ದುಬೈ : 20 ಕೋಟಿ ಡಾಲರ್ ಎಕ್ಸೆನ್‌ಶಿಯಲ್ ಹಗರಣದಲ್ಲಿ ದುಬೈ ನ್ಯಾಯಾಲಯ ಗೋವೆಯ 37ರ ಹರೆಯದ ಸಿಡ್ನಿ ಲಿಮೋಸ್ ಮತ್ತು ಆತನ ಹಿರಿಯ ಲೆಕ್ಕ ಪತ್ರ ಪರಿಣತ ರಯಾನ್ ಡಿ’ಸೋಜಾ ಗೆ 500 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಸಿಡ್ನಿ ಲಿಮೋಸ್ ಕೆಲ ಸಮಯದ ಹಿಂದಷ್ಟೇ ವಿಶ್ವ ಫುಟ್ಬಾಲ್‌ನ ಯಾರು ? ಏನು ? ಮಾಹಿತಿ ಕೈಪಿಡಿಗೆ ಸೇರ್ಪಡೆಗೊಂಡಿದ್ದ. ವಿಶ್ವದ ಅನೇಕ ಕ್ರೀಡಾ ಪಟುಗಳೊಂದಿಗೆ ಈತ ನಂಟು ಹೊಂದಿದ್ದ.
ಲಿಮೋಸ್ ಮತ್ತು ರಯಾನ್ ಡಿ’ಸೋಜಾ (25) ಸೇರಿಕೊಂಡು ತಮ್ಮ ಎಕ್ಸೆನ್‌ಶಿಯಲ್ ಸಂಸ್ಥೆಯ ಪೋಂಜಿ ಸ್ಕೀಮ್ ಮೂಲಕ ಸಹಸ್ರಾರು ಹೂಡಿಕೆದಾರರಿಗೆ ವರ್ಷಕ್ಕೆ ಶೇ.120ರ ಲಾಭವನ್ನು ನೀಡುವುದಾಗಿ ಹೇಳಿ ವಂಚನೆ ಎಸಗಿದ್ದಾರೆ. 25,000 ಡಾಲರ್‌ಗಳನ್ನು ತನ್ನ ಎಕ್ಸೆನ್‌ಶಿಯಲ್ ಕಂಪೆನಿಯಲ್ಲಿ ಹೂಡುವವರಿಗೆ ಅತ್ಯಾಕರ್ಷಕ ಲಾಭಾಂಶ ನೀಡುವ ಭರವಸೆಯನ್ನು ಲಿಮೋಸ್ ನೀಡಿದ್ದ.
ಲಿಮೋಸ್ ನ ಕಂಪೆನಿ ಆರಂಭದಲ್ಲಿ ತನ್ನ ಹೂಡಿಕೆದಾರರಿಗೆ ಲಾಭಾಂಶವನ್ನು ಕೊಡುತ್ತಿತ್ತು. ಆದರೆ 2016ರಲ್ಲಿ ಲಿಮೋಸ್‌ನ ಕಂಪೆನಿ ಕುಸಿದ ಬಳಿಕ ಹೂಡಿಕೆದಾರರಿಗೆ ಲಾಭಾಂಶ ಕೊಡುವುದನ್ನು ನಿಲ್ಲಿಸಿತ್ತು. 2016ರಲ್ಲಿ ದುಬೈನ ಆರ್ಥಿಕ ಇಲಾಖೆ ಲಿಮೋಸ್ ನ ಕಂಪೆನಿಯನ್ನು ಬಂದ್ ಮಾಡಿತು.
ದುಬೈನ ಆರ್ಥಿಕ ಇಲಾಖೆ ಲಿಮೋಸ್‌ನ ಹೆಂಡತಿ ವೆಲಾನಿ ಕಾರ್ಡೊಜ್ ವಿರುದ್ದವೂ ಕೇಸು ದಾಖಲಿಸಿದೆ. ಆಕೆ ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮುಚ್ಚಲ್ಪಟ್ಟ ಲಿಮೋಸ್‌ನ ಕಂಪೆನಿಯನ್ನು ಅಕ್ರಮವಾಗಿ ಪ್ರವೇಶಿಸಿ ಅಲ್ಲಿದ್ದ ದಾಖಲೆಪತ್ರಗಳನ್ನು ಸಾಗಿಸಿದ್ದಳು.