ಬೇಡಿಕೆ ಕುಸಿತದ ಹಿಂದೆ ಬಣ್ಣ ಕಾರಣವೆಂಬುದು ಮೇಲ್ಮೋಟಕ್ಕೆ ಕಂಡು ಬಂದರೂ, ನಿಜವಾಗಿಯೂ ಬೇಡಿಕೆ ಕುಸಿಯಲು ಜನರಲ್ಲಿ ಆರೋಗ್ಯ ಕುರಿತು ಅರಿವು ಮೂಡಿರುವುದು ಕಾರಣ ಎನ್ನಲಾಗಿದೆ. ತಾವು ಇಷ್ಟ ಪಡುವ ಸೇವಿಸುವ ಆಹಾರದ ಮೂಲಕ ವಿಷ ದೇಹ ಪ್ರವೇಶಿಸುತ್ತಿದೆ ಎನ್ನುವ ವಿಚಾರ ಮನವರಿಕೆಯಾಗಿ ಗ್ರಾಹಕರು ಗೋಭಿಯಿಂದ ಅಂತರ ಕಾಯ್ದಗೊಂಡಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ತಾವೇ ಮನೆಯಲ್ಲಿ ಗೋಭಿ ತಯಾರಿಸಿ, ತಿನ್ನುತ್ತಿರುವುದು ಸಹ ಒಂದು ಕಾರಣ ಎನ್ನಲಾಗುತ್ತಿದೆ.

ಇತರೆ ಚಾಟ್ಸ್‌ ಮೇಲೂ ಪರಿಣಾಮ: ಗೋಭಿ ಬೆನ್ನಲ್ಲೇ ನೂಡಲ್ಸ್‌, ಪಾನಿಪುರಿ, ಮಸಾಲ ಪುರಿ ತಿನ್ನುವವರ ಸಂಖ್ಯೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಿಂದೆಲ್ಲ ಗುಂಪು ಗುಂಪಾಗಿ ಪಾನಿಪುರಿ ಸೇವಿಸುವ ಕಡೆಯಲ್ಲಿ ಬೆರಳಣಿಕೆ ಜನರು ನಿಂತಿರುವ ದೃಶ್ಯ ಈಗ ಕಂಡು ಬರುತ್ತಿದೆ. ಇದಕ್ಕೆ ಬೇಸಿಗೆ ಪ್ರಮುಖ ಕಾರಣವಾಗಿದ್ದರೂ ಈ ರೀತಿಯ ತಿನಿಸುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಸಹ ಮತ್ತೂಂದು ಕಾರಣ.

ವಾರಕ್ಕೆ ಮೂರು ಬಾರಿಯಾದರೂ ಗೋಭಿ ಸೇವಿಸುತ್ತಿದ್ದೆ. ಗೋಭಿಯಲ್ಲಿ ವಿಷಕಾರಿ ರಾಸಾಯನಿಕ ಪದಾರ್ಥಗಳು ಬಳಕೆಯಾಗುತ್ತದೆ ಎನ್ನುವ ವಿಚಾರ ಗೊತ್ತಾದ ಮೇಲೆ ಬೀದಿ ಬದಿಯ ಗೋಭಿ ಸೇವನೆ ನಿಲ್ಲಿಸಿದ್ದೇನೆ. ಮನೆಯಲ್ಲಿ ತಯಾರಿಸಿ ಸೇವನೆ ಮಾಡುತ್ತಿದ್ದೇನೆ. ● ಪಿ.ಎನ್‌.ಸರಸ್ವತಿ, ಗಿರಿನಗರ ನಿವಾಸಿ, ಬೆಂಗಳೂರು.

ಬಣ್ಣ ರಹಿತ ಗೋಭಿ ತಯಾರಿಸಿದರೂ ಸೇವಿಸುವವರ ಪ್ರಮಾಣ ಭಾರೀ ಕಡಿಮೆಯಾಗಿದೆ. ಹಿಂದೆ ರಾತ್ರಿ 8 ಗಂಟೆಯೊಳಗೆ 200 ಪ್ಲೇಟ್‌ ಗೋಭಿ ಖಾಲಿಯಾಗುತ್ತಿತ್ತು. ಆದರೆ, ಇದೀಗ ನಿತ್ಯ ಒಂದು 30 ಪ್ಲೇಟ್‌ ಗೋಭಿ ಮಾರಾಟವಾಗುವುದೇ ಕಷ್ಟವಾಗಿದೆ. ಬಣ್ಣವಿಲ್ಲದಿದ್ದರೂ ರುಚಿಯಲ್ಲಿ ಬದಲಾವಣೆಯಿಲ್ಲ. ಆದರೂ, ಜನರು ಹಿಂದೇಟು ಹಾಕುತ್ತಾರೆ. ●ಮಂಜುನಾಥ ಬಡಿಗೇರ್‌, ಗೋಬಿಮಂಚೂರಿ ವ್ಯಾಪಾರಿ.

Advertisement

Udayavani is now on Telegram. Click here to join our channel and stay updated with the latest news.

Next