Advertisement

Gobi Manchurian: ಗೋಬಿ ಮಂಚೂರಿಗೂ ನಿಷೇಧದ ಕರಿನೆರಳು?

02:25 PM Feb 23, 2024 | Kavyashree |

ಬೆಂಗಳೂರು: ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ಅಂಶಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬಾಂಬೆ ಮಿಠಾಯಿ ಮಾದರಿಗಳ ಪರೀಕ್ಷೆಗೆ ಕಳುಹಿಸಿರುವ ಬೆನ್ನಲ್ಲೇ ಗೋಬಿ ಮಂಚೂರಿಯ ಮಾದರಿಗಳನ್ನೂ ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

Advertisement

ಸಾಮಾನ್ಯವಾಗಿ ಯಾವುದೇ ಒಂದು ಆಹಾರ ಪದಾರ್ಥಗಳನ್ನು ತಯಾರಿಸುವ ಆಹಾರ ಸ್ವಾಸ್ಥ್ಯ ಮಾನದಂಡ ಅನುಸರಿಸಬೇಕು.

ಪ್ರಸ್ತುತ ಹೆಚ್ಚಿನ ಕಡೆಯಲ್ಲಿ ಖಾದ್ಯದ ಚೆಂದ ಹಾಗೂ ರುಚಿ ಹೆಚ್ಚಿಸಿ ಲಾಭಗಳಿಸಲು ರಾಸಾಯನಿಕ ಪದಾರ್ಥ ಬಳಕೆ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇಂತಹ ರಾಸಾಯನಿಕ ಪದಾರ್ಥಗಳು ಅಧಿಕ ಬಳಕೆ ಮಾಡುವ ಆಹಾರಪಟ್ಟಿಯಲ್ಲಿ ಇದೀಗ ಗೋಬಿ ಮಂಚೂರಿ ಸೇರ್ಪಡೆಯಾಗಿದೆ.

ಗೋವಾದಲ್ಲಿ ಬ್ಯಾನ್‌ ಏಕೆ?: ಗೋವಾದ ಮಾಪುಸಾ ನಗರದಲ್ಲಿ ಗೋಬಿ ಮಂಚೂರಿ ತಯಾರಿಕೆಗೆ ಬಳಸುವ ಕೃತಕ ಬಣ್ಣ ಹಾಗೂ ಕಳಪೆ ಗುಣಮಟ್ಟದ ಸಾಸ್‌ನಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಹಾಗೂ ಶುಚಿತ್ವ, ನೈರ್ಮಲ್ಯ ಬಗ್ಗೆ ದೂರುಗಳು ದಾಖಲಾಗಿದ್ದವು.

ಈ ಬಗ್ಗೆ ಅಲ್ಲಿನ ಆಹಾರ ಸುರಕ್ಷತಾ ಇಲಾಖೆಯು ಹಲವು ಕಡೆ ದಾಳಿ ನಡೆಸಿ ನೋಟಿಸ್‌ ನೀಡಿದರೂ ಯಾರೊಬ್ಬರು ತಲೆ ಕಡೆಸಿಕೊಂಡಿರಲಿಲ್ಲ. ಯಾರೂ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಇದೀಗ ಗೋಬಿ ಮಂಚೂರಿಯನ್‌ ನಿಷೇಧಿಸಿದೆ.

Advertisement

ಕರ್ನಾಟಕಕ್ಕೆ ಬೇಕಿದೆ ಬ್ಯಾನ್‌!: ರಾಜ್ಯದಲ್ಲಿ ಒಂದು ಬೀದಿಗೆ ಕನಿಷ್ಠವೆಂದರೂ ಎರಡು ಚೈನಿಸ್‌ ಸೆಂಟರ್‌ ಗಳಿವೆ. ಅಲ್ಲಿ ತಯಾರಿಸುವ ಆಹಾರಗಳಿಗೆ ಬಳಕೆ ಮಾಡುವ ಸಾಸ್‌, ಕೃತಕ ಬಣ್ಣ ನೀಡಲು ಬಳಸುವ ಬಣ್ಣಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಗಳು ಗಮನ ಹರಿಸಬೇಕಾಗಿದೆ. ನಗರ ಸೇರಿ ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಗೋಬಿ ಮಂಚೂರಿ ತಯಾರಿಸಲು ಕಳಪೆ ಗುಣಮಟ್ಟದ ಸಾಸ್‌ ಹಾಗೂ ಸಿಂಥೆಟಿಕ್‌ ಬಣ್ಣ ಬಳಸುತ್ತಿರುವುದರಿಂದ ಗ್ರಾಹಕರ ಆರೋಗ್ಯದ ಮೇಲೆ ಭಾರಿ ದುಷ್ಪಾರಿಣಾಮ ಬೀರುತ್ತಿದೆ.

ಜತೆಗೆ ಸ್ವತ್ಛತೆಯ ಬಗ್ಗೆ ಕೆಲವೆಡೆ ಮಾತನಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗೋಬಿ ಮಂಚೂರಿ ತಯಾರಿಸುವ ಸೆಂಟರ್‌ಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಒಂದು ವೇಳೆ ಆರೋಗ್ಯಕ್ಕೆ ಹಾನಿಕಾರಕ ಪದಾರ್ಥ ಬಳಕೆಯಾಗುವುದು ವರದಿಯಾದರೆ ಗೋವಾದ ಮಾಪುಸಾ ನಗರದಂತೆ ಕರ್ನಾಟಕದಲ್ಲಿಯೂ ಗೋಬಿ ಬ್ಯಾನ್‌ ಮಾಡುವಂತೆ ಕೂಗುಗಳು ಕೇಳಿ ಬರುತ್ತಿದೆ.

ಕಣ್ಣಾಮುಚ್ಚಾಲೆ ಆಟಕ್ಕೆ ಕಡಿವಾಣ: ಸಾಮಾನ್ಯವಾಗಿ ಗೋಬಿ ಮಂಚೂರಿ ತಯಾರಿಸುವ ಕಡೆಯಲ್ಲಿ ಪ್ರದರ್ಶನಕ್ಕೆ ಗುಣಮಟ್ಟದ ಸಾಸ್‌ಗಳನ್ನು ಪ್ರದರ್ಶನಕ್ಕೆ ಇಡುತ್ತಾರೆ. ಇಲ್ಲವೇ ಗುಣಮಟ್ಟದ ಸಾಸ್‌ ಬಾಟಲಿಗೆ ಕಳಪೆ ಗುಣಮಟ್ಟದ ಸಾಸ್‌ ತುಂಬಿಸಿ ಗ್ರಾಹಕರಿಗೆ ವಂಚಿಸುತ್ತಿದ್ದಾರೆ.

ತಯಾರಿಕೆಗೆ ಬಳಸುವ ಹಿಟ್ಟಿನಲ್ಲಿ ರುಚಿ ಹೆಚ್ಚಿಸುವ ರಾಸಾಯನಿಕ ಪದಾರ್ಥ ಹಾಗೂ ಜೋಳದ ಪಿಷ್ಟಯನ್ನು ಸಹ ಬಳಕೆ ಮಾಡುತ್ತಾರೆ. ಇದರಿಂದಾಗಿ ಆಳವಾಗಿ ಹುರಿದ ಬಳಿಕವೂ ಹೂ ಕೋಸ್‌ ದೀರ್ಘ‌ಕಾಲದವರೆಗೆ ಗರಿಗರಿಯಾಗಿ ರುತ್ತವೆ ಎಂದು ಗ್ರಾಹಕರು ದೂರಿದ್ದಾರೆ.

ಮೈದಾ, ಚೈನೀಸ್‌ ಸಾಸ್‌, ಸಕ್ಕರೆ ಮಟ್ಟ ಹೆಚ್ಚಿಸುತ್ತೆ

ಗೋಬಿ ಮಂಚೂರಿ ತಯಾರಿಕೆಗೆ ಬಳಸುವ ಮೈದಾ, ಚೈನೀಸ್‌ ಸಾಸ್‌ಗಳಿಂದ ಮನುಷ್ಯನ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ದೇಹದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸಿ, ಅಧಿಕ ರಕ್ತದೊತ್ತಡ, ತೂಕ ಹೆಚ್ಚಳಕ್ಕೆ ಕಾರಣವಾಗಲಿದೆ. ದೀರ್ಘಾವಧಿಯಲ್ಲಿ ಇದು ಮೂತ್ರಪಿಂಡದ ಸಮಸ್ಯೆಗಳು ಮತ್ತು ಹೃದಯರಕ್ತನಾಳದ ಬ್ಲಾಕ್‌ಗೆ ಕಾರಣವಾಗಬಹುದು. ಇನ್ನು ಕೆಲವರಿಗೆ ಅಲರ್ಜಿ, ಮಲಬದ್ಧತೆಯಿಂದ ಬಳಲು ಸಾಧ್ಯಗಳಿವೆ. ಅತಿಯಾದ ರಾಸಾಯನಿಕ ಪದಾರ್ಥಗಳ ಬಳಕೆ ಕ್ಯಾನ್ಸರ್‌ಗೂ ಕಾರಣವಾಗಲಿದೆ ಎನ್ನುತ್ತಾರೆ ವೈದ್ಯರು.

ಆರೋಗ್ಯಕ್ಕೆ ಹಾನಿ ಉಂಟು ಮಾಡುವ ರಾಸಾಯನಿಕಗಳನ್ನು ವಿಪರೀತ ಬಳಸಲಾಗುತ್ತಿದೆ ಎಂಬ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ●ಡಿ.ರಂದೀಪ್‌, ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

-ಉದಯವಾಣಿ ಸಮಾಚಾರ

Advertisement

Udayavani is now on Telegram. Click here to join our channel and stay updated with the latest news.

Next